ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೋಮುಹಿಂಸೆ ಪ್ರಚೋದಿಸುವ ಯೋಜಿತ ಷಡ್ಯಂತ್ರ

ಜೆರೋಸಾ ಶಾಲೆಯ ವಿವಾದ– ಸಮಾನ ಮನಸ್ಕರ ಸಂಘಟನೆ ಆರೋಪ
Published 15 ಫೆಬ್ರುವರಿ 2024, 7:49 IST
Last Updated 15 ಫೆಬ್ರುವರಿ 2024, 7:49 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ‌ ವೆಲೆನ್ಸಿಯಾದ ಸೇಂಟ್‌ ಜೆರೋಸಾ ಶಾಲೆಯ ಶಿಕ್ಷಕಿಯ ವಿರುದ್ಧ ಧಾರ್ಮಿಕ ನಿಂದನೆ‌ ಆರೋಪ ಹೊರಿಸಿದ ಪ್ರಕರಣದ ಹಿಂದೆ‌ ರಾಜಕೀಯ ದುರುದ್ದೇಶ ಇದೆ. ಕೋಮುಹಿಂಸೆಗೆ ಪ್ರಚೋದನೆ ನೀಡುವ ಯೋಜಿತ ಷಡ್ಯಂತ್ರ ಇದು ಎಂದು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರ ನಿಯೋಗ ಆರೋಪಿಸಿದೆ.

ನಿಯೋಗವು ಜೆರೋಸಾ ಶಾಲೆಗೆ ಬುಧವಾರ ಭೇಟಿ ನೀಡಿ, ಆಡಳಿತ ಮಂಡಳಿಯೊಂದಿಗೆ ಚರ್ಚಿಸಿತು. ಶಾಲೆಯ ಅಧ್ಯಾಪಕರು, ಆಡಳಿತ ಮಂಡಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿತು. 

ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಡಾ.ವೈ. ಭರತ್ ಶೆಟ್ಟಿ ನೇತೃತ್ವದಲ್ಲಿ ಶಾಲೆಯ ಬಳಿ ದಾಂದಲೆ ನಡೆಸಲಾಗಿದೆ. ಶಾಸಕರ ನಡೆ ಅಪಾಯಕಾರಿ. ಅವರ ವಿರುದ್ಧ ಕೋಮುಗಲಭೆಗೆ ಪ್ರಚೋದನೆಯ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ನಿಯೋಗ ಆಗ್ರಹಿಸಿದೆ.

ನಿಯೋಗದ ನೇತೃತ್ವ ವಹಿಸಿದ್ದ ಮುನೀರ್‌ ಕಾಟಿ‍ಪಳ್ಳ, ‘ವೇದವ್ಯಾಸ ಕಾಮತ್  ಶಾಲೆಯ ಗೇಟ್‌ ಬಳಿ ನಿಂತು ಧಾರ್ಮಿಕ‌ ಘೋಷಣೆ ಕೂಗಿ,  ಧಾರ್ಮಿಕ ಸಂಕೇತದ ಶಾಲುಗಳನ್ನು ಬೀಸಿ ಗೂಂಡಾಗಳಂತೆ ನಡೆದುಕೊಂಡಿದ್ದಾರೆ. ಭರತ್ ಶೆಟ್ಟಿ ಸಂವಿಧಾನಬಾಹಿರ‌ವಾದ ಹೇಳಿಕೆ ನೀಡಿದ್ದಾರೆ. ಇವರ ವರ್ತನೆ ಮಂಗಳೂರಿಗೆ ಕಪ್ಪುಚುಕ್ಕೆ’ ಎಂದು ಟೀಕಿಸಿದರು.  

‘ಹಿಜಾಬ್ ವಿವಾದದ ಸಂದರ್ಭದಲ್ಲಿ ಸಂವಿಧಾನ ಬೇಕೋ ಧರ್ಮ‌ ಬೇಕೋ ಎಂದು ಕೇಳಿದವರು ಈಗ ಧಾರ್ಮಿಕ ನಂಬಿಕೆ‌ ಮುಖ್ಯ ಎನ್ನುತ್ತಿದ್ದಾರೆ. ಮಕ್ಕಳನ್ನು ಧಾರ್ಮಿಕ‌ ದ್ವೇಷ ಮೂಡಿಸಲು ದುರ್ಬಳಕೆ‌ಮಾಡಿದ್ದು ಕ್ರಿಮಿನಲ್‌ ಅಪರಾಧ. ಇದಕ್ಕಾಗಿ ಕಾಮತ್ ವಿರುದ್ಧ ಸರ್ಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ವಿಧಾನಸಭಾಧ್ಯಕ್ಷರೂ ಅವರ ವಿರುದ್ದ ಕ್ರಮ‌ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ, ‘ಯಾವುದಾದರೂ ವಿದ್ಯಾರ್ಥಿಯ ಪೋಷಕರು ಲಿಖಿತ ದೂರು ನೀಡಿದ್ದಾರೆಯೇ? ಇದ್ದರೆ ಅದನ್ನು ವೇದವ್ಯಾಸ ಕಾಮತ್ ಬಹಿರಂಗಪಡಿಸಬೇಕು. ಶಿಕ್ಷಕಿ ತಪ್ಪೆಸಗಿದ್ದರೆ, ಆ ಬಗ್ಗೆ ವಿದ್ಯಾರ್ಥಿಯ ಪೋಷಕರು ಶಿಕ್ಷಕ –ರಕ್ಷಕ ಸಂಘದ ಗಮನಕ್ಕೆ ತಂದಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ನಿಯೋಗದಲ್ಲಿ ವಕೀಲರಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ಸಾಮಾಜಿಕ ಕಾರ್ಯಕರ್ತರಾದ ಮಂಜುಳಾ ನಾಯಕ್,  ಪಿ.ವಿ ಮೋಹನ್,  ಕೆ.ಅಶ್ರಫ್, ಮುಹಮ್ಮದ್ ಕುಂಜತ್ತಬೈಲ್, ಬಾಲಕೃಷ್ಣ ಶೆಟ್ಟಿ,  ಸುನಿಲ್ ಕುಮಾರ್ ಬಜಾಲ್, ಜಯಂತಿ ಬಿ ಶೆಟ್ಟಿ, ಭಾರತಿ ಬೋಳಾರ, ಸ್ಟ್ಯಾನಿ ಅಳ್ವಾರಿಸ್, ಎರಿಕ್ ಲೋಬೊ, ಅನಿಲ್ ಲೋಬೊ, ಸಮರ್ಥ್ ಭಟ್, ಯೋಗೀಶ್ ನಾಯಕ್, ನೆಲ್ಸನ್ ರೋಚ್,  ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಯೋಗಿತಾ, ನಿವೃತ್ತ ಪ್ರಾಧ್ಯಾಪಕ ಶಿವರಾಮ ಶೆಟ್ಟಿ,  ವಸಂತ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT