ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಅಪ್‌ಡೇಟ್‌ ಆಗದ ಪೋರ್ಟಲ್‌: ಪದವಿ ವಿದ್ಯಾರ್ಥಿಗಳ ದಾಖಲಾತಿ ನಿಧಾನ

ಪಿಯುಸಿ ಮೂರು ಹಂತದ ಪರೀಕ್ಷೆ ಪರಿಣಾಮ: ನಿಧಾನಗತಿಯಲ್ಲಿ ದಾಖಲಾತಿ
Published 29 ಮೇ 2024, 5:54 IST
Last Updated 29 ಮೇ 2024, 5:54 IST
ಅಕ್ಷರ ಗಾತ್ರ

ಮಂಗಳೂರು: ಪದವಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ದಾಖಲಾತಿ ಯುಯುಸಿಎಂಎಸ್‌ನಲ್ಲಿ ಅಪ್‌ಲೋಡ್ ಆಗದಿರುವುದು ಸರ್ಕಾರಿ ಪದವಿ ಕಾಲೇಜುಗಳಿಗೆ ದೊಡ್ಡ ತಲೆನೋವಾಗಿದೆ.

ರಾಜ್ಯ ಸರ್ಕಾರದ ಆದೇಶದಂತೆ ಮಂಗಳೂರು ವಿಶ್ವವಿದ್ಯಾನಿಲಯವು ಈ ವರ್ಷದಿಂದ ಮೂರು ಮುಖ್ಯ (ಮೇಜರ್) ವಿಷಯಗಳೊಂದಿಗೆ ಆರು ಸೆಮಿಸ್ಟರ್‌ಗಳ ರಾಜ್ಯ ಪಠ್ಯಕ್ರಮದ ಸಾಮಾನ್ಯ ಪದವಿ ಮಾದರಿಯನ್ನು ಅಳವಡಿಕೊಳ್ಳಲು ಎಲ್ಲ ಕಾಲೇಜುಗಳಿಗೆ ಸೂಚಿಸಿದೆ. ಇದರನ್ವಯ ಪದವಿ ಕಾಲೇಜುಗಳು ಈ ಬಾರಿ ರಾಷ್ಟ್ರೀಯ ಶಿಕ್ಷಣ ನೀತಿಯಿಂದ (ಎನ್‌ಇಪಿ) ಪುನಃ ರಾಜ್ಯ ಪಠ್ಯಕ್ರಮಕ್ಕೆ (ಎಸ್‌ಇಪಿ) ಬದಲಾಗಿವೆ.

ಆದರೆ, ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್‌) ಪೋರ್ಟಲ್‌ ಎನ್‌ಇಪಿ ಮಾದರಿಯಲ್ಲೇ ಇದೆ. ಎನ್‌ಇಪಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಎರಡು ಮುಖ್ಯ ವಿಷಯಗಳ ಆಯ್ಕೆ ಇತ್ತು. ಎಸ್‌ಇಪಿ ಪ್ರಕಾರ ಮೂರು ಮುಖ್ಯ ವಿಷಯ ಆಯ್ಕೆ ಮಾಡಿಕೊಂಡು, ಅದನ್ನು ಪೋರ್ಟಲ್‌ನಲ್ಲಿ ಭರ್ತಿ ಮಾಡಬೇಕು. ಪೋರ್ಟಲ್‌ ಅಪ್‌ಡೇಟ್ ಆಗದ ಕಾರಣ ಮಾಹಿತಿಯನ್ನು ಸ್ವೀಕರಿಸುತ್ತಿಲ್ಲ. ಇಡೀ ರಾಜ್ಯಕ್ಕೆ ಒಂದೇ ಪೋರ್ಟಲ್‌ ಆಗಿದ್ದು, ರಾಜ್ಯ ಮಟ್ಟದಲ್ಲಿ ಈ ಸಮಸ್ಯೆ ನಿವಾರಣೆ ಆಗಬೇಕಾಗಿದೆ. ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿ 15 ದಿನಗಳು ಕಳೆದಿದ್ದು, ವಿದ್ಯಾರ್ಥಿಗಳ ದಾಖಲೆಗಳನ್ನು ಆಫ್‌ಲೈನ್‌ನಲ್ಲಿ ಸ್ವೀಕರಿಸಲಾಗುತ್ತಿದೆ. ಯುಯುಸಿಎಂಎಸ್‌ ಪೋರ್ಟಲ್‌ನಲ್ಲಿ ಎಸ್ಇಪಿ ಪಠ್ಯಕ್ರಮಕ್ಕೆ ತಕ್ಕಂತೆ ಬದಲಾವಣೆ ಆದ ಮೇಲೆ ಎಲ್ಲ ವಿದ್ಯಾರ್ಥಿಗಳ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದು ಸರ್ಕಾರಿ ಪದವಿ ಕಾಲೇಜಿನ ಸಿಬ್ಬಂದಿಯೊಬ್ಬರು ಹೇಳಿದರು.

ಪೋರ್ಟಲ್ ಅ‍ಪ್‌ಡೇಟ್‌ ಆಗುವವರೆಗೆ ಕಾಯಬೇಕಾಗಿದೆ. ನಂತರ ಒಮ್ಮೆಲೇ ಎಲ್ಲವನ್ನೂ ಅಪ್‌ಲೋಡ್ ಮಾಡುವುದು ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ಅಲ್ಲದೆ, ಈ ಬಾರಿ ಕಾಲೇಜುಗಳಿಗೆ ಪ್ರವೇಶಕ್ಕೆ ಸೀಟ್‌ಗಳ ನಿಗದಿ ಇನ್ನೂ ನಡೆದಿಲ್ಲ. ಕಳೆದ ವರ್ಷದ ಸಂಖ್ಯೆ ಆಧರಿಸಿ, ಈ ಬಾರಿ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಏನಿದು ಸೀಟ್ ನಿಗದಿ?: ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕಾಲೇಜುಗಳು ಹೊಸ ಕೋರ್ಸ್ ಅಥವಾ ಹಾಲಿ ಇರುವ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ನಿಗದಿಗೊಳಿಸಲು, ವಿವಿ ಅನುಮೋದನೆ (ಎಫಿಲಿಯೇಷನ್) ನೀಡಬೇಕಾಗುತ್ತದೆ. ಆನ್‌ಲೈನ್ ಮೂಲಕ ಕಾಲೇಜುಗಳು ಇದಕ್ಕೆ ಅರ್ಜಿ ಸಲ್ಲಿಸುತ್ತವೆ. ಚುನಾವಣೆ ನೀತಿಸಂಹಿತೆ, ಯುಯುಸಿಎಂಎಸ್ ಪೋರ್ಟಲ್‌ ತೆರೆಯಲು ತಡವಾಗಿರುವ ಕಾರಣದಿಂದ ಈ ಬಾರಿ ಇನ್ನೂ ಈ ಪ್ರಕ್ರಿಯೆ ನಡೆದಿಲ್ಲ. ಕಾರಣ ಕಳೆದ ವರ್ಷದ ಸಂಖ್ಯೆ ಆಧರಿಸಿ ಕಾಲೇಜುಗಳು ಪ್ರತಿ ವಿಭಾಗಕ್ಕೆ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿವೆ. ಹೆಚ್ಚುವರಿ ವಿಭಾಗದ ಬೇಡಿಕೆ ಇಟ್ಟಿರುವ ಕಾಲೇಜುಗಳಿಗೆ ಇದರಿಂದ ತೊಂದರೆಯಾಗಿದೆ ಎಂದು ಪ್ರಾಂಶುಪಾಲರೊಬ್ಬರು ಪ್ರತಿಕ್ರಿಯಿಸಿದರು.

ಏಕಕಾಲದಲ್ಲಿ ಆರಂಭಿಸಲು ಮನವಿ: ಕೋವಿಡ್–19 ಸಾಂಕ್ರಾಮಿಕದ ವೇಳೆ ಹಳಿ ತಪ್ಪಿರುವ ಪದವಿ ತರಗತಿಗಳನ್ನು ಈ ವರ್ಷದಿಂದ ಸರಿಪಡಿಸಿ, ಒಂದರಿಂದ ಮೂರನೇ ವರ್ಷದ ಪದವಿ ತರಗತಿಗಳನ್ನು ಒಂದೇ ಬಾರಿಗೆ ಪ್ರಾರಂಭಿಸಲು ಎಲ್ಲ ಪದವಿ ಕಾಲೇಜುಗಳ ಪ್ರಾಂಶುಪಾಲರು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದಾರೆ. ಪ್ರಥಮ ವರ್ಷದ ತರಗತಿ ಬೇಗ ಪ್ರಾರಂಭಿಸುವುದರಿಂದ ಉಳಿದೆರಡು ವರ್ಷಗಳಿಗೆ ತರಗತಿ ಕೊಠಡಿ ಹೊಂದಾಣಿಕೆ, ಪರೀಕ್ಷೆ, ಮೌಲ್ಯಮಾಪನ ಎಲ್ಲವೂ ವ್ಯತ್ಯಾಸ ವಾಗುತ್ತವೆ. ಏಕಕಾಲದಲ್ಲಿ ಆರಂಭಿಸಿದರೆ, ಎಲ್ಲವೂ ಸುಸೂತ್ರವಾಗಿ ನಡೆಯುತ್ತವೆ ಎಂದು ಅವರು ವಿನಂತಿಸಿದ್ದಾರೆ. ಹೀಗಾಗಿ, ಪ್ರಥಮ ವರ್ಷದ ಪದವಿ ತರಗತಿಗಳು ಆಗಸ್ಟ್‌ ಮೊದಲ ವಾರದ ಒಳಗೆ ಆರಂಭವಾಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT