ಬುಧವಾರ, ಮೇ 25, 2022
29 °C

ರಸ್ತೆ ದುರಸ್ತಿಗೆ ಹಾರೆ ಹಿಡಿದ ಮಕ್ಕಳು- ಹಾಳಾದ ರಸ್ತೆ ವೀಕ್ಷಿಸಿದ ನ್ಯಾಯಾಧೀಶರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಳ್ಯ: ಶಾಲೆಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಮಂಡೇಪು ಎಂಬಲ್ಲಿ ಶಾಲಾ ಮಕ್ಕಳಿಬ್ಬರು ಶಾಲೆಗೆ ತೆರಳುವ ಹಾದಿಯ ಹದಗೆಟ್ಟ ರಸ್ತೆಯನ್ನು ತಾವೇ ಹಾರೆ ಹಿಡಿದು ಸರಿಪಡಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂತೋಷ್ ಮತ್ತು ಕೇಶವ ಎಂಬುವರ ಮಕ್ಕಳಾದ 2ನೇ ತರಗತಿಯ ವಲ್ಲೀಶ ರಾಮ ಮತ್ತು ತನ್ವಿ ರಸ್ತೆ ದುರಸ್ತಿಗೆ ಪ್ರಯತ್ನಿಸಿದವರು.

ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯ ನ್ಯಾಯಾಧೀಶ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ರಸ್ತೆ ಸಮಸ್ಯೆ ನಿವಾರಿಸಬೇಕು ಎಂದು ತಾಕೀತು ಮಾಡಿದ್ದಾರೆ.

ರಸ್ತೆ ಪರಿಸ್ಥಿತಿಯನ್ನು ಅವಲೋಕಿಸಿದ ಅವರು, ವಿದ್ಯಾರ್ಥಿಗಳ ಕೈಯಲ್ಲಿ ಹಾರೆ ನೀಡಿದ್ದಕ್ಕಾಗಿ ಪೋಷಕರನ್ನು ಪ್ರಶ್ನಿಸಿದರು. ‘ಇದು ನಮ್ಮದೇ ರಸ್ತೆಯಾಗಿರುವುದರಿಂದ ಪಂಚಾಯತಿಗೆ ಮನವಿ ನೀಡಿದ್ದರೂ, ಅವರು ಮಾಡದಿದ್ದ ಕಾರಣದಿಂದಾಗಿ ನಾವು ಶ್ರಮದಾನ ಮಾಡಿದೆವು. ಆ ವೇಳೆ ಮಕ್ಕಳು ಬಂದು ಶ್ರಮದಾನದಲ್ಲಿ ಭಾಗಿಯಾಗಿದ್ದಾರೆ’ ಎಂದು ಪೋಷಕರು ತಿಳಿಸಿದರು ಎನ್ನಲಾಗಿದೆ.

ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ನ್ಯಾಯಾಧೀಶರು ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಅವರನ್ನು ಪ್ರಶ್ನಿಸಿದರು. ಮಕ್ಕಳಿಂದ ಕೆಲಸ ಮಾಡಿಸಿದ ಪೋಷಕರು, ರಸ್ತೆಯ ದುರಸ್ತಿ ಮಾಡಿಸದ ಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಒ ಮೇಲೆ ಹಾಗೂ ಮಕ್ಕಳ ಬಗ್ಗೆ ನಿಗಾ ವಹಿಸದ ಶಾಲಾ ಶಿಕ್ಷಕರ ಮೇಲೆ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಧೀಶರು, ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಆಂಜನೇಯ ರೆಡ್ಡಿ ಅವರಿಗೆ ಸೂಚನೆ ನೀಡಿದರು.

‘ಪ್ರಕರಣ ದಾಖಲಿಸುವುದು ಬೇಡ. ರಸ್ತೆ ದುರಸ್ತಿ ಮಾಡಿಸೋಣ’ ಎಂದು ಸಬ್‌ ಇನ್‌ಸ್ಪೆಕ್ಟರ್ ಹೇಳಿದಾಗ, ಅದಕ್ಕೆ ಒಪ್ಪಿದ ನ್ಯಾಯಾಧೀಶರು, ‘ತಕ್ಷಣ ದುರಸ್ತಿ ಮಾಡಿ, ಅದರ ಚಿತ್ರ ಮತ್ತು ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು