ಸೋಮವಾರ, ಜೂನ್ 27, 2022
28 °C

2 ವರ್ಷದಲ್ಲಿ 29 ಕೈದಿಗಳಿಗೆ ಜಾಮೀನು: ಜೈಲಿನಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಕೋವಿಡ್‌–19 ಪ್ರಕರಣ ಹೆಚ್ಚಳವಾಗಿದ್ದು, ಒಂದು ವರ್ಷದಲ್ಲಿ 29 ವಿಚಾರಣಾಧೀನ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಇಲ್ಲಿನ ಕಾರಾಗೃಹದಲ್ಲಿ 210 ಕೈದಿಗಳನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಇದ್ದು, ಗುರುವಾರ 328 ವಿಚಾರಣಾಧೀನ ಕೈದಿಗಳಿದ್ದರು. ಕಾರಾಗೃಹದ ಸೆಲ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಕೈದಿಗಳನ್ನು ಹಾಕುವುದರಿಂದ ಸೋಂಕು ನಿಯಂತ್ರಣ ಕಷ್ಟವಾಗುತ್ತಿದೆ. ಒಂದು ವರ್ಷದಲ್ಲಿ 39 ವಿಚಾರಣಾಧೀನ ಕೈದಿಗಳು ಹಾಗೂ 14 ಸಿಬ್ಬಂದಿಗೆ ಕೋವಿಡ್‌–19 ದೃಢವಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಗರಿಷ್ಠ 7 ವರ್ಷದೊಳಗೆ ಶಿಕ್ಷೆ ಆಗಬಹುದಾದ ಪ್ರಕರಣದ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ನ್ಯಾಯಾಧೀಶರು, ಪೊಲೀಸ್ ಕಮಿಷನರ್, ಎಸ್ಪಿ, ಜೈಲು ಅಧೀಕ್ಷಕರು, ಸರ್ಕಾರಿ ಅಭಿಯೋಜಕರನ್ನು ಒಳಗೊಂಡ ಸಮಿತಿಯು ಪರಿಶೀಲನೆ ನಡೆಸಿ, ಅರ್ಹ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅಧಿಕಾರ ಹೊಂದಿದೆ. ಅದರಂತೆ ಕಳೆದ ವರ್ಷ 14, ಈ ವರ್ಷ 15 ಸೇರಿದಂತೆ 29 ವಿಚಾರಣಾಧೀನ ಕೈದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜೈಲು ಅಧೀಕ್ಷಕ ಚಂದನ್ ಪಟೇಲ್ ತಿಳಿಸಿದ್ದಾರೆ.

ಗಂಭೀರ ಸ್ವರೂಪವಲ್ಲದ ಅಪ ರಾಧದಲ್ಲಿ ಬಂಧಿತರಾಗಿ, ಮನೆಯ ಬಡತನದ ಅಥವಾ ಇನ್ಯಾವುದೋ ಕಾರಣದಿಂದ ಜಾಮೀನು ಪಡೆಯಲು ಪ್ರಯತ್ನಿಸದೆ ಕಾರಾಗೃಹದಲ್ಲೇ ಉಳಿದವರನ್ನು ಸನ್ನಡತೆಯನ್ನು ಗಮನಿಸಿ, ಜಾಮೀನಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಕಾರಾಗೃಹಕ್ಕೆ ಬರುವ ಶೇ 95ರಷ್ಟು ಮಂದಿಯಲ್ಲಿ ಸೋಂಕು ಇರುತ್ತದೆ. ಕಾರಾಗೃಹಕ್ಕೆ ಸೇರಿಸಿಕೊಳ್ಳುವಾಗ ರ‍್ಯಾಪಿಡ್‌ ಟೆಸ್ಟ್ ಮಾಡಿಸಲಾಗುತ್ತದೆ. ಅದರಲ್ಲಿ ನೆಗೆಟಿವ್ ಬಂದರೂ ಪ್ರತ್ಯೇಕ ಇರಿಸಲಾಗುತ್ತದೆ. ಗಂಟಲು ದ್ರವ ಪರೀಕ್ಷೆಯ ವರದಿ ಎರಡು ದಿನ ತಡವಾಗುವುದರಿಂದ ಸೋಂಕು ಇದ್ದರೆ, ಈ ಸಂದರ್ಭದಲ್ಲಿ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಕಾರಾಗೃಹದಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಸವಾಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು