ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಫೋಟ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸುಡುಮದ್ದು ತಯಾರಿಕಾ ಘಟಕ ಅಮಾನತು

ಘಟಕಗಳ ಪರಿಶೀಲನೆಗೆ ಎ.ಸಿ ನೇತೃತ್ವದಲ್ಲಿ ಸಮಿತಿ ರಚಿಸಿದ ಜಿಲ್ಲಾಧಿಕಾರಿ
Published 29 ಜನವರಿ 2024, 17:38 IST
Last Updated 29 ಜನವರಿ 2024, 17:38 IST
ಅಕ್ಷರ ಗಾತ್ರ

ಮಂಗಳೂರು: ಕುಕ್ಕೇಡಿ ಗ್ರಾಮದ ಕುಡ್ತ್ಯಾರುವಿನಲ್ಲಿ ಪಟಾಕಿ ತಯಾರಿ ಘಟಕದಲ್ಲಿ ಸ್ಫೋಟ ಸಂಭವಿಸಿ ಮೂವರು ಕಾರ್ಮಿಕರು ಭಾನುವಾರ ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಎಲ್ಲ ಸುಡುಮದ್ದು ತಯಾರಿಕಾ ಘಟಕಗಳನ್ನು ಅಮಾನತಿನಲ್ಲಿರಿಸಿದೆ.

‘ಜಿಲ್ಲೆಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿರ್ಬಂಧಿಸಿ, ಮುಂದಿನ ಆದೇಶದವರೆಗೆ ಅಮಾನತಿನಲ್ಲಿರಿಸಲಾಗಿದೆ. ಜಿಲ್ಲೆಯ ಉಪವಿಭಾಗಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು’ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

2008ರ ಸ್ಫೋಟಕ ಕಾಯ್ದೆಯ ನಿಯಮ 40ರಡಿ ನೀಡಲಾದ ಅಧಿಕಾರ ಬಳಸಿ ಈ ಕ್ರಮ ಕೈಗೊಂಡಿರುವ ಅವರು, ‘ಸುಡುಮದ್ದು ತಯಾರಿಸುವಾಗ ಬೆಂಕಿ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸುವ ಅವಶ್ಯಕತೆ ಇದೆ. ಈ ಸಲುವಾಗಿ ಸುಪ್ರೀಂ ಕೋರ್ಟ್‌ ಆದೇಶ, ಸರ್ಕಾರದ ನಿರ್ದೇಶನ ಹಾಗೂ ಮಾರ್ಗಸೂಚಿಗಳ ಪಾಲನೆ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ‘ ಎಂದು ತಿಳಿಸಿದ್ದಾರೆ.

1984ರ ಸ್ಫೋಟಕಗಳ ಕಾಯ್ದೆ ಮತ್ತು 2008ರ ಸ್ಟೋಟಕಗಳ ನಿಯಮಗಳ ಅನುಸಾರ ಸುಡುಮದ್ದು ತಯಾರಿ, ದಾಸ್ತಾನು ಹಾಗೂ ಮಾರಾಟ ಮಳಿಗೆಗಳಿಗೆ ಜಿಲ್ಲಾಡಳಿತ ನಮೂನೆ ಎಲ್‌ಇ–5 ಪ್ರಕಾರ ಪರವಾನಗಿ ನೀಡಿದೆ. ಪರವಾನಗಿ ಪಡೆದ ಘಟಕಗಳು ಸುಪ್ರೀಂ ಕೋರ್ಟ್‌ನ ಆದೇಶ ಮತ್ತು ಸರ್ಕಾರದ ನಿರ್ದೇಶನ ಮತ್ತು ಮಾರ್ಗಸೂಚಿಗಳ ಪ್ರಕಾರ ಹಸಿರು ಪಟಾಕಿಗಳನ್ನು ಮಾತ್ರ ತಯಾರಿಸಲು ಹಾಗೂ ಮಾರಾಟ ಮಾಡಲು ಅವಕಾಶ ಇದೆ. ಇದರ ಮೇಲ್ವಿಚಾರಣೆ ಮಾಡಲು ಹಾಗೂ ಅನಧಿಕೃತವಾಗಿ ಪಟಾಕಿ ವ್ಯವಹಾರ ನಡೆಸುವುದನ್ನು ನಿಯಂತ್ರಿಸಲು ಪಟಾಕಿ ತಯಾರಿ, ದಾಸ್ತಾನು ಮತ್ತು ಮಾರಾಟದ ಸಂದರ್ಭದಲ್ಲಿ ಅಗ್ನಿ ಅನಾಹುತ ಸಂಭವಿಸುವುದನ್ನು ತಡೆಯಲು ಜಿಲ್ಲಾಡಳಿತವು ಆಯಾ ಉಪವಿಭಾಗಾಧಿಕಾರಿ (ಪುತ್ತೂರು/ಮಂಗಳೂರು) ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ.

ಬಂಟ್ವಾಳ ಮತ್ತು ಪುತ್ತೂರು ಉಪವಿಭಾಗದ ಡಿಎಸ್‌ಪಿ, ವಲಯದ ಅಗ್ನಿಶಾಮಕ ಅಧಿಕಾರಿ, ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್‌, ಆಯಾ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಹಣಾಧಿಕಾರಿಯವರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಯವರು ಈ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಗಳು ಜ.30ರಿಂದ ಫೆ 5ರ ಒಳಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ಪೂರಕ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ಸೂಚಿಸಿದ್ದಾರೆ.

ಸಮಿತಿಯು ತನ್ನ ವ್ಯಾಪ್ತಿಯ ಎಲ್ಲ ಸುಡುಮದ್ದು ಘಟಕಗಳನ್ನು ಸೀಲ್‌ಡೌನ್‌ ಮಾಡಬೇಕು. ಸುಡುಮದ್ದು ತಯಾರಿಸುವ, ದಾಸ್ತಾನು ಮಾಡುವ ಹಾಗೂ ಮಾರಾಟ ಮಾಡುವ ಎಲ್ಲ ಘಟಕಗಳನ್ನು ಪರಿಶೀಲಿಸಬೇಕು. ಪರಿಶೀಲನೆ ಸಂದರ್ಭ ಜಿಪಿಎಸ್‌ ಆಧರಿತ ಫೋಟೊದ ಜೊತೆ ವರದಿ ನೀಡಬೇಕು. ನಮೂನೆ ಎಲ್‌ಇ–5 ಅಡಿ ಪಡೆದ ಪರವಾನಗಿಗಳನ್ನು, ಅಗ್ನಿಶಾಮಕ ಇಲಾಖೆಯಿಂದ ಪಡೆದ ನಿರಾಕ್ಷೇಪಣಾ ಪತ್ರ ಹಾಗೂ ಅವುಗಳ ವಾಯಿದೆಯನ್ನು, ಘಟಕಗಳಲ್ಲಿ ಅಗ್ನಿಶಾಮಕ ವ್ಯವಸ್ಥೆ ಹೊಂದಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಹಸಿರು ಪಟಾಕಿ ಉತ್ಪಾದಕರು ಅಧಿಕೃತ ಉತ್ಪಾದಕರಿಂದ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿವೆಯೇ ಎಂದು ಪರಿಶೀಲಿಸಬೇಕು ಎಂದೂ ಜಿಲ್ಲಾಧಿಕಾರಿ ಹೇಳಿದ್ದಾರೆ

ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಪಡೆದ ನಿರಾಕ್ಷೇಪಣಾ ಪತ್ರಗಳನ್ನು ಹಾಜರುಪಡಿಸಿದ ಬಳಿಕವಷ್ಟೇ ಈ ಘಟಕಗಳ ಕಾರ್ಯಾರಂಭದ ಬಗ್ಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಕಚೇರಿಗೆ ಶಿಫಾರಸು ಸಲ್ಲಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT