ಭಾನುವಾರ, ಸೆಪ್ಟೆಂಬರ್ 26, 2021
22 °C
ನೆಟ್‌ವರ್ಕ್‌, ಲೈಂಗಿಕ ದೌರ್ಜನ್ಯ, ಕಿರುಕುಳ, ಪಡಿತರ ಸಮಸ್ಯೆ ಅನಾವರಣ

ಮಕ್ಕಳ ಸಮಸ್ಯೆ, ಚೈಲ್ಡ್‌ಲೈನ್‌ಗೆ 113 ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯಡಿಯಲ್ಲಿ ದಿನದ 24 ಗಂಟೆ ಮಕ್ಕಳಿಗೆ ತುರ್ತು ಸೇವೆಯನ್ನು ನೀಡುತ್ತಿರುವ ‘ಚೈಲ್ಡ್‌ಲೈನ್-1098’ರ ಕಚೇರಿಗೆ ಜುಲೈ ತಿಂಗಳಲ್ಲಿ 113 ಕರೆಗಳು ಬಂದಿವೆ. ಇದುವರೆಗೆ ತಿಂಗಳಲ್ಲಿ ಬಂದ ಗರಿಷ್ಠ ಪ್ರಮಾಣದ ಕರೆಗಳಾಗಿವೆ ಎಂದು ಚೈಲ್ಡ್‌ಲೈನ್‌ ಮೂಲಗಳು ತಿಳಿಸಿವೆ.

‘ಸರಾಸರಿ ತಿಂಗಳಿಗೆ 80 ಕರೆಗಳು ಬರುತ್ತಿದ್ದವು. ಈ ಬಾರಿ 113 ಕರೆಗಳು ಬಂದಿದ್ದು, ಮಧ್ಯರಾತ್ರಿಯಲ್ಲೂ ಕೆಲ ಮಕ್ಕಳು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ’ ಎಂದು ಚೈಲ್ಡ್‌ಲೈನ್‌ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ ತಿಳಿಸಿದ್ದಾರೆ.

‘ನಿತ್ಯ ಸರಾಸರಿ 3–4 ರಿಂದ ನಾಲ್ಕು ಕರೆಗಳನ್ನು ಸ್ವೀಕರಿಸಲಾಗಿದೆ. ಈ ಬಾರಿ ಅತಿ ಹೆಚ್ಚು ಕರೆಗಳು ಬಂದಿದ್ದು, ಪಡಿತರ ಕಿಟ್‌ಗಾಗಿ. 43 ಮಕ್ಕಳು ಪಡಿತರ ಕಿಟ್‌ ಒದಗಿಸುವಂತೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಈ ತಿಂಗಳಲ್ಲಿ ಒಂದೇ ದಿನ 30 ಮಕ್ಕಳು ಕರೆಮಾಡಿ, ಕಿಟ್‌ ನೀಡುವಂತೆ ಕೋರಿದ್ದರು’ ಎಂದು ಹೇಳಿದ್ದಾರೆ.

‘2019 ರ ಒಂದು ತಿಂಗಳಲ್ಲಿ ಚೈಲ್ಡ್‌ ಲೈನ್‌ 102 ಕರೆಗಳನ್ನು ಸ್ವೀಕರಿಸಿದ್ದು, ಇದುವರೆಗಿನ ಗರಿಷ್ಠ ಕರೆಗಳಾಗಿದ್ದವು. ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲ್ಲೂಕುಗಳು ಹಾಗೂ ಮಂಗಳೂರಿನ ಮಕ್ಕಳು ಚೈಲ್ಡ್‌ಲೈನ್‌ಗೆ ಕರೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಗ್ರಾಮೀಣ  ಪ್ರದೇಶದಲ್ಲಿ ಮಕ್ಕಳ ಮೇಲಿನ ದೈಹಿಕ ಮತ್ತು ಮಾನಸಿಕ ಕಿರುಕುಳ ಪ್ರಕರಣಗಳು ಹೆಚ್ಚಿದ್ದು, ಈ ಬಗ್ಗೆ ಮಕ್ಕಳ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಆನ್‌ಲೈನ್‌ ತರಗತಿಗೆ ನೆಟ್‌ವರ್ಕ್‌ ಸಮಸ್ಯೆಯ ಬಗ್ಗೆಯೂ ಹಲವು ಮಕ್ಕಳು ದೂರು ಹೇಳಿಕೊಂಡಿದ್ದಾರೆ. ಆನ್‌ಲೈನ್‌ ಮೂಲಕ ಕಿರುಕುಳ, ಬ್ಲಾಕ್‌ಮೇಲ್‌, ಆನ್‌ಲೈನ್‌ ತರಗತಿಗಳಲ್ಲಿ ಅವಹೇಳನ ಇತ್ಯಾದಿ ದೂರುಗಳೂ ಕೇಳಿ ಬಂದಿವೆ.

‘ಮಕ್ಕಳು ಅನೇಕ ರೀತಿಯ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಯೂ ಆನ್‌ಲೈನ್‌ ಕಿರುಕುಳದಿಂದ ಮಕ್ಕಳು ಕುಗ್ಗುತ್ತಿದ್ದು, ಈ ಬಗ್ಗೆ ಪಾಲಕರಿಗೆ ತಿಳಿಸಲೂ ಹಿಂದೇಟು ಹಾಕುತ್ತಿದ್ದಾರೆ. ಕರೆ ಮಾಡಿದ ಅನೇಕ ಮಕ್ಕಳು ಈ ಬಗ್ಗೆ ಪಾಲಕರಿಗೆ ತಿಳಿಸದಂತೆ ಮನವಿ ಮಾಡಿದ್ದಾರೆ. ಇಂತಹ ಕಿರುಕುಳದಿಂದ ಬೇಸತ್ತ ಮಕ್ಕಳಿಗೆ ಚೈಲ್ಡ್‌ಲೈನ್‌ ಮೂಲಕ ಕೌನ್ಸೆಲಿಂಗ್ ಕೂಡ ಮಾಡಲಾಗಿದೆ’ ಎಂದು ದೀಕ್ಷಿತ್‌ ಅಚ್ರಪ್ಪಾಡಿ ತಿಳಿಸಿದ್ದಾರೆ.

ವೈದ್ಯಕೀಯ ನೆರವು, ಆಸರೆ, ಶಿಕ್ಷಣಕ್ಕೆ ಪ್ರಾಯೋಜಕತ್ವ, ದೈಹಿಕ, ಮಾನಸಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಭಿಕ್ಷೆ, ಕೌಟುಂಬಿಕೆ ಕಲಹ, ಬಾಲ್ಯವಿವಾಹ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡು ಬಂದಿದ್ದು, ಕೆಲವು ಮಕ್ಕಳು ಶಿಕ್ಷಣ ಕ್ಕಾಗಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ಎಲ್ಲ ಕರೆಗಳ ದಾಖಲೀಕರಣ ಮಾಡಲಾ ಗಿದ್ದು, ಸಂಬಂಧಿಸಿದವರ ಗಮನಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿ ಸುತ್ತಿರುವ ಮಕ್ಕಳಿಗೆ ನೆಟ್‌ವರ್ಕ್‌ ಸಮಸ್ಯೆ ಯಿದ್ದು, ಕೆಲವೊಮ್ಮೆ 1098ಕ್ಕೆ ಕರೆಗಳು ಹೋಗುತ್ತಿಲ್ಲ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.