ಶನಿವಾರ, ಆಗಸ್ಟ್ 13, 2022
27 °C
ಪ್ರಧಾನಮಂತ್ರಿಗಳು ಪೌರಕಾರ್ಮಿಕರ ಕಾಲು ತೊಳೆದರೆ ಸಮಸ್ಯೆ ಪರಿಹಾರವಾಗುವುದೇ: ಮುಖಂಡರ ಪ್ರಶ್ನೆ

ಭದ್ರತೆ ಇಲ್ಲ; ಸೌಲಭ್ಯಗಳಿಗೂ ಬೀಳುತ್ತಿದೆ ಕತ್ತರಿ: ಪೌರಕಾರ್ಮಿಕರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಸ್ವಚ್ಛತಾ ಯೋಧ’ರು, ‘ಕೊರೋನಾ ಯೋಧ’ರು ಎಂದೆಲ್ಲ ಬಣ್ಣಿಸಿರುವ ಪೌರಕಾರ್ಮಿಕರ ಸ್ಥಿತಿ ಕರ್ನಾಟಕದಲ್ಲಿ ಚಿಂತಾಜನಕವಾಗಿದ್ದು ಉದ್ಯೋಗ ಭದ್ರತೆ ಇಲ್ಲದೆ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಅವರ ಜೀವ–ಜೀವನಕ್ಕೆ ಕುತ್ತುಂಟಾಗಿದೆ ಎಂದು ವಿವಿಧ ಸಂಘಗಳ ಮುಖಂಡರು ದೂರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಫಾಯಿ ಕರ್ಮಚಾರಿ ಸಂಘದ ಕರಾವಳಿ ವಿಭಾಗದ ಸಂಚಾಲಕ ಬಿ.ಕೆ ಅಣ್ಣಪ್ಪ ಕಾರೆಕ್ಕಾಡು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್‌ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುವವರನ್ನು ನೇಮಕಾತಿಗೆ ಸರ್ಕಾರಕ್ಕಾಗಲಿ ಸ್ಥಳೀಯ ಆಡಳಿತಗಳಿಗಾಗಲಿ ಆಸಕ್ತಿ ಇಲ್ಲ ಎಂದು ದೂರಿದರು.

‘ಪೌರಕಾರ್ಮಿಕರು ಸುಮಾರು ಮೂರು ದಶಕಗಳಿಂದ ದುಡಿಯುತ್ತಿದ್ದಾರೆ. ಅವರ ಪೈಕಿ ಕೆಲವರನ್ನು ಮಾತ್ರ ನೇರ ವೇತನ ಪಾವತಿ ಸೌಲಭ್ಯಕ್ಕೆ ಒಳಪಡಿಸಲಾಗಿದೆ. ಬೆಳಿಗ್ಗಿನ ಉಪಾಹಾರ, ಬಟ್ಟೆ ಬದಲಾಯಿಸಲು ವ್ಯವಸ್ಥೆ, ಕೆಲಸದ ಸ್ಥಳಕ್ಕೂ ಮನೆಗೂ ವಾಹನದ ವ್ಯವಸ್ಥೇ ಇತ್ಯಾದಿ ಯಾವುದೂ ಇಲ್ಲ. ‌20 ವರ್ಷಗಳಿಂದ ಕೆಲಸ ಮಾಡುತ್ತಿರುವ ವಾಹನ ಚಾಲಕರೂ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮಂಗಳೂರಿನಲ್ಲಿ ಆ್ಯಂಟನಿ ಗ್ರೂಪ್‌ನವರು ಪೌರಕಾರ್ಮಿಕರ ಸೌಲಭ್ಯಗಳನ್ನು ಕಿತ್ತುಕೊಂಡಿದ್ದಾರೆ’ ಎಂದು ಅಣ್ಣಪ್ಪ ದೂರಿದರು.

‘ಕಂಪನಿಯು ಎಲ್ಲ ವಾಹನಗಳನ್ನು ಬಳಸುತ್ತಿಲ್ಲ. ಕಡಿಮೆ ವಾಹನಗಳನ್ನು ಒದಗಿಸಿ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಕೆಟ್ಟು ಹೋದರೆ ದುರಸ್ತಿ ಮಾಡದೆ ಚಾಲಕರ ಮೇಲೆ ಆರೋಪ ಹೊರಿಸುತ್ತಾರೆ. ಪೌರಕಾರ್ಮಿಕರ ಪೈಕಿ ಕೆಲವರಿಗೆ 4 ತಿಂಗಳಿಂದ ವೇತನ ನೀಡಿಲ್ಲ’ ಎಂದು ಅವರು ಆರೋಪಿಸಿದರು.

‘ದಕ್ಷಿಣ ಕನ್ನಡದಲ್ಲಿ 1095 ಮಂದಿ ಪೌರಕಾರ್ಮಿಕರಿದ್ದು 225 ಮಂದಿಯನ್ನು ಮಾತ್ರ ಖಾಯಂ ಮಾಡಲಾಗಿದೆ. ಪ್ರಧಾನಮಂತ್ರಿ  ಪೌರಕಾರ್ಮಿಕರ ಕಾಲು ತೊಳೆಯುತ್ತಾರೆ. ಅದರಿಂದ ಪ್ರಯೋಜನವೇನು? ಪೌರಕಾರ್ಮಿಕರ ಬಗ್ಗೆ ನೈಜ ಕಾಳಜಿ ಇದ್ದರೆ ಖಾಯಮಾತಿಗೆ ಆದೇಶ ನೀಡಲಿ’ ಎಂದು ಅನಿಲ್ ಕುಮಾರ್ ಹೇಳಿದರು. 

‘ಪಚ್ಚನಾಡಿಯಲ್ಲಿ ಪೌರಕಾರ್ಮಿಕರಿಗಾಗಿ ಮೀಸಲಿಟ್ಟಿರುವ 4 ಎಕರೆ ಜಾಗದಲ್ಲಿ ಅತಿಕ್ರಮಣ ಮಾಡಲಾಗಿದೆ. ಅದನ್ನು ತೆರವುಗೊಳಿಸಿದ ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದು ಅವರು ಆಗ್ರಹಿಸಿದರು.

ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ದಿನೇಶ್ ಕುಲಾಲ್, ಮಂಗಳೂರು ವಲಯ ಅಧ್ಯಕ್ಷ ಚೆನ್ನಕೇಶವ ಗೌಡ, ಪೌರಕಾರ್ಮಿಕರ ಮತ್ತು ನಾಲ್ಕನೇ ದರ್ಜೆ ನೌಕರರ ಸಂಘದ ಕಾರ್ಯದರ್ಶಿ ಎಸ್‌.ಪಿ.ಆನಂದ್‌, ಮುಖಂಡರಾದ ಇಶು ಕುಮಾರ್‌ ಮತ್ತು ಸುರೇಶ್ ಉರ್ವ ಇದ್ದರು. 

‘ಸೌಲಭ್ಯಗಳಿಂದ ವಂಚಿತರಾಗಿಸಿಲ್ಲ’

ಆ್ಯಂಟನಿ ಗ್ರೂಪ್‌ ಮೇಲಿನ ಆರೋಪಗಳ ಕುರಿತು ಕಂಪನಿಯ ಪ್ರತಿನಿಧಿಯನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ‘ಒಪ್ಪಂದದ ಪ್ರಕಾರ ನೀಡಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಪೌರಕಾರ್ಮಿಕರಿಗೆ ಒದಗಿಸಲಾಗುತ್ತಿದೆ. ಇಎಸ್‌ಐ, ಪಿಎಫ್‌ ಇತ್ಯಾದಿಗಳನ್ನು ನೀಡಲಾಗುತ್ತಿದ್ದು ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ  ವರ್ಗಾಯಿಸಲಾಗುತ್ತಿದೆ. ಒಪ್ಪಂದದಲ್ಲಿ ಬೆಳಿಗ್ಗಿನ ಉಪಾಹಾರದ ಬಗ್ಗೆ ಪ್ರಸ್ತಾಪ ಇಲ್ಲ‘ ಎಂದರು. 

‘ನಗರದಲ್ಲಿ ಒಟ್ಟು 110 ವಾಹನಗಳನ್ನು ಬಳಸಲಾಗುತ್ತಿದೆ. ಅವುಗಳಿಗೆ ಜಿಪಿಎಸ್‌ ಇದೆ. ಆದ್ದರಿಂದ ನಿಗದಿಗಿಂತ ಕಡಿಮೆ ವಾಹನಗಳನ್ನು ನೀಡಲಾಗುತ್ತಿದೆ ಎಂಬ ಆರೋಪ ಸುಳ್ಳು. ವಾಹನಗಳು ಕೆಟ್ಟುಹೋದರೆ ತಕ್ಷಣ ದುರಸ್ತಿ ಮಾಡುವ ಸೌಲಭ್ಯವೂ ಇದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು