ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ತನಿಖಾ ತಂಡದಿಂದ ತನಿಖೆಗೆ ಉದ್ಯಮಿ ಬಿ.ಆರ್‌.ಶೆಟ್ಟಿ ಒತ್ತಾಯ

ಉದ್ಯಮಿ ಎಂ.ಆರ್‌.ಕಾಮತ್‌ ನಿಗೂಢ ಸಾವು
Published 8 ಅಕ್ಟೋಬರ್ 2023, 16:10 IST
Last Updated 8 ಅಕ್ಟೋಬರ್ 2023, 16:10 IST
ಅಕ್ಷರ ಗಾತ್ರ

ಮಂಗಳೂರು: 'ಇಲ್ಲಿನ ಉದ್ಯಮಿ ಮುಂಡ್ಕೂರು ರಾಮದಾಸ್‌ ಕಾಮತ್‌ (ಎಂ.ಆರ್‌.ಕಾಮತ್‌) ಅವರು ಈಚೆಗೆ ಅಸಹಜ ರೀತಿಯಲ್ಲಿ ಸಾವಿಗೀಡಾಗಿದ್ದು, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಈ ಪ್ರಕರಣದ ನಿಜಾಂಶವನ್ನು ಬಯಲಿಗೆಳೆಯಲು ವಿಶೇಷ ತನಿಖಾ ತಂಡ ರಚಿಸಬೇಕು' ಎಂದು ಒತ್ತಾಯಿಸಿ ಉದ್ಯಮಿ ಬಿ.ಆರ್‌.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆ ಮೂಲಕ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಪತ್ರ ಬರೆದಿದ್ದಾರೆ.

ಎಂ.ಆರ್‌. ಕಾಮತ್‌ ಅವರು ಈಚಿನ ಮೂರು ತಿಂಗಳಿನಿಂದ ಯಾರ ಜೊತೆಗೆಲ್ಲ ಸಂಪರ್ಕದಲ್ಲಿದ್ದರೋ ಅವರನ್ನೆಲ್ಲ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಿ.ಆರ್‌.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆ ಕಾಮತ್‌ ಜ್ಯೂರಿಸ್‌ ಮೂಲಕ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಬರೆದ ಪತ್ರದ ಪ್ರತಿ ’ಪ್ರಜಾವಾಣಿ‘ಗೆ ಲಭ್ಯವಾಗಿದೆ. ಪತ್ರ ತಲುಪಿರುವುದನ್ನು ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಖಚಿತಪಡಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕರಿಗೂ ಅವರು ಪತ್ರದ ಪ್ರತಿಯನ್ನು ಕಳುಹಿಸಿದ್ದಾರೆ.

‘ನಮ್ಮ ಕಕ್ಷಿದಾರರಾದ ಬಿ.ಆರ್‌.ಶೆಟ್ಟಿ ಅವರು ಯುಎಇಯ ದುಬೈನಲ್ಲಿ ಉದ್ಯಮಿಯಾಗಿದ್ದಾಗ ಎಂ.ಆರ್‌.ಕಾಮತ್‌ ಜೊತೆ ಸಂಸ್ಥೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದರು. ಕಷ್ಟಪಟ್ಟು ಗಳಿಸಿದ ಹಣವನ್ನು ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿದ್ದ ಎಂ.ಆರ್‌.ಕಾಮತ್‌ ಅವರು ಕೋಟ್ಯಧಿಪತಿಯಾಗಿದ್ದರು. ಕೆಲ ವರ್ಷಗಳ ಹಿಂದೆ ಮಂಗಳೂರಿಗೆ ಮರಳಿ, ಇಲ್ಲೇ ನೆಲೆಸಿದ್ದರು. ಕೊಡುಗೈ ದಾನಿಯೂ ಆಗಿದ್ದ ಅವರು ಅನೇಕ ದೇವಸ್ಥಾನ ಹಾಗೂ ಮಠಗಳಿಗೆ ದೇಣಿಗೆ ನೀಡಿದ್ದರು. ಕಾಮತ್‌ ಅವರು ಸೆ. 17ರಂದು ಮೃತಪಟ್ಟಿರುವ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಬಿ.ಆರ್‌.ಶೆಟ್ಟಿ ಅವರು ಆಘಾತಗೊಂಡಿದ್ದರು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಎಂ.ಆರ್‌. ಕಾಮತ್ ಅವರು ನಮ್ಮ ಕಕ್ಷಿದಾರರಿಗೆ 50 ವರ್ಷಗಳಿಂದ ಪರಿಚಿತರಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೃಢ ಇಚ್ಛಾಶಕ್ತಿ ಹಾಗೂ ಶಿಸ್ತಿನ ಮನುಷ್ಯರಾಗಿದ್ದ ಅವರ ಸಾವಿನ ಬಗ್ಗೆ ಅನುಮಾನಗಳಿವೆ. ಸಾರ್ವಜನಿಕ ವಲಯದಲ್ಲೂ ಅವರ ಸಾವಿನ ಬಗ್ಗೆ ಅನೇಕ ವದಂತಿ ಹಬ್ಬಿವೆ. ಹಾಗಾಗಿ ಕೂಲಂಕಷ ತನಿಖೆ ನಡೆಸಿ ಸತ್ಯಾಂಶ ಏನೆಂಬುದನ್ನು ಹೊರಗೆಡವಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

‘ಅವರು ಮೃತಪಟ್ಟು ಈಗಾಗಲೇ ಅನೇಕ ದಿನಗಳು ಕಳೆದಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದೂ ಪತ್ರದಲ್ಲಿ ದೂರಲಾಗಿದೆ.

‘ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಬೇಕು. ಆತ್ಮಹತ್ಯೆ ಮಾಡುವಂತೆ ಅವರಿಗೆ ಯಾರಾದರೂ ಕುಮ್ಮಕ್ಕು ನೀಡಿದ್ದಾರೆಯೇ? ಅವರು ಕೊಲೆಯಾಗಿದ್ದಾರೆಯೇ? ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅವರನ್ನು ಬಲವಂತ ಪಡಿಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು’ ಎಂದೂ ಆಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT