ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ತಪಾಸಣೆಗೆ ಕಾಸರಗೋಡಿಗೆ ತಜ್ಞರ ಆಗಮನ

Last Updated 5 ಫೆಬ್ರುವರಿ 2020, 14:08 IST
ಅಕ್ಷರ ಗಾತ್ರ

ಬದಿಯಡ್ಕ: ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆಗಾಗಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಡಾ.ಬಿ.ಲೈಲಾ ಅವರನ್ನೊಳಗೊಂಡ ತಜ್ಞರ ತಂಡ ಕಾಸರಗೋಡು ಜಿಲ್ಲೆಗೆ ಬಂದಿಳಿದಿದೆ.

ಇದೀಗ ಕಾಂಞಂಗಾಡಿನಲ್ಲಿರುವ ಈ ತಂಡ ಕಾಸರಗೋಡು ಜನರಲ್ ಆಸ್ಪತ್ರೆಗೂ ಭೇಟಿ ನೀಡಲಿದೆ. ತಜ್ಞರ ತಂಡವು ಮೂರು ದಿನಗಳ ಕಾಲ ಕಾಸರಗೋಡು ಜಿಲ್ಲೆಯ ವೈದ್ಯಾಧಿಕಾರಿಗಳ ಜತೆ ಕೊರೊನಾ ನಿಯಂತ್ರಣದ ಕುರಿತು ಸಮಾಲೋಚನೆ ನಡೆಸಲಿದೆ.

ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ವೈದ್ಯಕೀಯ ಕೊಠಡಿಯನ್ನು ತೆರೆಯಲಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಶ್ವಾಸಕೋಶ ತಜ್ಞರು, ಜನರಲ್ ವೈದ್ಯರು, ಇಎನ್‌ಟಿ ವೈದ್ಯರು ಹಾಗೂ ನರರೋಗ ತಜ್ಞರು ಸೇರಿದ ವಿಶೇಷ ಸಮಿತಿ ರಚಿಸಲಾಗಿದೆ. ಕೊರೊನಾ ಬಾಧಿಸಿದ ಇಬ್ಬರು ರೋಗಿಗಳ ಆರೋಗ್ಯ ತೃಪ್ತಿಕರವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಚೀನಾದಿಂದ ಕಾಸರಗೋಡು ಜಿಲ್ಲೆಗೆ ಬಂದ 94 ಮಂದಿ ಆರೋಗ್ಯ ಇಲಾಖೆಯ ಸುಪರ್ದಿಯಲ್ಲಿದ್ದಾರೆ. ಈ ಪೈಕಿ 16 ಮಂದಿಯ ರಕ್ತದ ಮಾದರಿಯನ್ನು ಆಲಪ್ಪುಳದ ವೈರಾಲಜಿ ಪ್ರಯೋಗಾಲಯಕ್ಕೆ ತಪಾಸಣೆಗಾಗಿ ಕಳುಹಿಸಲಾಗಿದೆ.

ಕೇರಳ ರಾಜ್ಯದಲ್ಲಿ ಒಟ್ಟು 2,421 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿದೆ. ಇವರೆಲ್ಲರೂ ಮುಂದಿನ 28 ದಿನಗಳ ಕಾಲ ಯಾವುದೇ ಕಾರಣಕ್ಕೂ ಮನೆಯಿಂದ ಹೊರಕ್ಕೆ ಬಾರದಂತೆ ಕಠಿಣ ಆದೇಶ ನೀಡಲಾಗಿದೆ. ಅವರ ಮಕ್ಕಳಿಗೂ ಶಾಲೆಗೆ ತೆರಳದಂತೆ ಸೂಚಿಸಲಾಗಿದೆ.

‘ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯು ಹೆಚ್ಚಿನ ಮುಂಜಾಗ್ರತೆ ವಹಿಸಿದೆ. ಕೊರೊನಾ ಬಾಧಿತ ವ್ಯಕ್ತಿಯ ನಿಕಟ ಸಂಪರ್ಕದಲ್ಲಿದ್ದ ವ್ಯಕ್ತಿಗಳ ರಕ್ತವನ್ನೂ ತಪಾಸಣೆಗೆ ಕಳುಹಿಸಲಾಗಿದೆ. 85 ಮಂದಿಯ ಬಗ್ಗೆ ನಿಗಾ ವಹಿಸಲಾಗಿದ್ದು, ಈ ಪೈಕಿ 12 ಮಂದಿಯ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ 24 ಗಂಟೆಯೂ ಸನ್ನದ್ಧವಾಗಿರುವ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ’ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಮಾಹಿತಿ ನೀಡಿದ್ದಾರೆ.

ಕಠಿಣ ಕ್ರಮದ ಎಚ್ಚರಿಕೆ: ಕೊರೊನಾ ವೈರಸ್‌ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಸರಗೋಡು ಜಿಲ್ಲಾ ವರಿಷ್ಠಾಧಿಕಾರಿ ಎಚ್ಚರಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT