ಮಂಗಳೂರು: ಹದಿನಾರು ಭಾಷೆಗಳಿಗೆ ಅನುವಾದಗೊಂಡಿರುವ ಸಾಹಿತಿ ಹಂ.ಪ.ನಾಗರಾಜಯ್ಯ ಅವರ ದೇಸಿ ಮಹಾಕಾವ್ಯ ‘ಚಾರುವಸಂತ’ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಲಾವಿದರು ಮನೋಜ್ಞವಾಗಿ ಪ್ರದರ್ಶಿಸಿದರು.
ಹಂಪನಾ ಅವರ ಸಮ್ಮುಖದಲ್ಲಿ ಕಲಾವಿದರು ಮೂಡುಬಿದಿರೆಯಲ್ಲಿ ಭಾನುವಾರ ನಾಟಕದ ಪ್ರಥಮ ಪ್ರದರ್ಶನ ನೀಡಿದರು.
ಇದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಂಪನಾ ಅವರು, ‘ನನ್ನ ಕನಸು ನನಸಾದ ದಿನವಿದು. ಎಲ್ಲ ಕುಟುಂಬಗಳಲ್ಲೂ ಏಳುಗಾಲ ಹಾಗೂ ಬೀಳುಗಾಲ ಇರುತ್ತದೆ. ಏಳುಬೀಳುಗಳ ಜೀವನದ ಕಥನವೇ ‘ಚಾರುವಸಂತ’. ಎಲ್ಲ ಧರ್ಮ, ಮತಗಳನ್ನು ಗೌರವಿಸಬೇಕು. ದ್ವೇಷ, ಅಸೂಯೆ ಬಿಡಬೇಕು. ಪರಿಸರ ಸಂರಕ್ಷಿಸಬೇಕು ಎಂಬ ಸಂದೇಶವನ್ನು ನಾಟಕ ನೀಡಿದೆ’ ಎಂದರು.
‘2003ರಲ್ಲಿ ಹಂಪನಾ ಬರೆದ ‘ಚಾರುವಸಂತ’ವನ್ನು ಮೋಹನ ಆಳ್ವರ ಆಶಯದಂತೆ ನಿರ್ದೇಶಿಸಲಾಗಿದೆ. ರಂಗಕರ್ಮಿ ನಾ.ದಾ. ಶೆಟ್ಟಿ ರಂಗರೂಪ ನೀಡಿದ್ದಾರೆ. ಸುಮಾರು ಎರಡು ವರ್ಷಗಳ ಈ ಪಯಣವು ಮೂಡುಬಿದಿರೆ ಮೂಲಕ ರಾಜ್ಯದಾದ್ಯಂತ ತಿರುಗಾಟ ನಡೆಸಲಿದೆ’ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಮೋಹನ್ ಆಳ್ವ ಇದ್ದರು.
‘ಚಾರುವಸಂತ’ ನಾಟಕವು ಅ.31ರಂದು ಕಲಾಮಂದಿರ ಮೈಸೂರು, ನ.2ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರು, ನ.4 ಡಾ.ಎಚ್.ಎನ್.ಕಲಾಮಂದಿರ ಗೌರಿಬಿದನೂರು, ನ.6 ಗುಬ್ಬಿ ವೀರಣ್ಣ ಕಲಾಮಂದಿರ ತುಮಕೂರು, ನ.8ರಂದು ತ.ರಾ.ಸು. ರಂಗಮಂದಿರ ಚಿತ್ರದುರ್ಗ, ನ.10 ರಂದು ಮಲ್ಲಿಕಾರ್ಜುನ ರಂಗಮಂದಿರ ದಾವಣಗೆರೆ, ನ.12 ಡಾ.ಪಾಟೀಲ ಪುಟ್ಟಪ್ಪ ಸಭಾಭವನ ಧಾರವಾಡ ಹಾಗೂ ನ.15ರಂದು ರಂಗಮನೆ ಸುಳ್ಯದಲ್ಲಿ ಪ್ರದರ್ಶನಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.