ಭಾನುವಾರ, ಜೂನ್ 26, 2022
21 °C
136 ಕುಟುಂಬಗಳಿರುವ ಗ್ರಾಮ– ಒಂದು ವರ್ಷದಲ್ಲಿ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ

ಬೆಳ್ತಂಗಡಿ: ಕೋವಿಡ್‌ನಿಂದ ದೂರ ಉಳಿದ ‘ಎಳನೀರು’ ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ತಂಗಡಿ: ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದರೂ, ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಎಳನೀರು ಗ್ರಾಮದ ಜನರು ಒಂದು ವರ್ಷದಿಂದ ಕೋವಿಡ್‌ನಿಂದ ದೂರ ಉಳಿದಿದ್ದಾರೆ.

ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳನೀರು ಗ್ರಾಮದಲ್ಲಿ 136 ಕುಟುಂಬಗಳಿದ್ದು, 632 ಮಂದಿ ವಾಸಿಸುತ್ತಿದ್ದಾರೆ. ಇವರು ಕೋವಿಡ್‌ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಅನಗತ್ಯವಾಗಿ ಮನೆಯಿಂದ ಹೊರ ಬರುವುದಿಲ್ಲ. ಹೀಗಾಗಿ, ಇಲ್ಲಿಯವರೆಗೆ ಒಂದೇ ಒಂದು ಕೋವಿಡ್‌ ಪ್ರಕರಣ ಈ ಹಳ್ಳಿಯಲ್ಲಿ ಕಾಣಿಸಿಕೊಂಡಿಲ್ಲ.

‘ಗ್ರಾಮದಲ್ಲಿರುವ 632 ಮಂದಿಗೂ ಕೋವಿಡ್– 19 ಪರೀಕ್ಷೆ ಮಾಡಲಾಗಿದ್ದು, ಒಬ್ಬರಿಗೂ ಸೋಂಕು ಕಾಣಿಸಿಕೊಂಡಿಲ್ಲ. 45 ವರ್ಷ ಮೇಲಿನ 135 ಮಂದಿಯಲ್ಲಿ 120 ಜನ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ. ಎರಡನೇ ಸುತ್ತಿನ ಲಸಿಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ’ ಎಂದು ವೈದ್ಯಾಧಿಕಾರಿ ಡಾ.ಕಾವ್ಯಾ ತಿಳಿಸಿದ್ದಾರೆ.

ಮಾಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಕಾವ್ಯಾ ಮತ್ತು ಇತರ ಸಿಬ್ಬಂದಿ ಎಳನೀರು ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಗ್ರಾಮಸ್ಥರ ಆರೋಗ್ಯದ ಕಾಳಜಿ ವಹಿಸುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ ದೂರ: ‘ಬೆಳ್ತಂಗಡಿ ತಾಲ್ಲೂಕು ಕಚೇರಿಯಿಂದ ದಿಡುಪೆ ಮೂಲಕ ಈ ಹಳ್ಳಿಗೆ 35 ಕಿ.ಮೀ. ದೂರವಿದೆ. ಆದರೆ, ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಿಲ್ಲ. ಹೀಗಾಗಿ, ಕಾರ್ಕಳ- ಬಜಗೋಳಿ ಅಥವಾ ಚಾರ್ಮಾಡಿ- ಸಂಸೆಯ ಮೂಲಕ 120 ಕಿ.ಮೀ. ಸುತ್ತಿ ಹೋಗಬೇಕು. ಅಲ್ಲಿನ ಜನರು ಮುನ್ನೆಚ್ಚರಿಕೆ ವಹಿಸಿದ ಕಾರಣ ಈವರೆಗೆ ಕೋವಿಡ್‌ ಪತ್ತೆಯಾಗಿಲ್ಲ’ ಎನ್ನುತ್ತಾರೆ ಡಾ.ಕಾವ್ಯಾ.

‘ಯಾರಿಗಾದರೂ ಜ್ವರ ಅಥವಾ ಇತರ ಲಕ್ಷಣಗಳು ಇದೆಯೇ ಎಂದು ಕಂಡುಹಿಡಿಯಲು ಆಶಾ ಕಾರ್ಯಕರ್ತೆಯರು ನಿತ್ಯ ನಿವಾಸಿಗಳ ಮೇಲ್ವಿಚಾರಣೆ ಮಾಡುತ್ತಾರೆ. ನಿವಾಸಿಗಳು ಜಾಗರೂಕರಾಗಿದ್ದು, ಹೊರಗಿನವರು ಗ್ರಾಮಕ್ಕೆ ಬಂದರೆ, ಆರೋಗ್ಯ ಕಾರ್ಯಕರ್ತರಿಗೆ ತಿಳಿಸುತ್ತಾರೆ. ಗ್ರಾಮಕ್ಕೆ ಹಿಂದಿರುಗಿದವರನ್ನು ಅವರ ಮನೆಗಳಲ್ಲಿ ನಿರ್ಬಂಧಿಸಲಾಗುತ್ತದೆ. ಐಸೊಲೇಷನ್ ಪೂರ್ಣಗೊಳಿಸುವ ಮೊದಲು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಲು ಬಿಡುವುದಿಲ್ಲ’ ಎಂದು ಅಲ್ಲಿನ ಆಶಾ ಕಾರ್ಯಕರ್ತೆಯರು ತಿಳಿಸಿದ್ದಾರೆ.

ದಿನಸಿ ಮತ್ತು ದವಸ ಧಾನ್ಯ ಹಾಗೂ ಇತರ ಅಗತ್ಯ ವಸ್ತುಗಳಿಗಾಗಿ, ಅವರು ಸುಮಾರು 6 ಕಿ.ಮೀ. ದೂರದಲ್ಲಿರುವ ಕಳಸವನ್ನು ಅವಲಂಬಿಸಿದ್ದಾರೆ. ಕೋವಿಡ್-19 ಕಾರ್ಯಪಡೆ ಸದಸ್ಯರು ಗ್ರಾಮಸ್ಥರಿಗೆ ಅಗತ್ಯವಾದ ವಸ್ತುಗಳನ್ನು ತಂದು ಸಹಕರಿಸುತ್ತಾರೆ.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು, ಆರೋಗ್ಯ ಕಾರ್ಯಕರ್ತರ, ಅಧಿಕಾರಿಗಳ ಮತ್ತು ನಿವಾಸಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲಿಯೇ ಕೋವಿಡ್‌ ಲಸಿಕಾ ಶಿಬಿರಗಳನ್ನು ನಡೆಸುವಂತೆ ನಿರ್ದೇಶಿಸಿದ್ದಾರೆ.

ಮನೆ ಮನೆಗೆ ಹೋಗಿ ಅರಿವು: ‘ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಆರಂಭದಲ್ಲೇ ಮಾಡಿದ್ದೇವೆ. ಏನೇ ಕೆಲಸಗಳಿದ್ದರೂ ಇಲ್ಲೇ ಮಾಡಿ ಎಂದು ಮನೆ ಮನೆಗೆ ಹೋಗಿ ಅರಿವು ಮೂಡಿಸಿದ್ದೇವೆ. ಈ ಹಳ್ಳಿಯ ಜನ ನಾನಾ ಕೆಲಸ ಕಾರ್ಯಗಳಲ್ಲಿ ರಾಜ್ಯದಾದ್ಯಂತ ಇದ್ದರೂ ಊರಿನ ಹಿತದೃಷ್ಟಿಯಿಂದ ಹಳ್ಳಿಗೆ ಬರಬೇಡಿ ಎಂದು ಕೇಳಿಕೊಂಡಿದ್ದೆವು. ಅವರ ಸಹಕಾರವೂ ಇತ್ತು’ ಎನ್ನುತ್ತಾರೆ ಎಳನೀರು ವಾರ್ಡ್‌ನ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಜೈನ್.

‘ಎಳನೀರಿನ ಜನ ಅನಗತ್ಯವಾಗಿ ಹೊರಗೆ ಹೋಗುತ್ತಿಲ್ಲ. ಹೊರಗಿನ ಸಂಪರ್ಕ ಕಡಿಮೆ ಇರುವ ಕಾರಣ ಈವರೆಗೆ ಕೋವಿಡ್‌ ಕಾಣಿಸಿಕೊಂಡಿಲ್ಲ’ ಎಂದು ಮಲವಂತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು