ಶುಕ್ರವಾರ, ಮೇ 14, 2021
21 °C
ಮಕ್ಕಳು ಹೆಚ್ಚು ಸುರಕ್ಷಿತ, ಸಾವಿನ ಪ್ರಮಾಣ ಕಡಿಮೆ

ಕೋವಿಡ್: ಮೃತರಲ್ಲಿ ಪುರುಷರೇ ಅಧಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 40 ಸಾವಿರ ದಾಟಿದೆ. ಕೋವಿಡ್‌ ದೃಢಪಟ್ಟು ಚೇತರಿಸಿಕೊಂಡವರಲ್ಲಿ ವಿವಿಧ ವಯೋಮಾನದವರು ಇದ್ದರೂ, ಶೀಘ್ರ ಗುಣಮುಖರಾಗಿ ಮನೆ ಸೇರಿದವರಲ್ಲಿ ಮಕ್ಕಳು ಮೊದಲ ಸಾಲಿನಲ್ಲಿದ್ದಾರೆ.

ಕಳೆದ ವರ್ಷ ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆ ಎಲ್ಲೆಡೆ ವ್ಯಾಪಿಸಿದಾಗ ಆರೋಗ್ಯ ಇಲಾಖೆ, ವೃದ್ಧರು, ಮಕ್ಕಳು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಹೆಚ್ಚು ಸುರಕ್ಷಿತವಾಗಿರುವಂತೆ ಸಲಹೆ ನೀಡಿತ್ತು. ಅದೇ, ಕಾರಣಕ್ಕೆ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಿದರೂ, ಜನದಟ್ಟಣಿ ಇರುವ ಪ್ರದೇಶಗಳಿಗೆ ವೃದ್ಧರು ಮತ್ತು ಮಕ್ಕಳ ಪ್ರವೇಶವನ್ನು ನಿಷೇಧಿಸಲಾಗಿತ್ತು.

ಕೋವಿಡ್ ಮೊದಲ ಅಲೆಯ ವೇಳೆ ಹಾಗೂ ಈಗಿನ ಎರಡನೇ ಅಲೆಯಲ್ಲಿ ಐದು ವರ್ಷದೊಳಗಿನ ಒಟ್ಟು 622 ಮಕ್ಕಳಿಗೆ ಕೋವಿಡ್ ದೃಢಪಟ್ಟಿತ್ತು. ಒಂದು ಹೆಣ್ಣು ಮಗು ಹಾಗೂ ಇಬ್ಬರು ಗಂಡು ಮಕ್ಕಳು ಹೊರತುಪಡಿಸಿ, ಇನ್ನುಳಿದ ಎಲ್ಲರೂ ಚೇತರಿಸಿಕೊಂಡಿದ್ದಾರೆ. 5–10 ವರ್ಷ ವಯೋಮಾನದಲ್ಲಿ ಒಟ್ಟು 797 ಮಕ್ಕಳಿಗೆ ಕೋವಿಡ್ ದೃಢಪಟ್ಟಿತ್ತು. ಎಲ್ಲ ಮಕ್ಕಳೂ ಗುಣಮುಖರಾಗಿ, ಸುರಕ್ಷಿತವಾಗಿದ್ದಾರೆ. 11–15ರ ವಯೋಮಾನದ 1,015 ಮಕ್ಕಳಿಗೆ ಸೋಂಕು ತಗುಲಿದ್ದರೂ, ಒಬ್ಬ ಬಾಲಕ ಮಾತ್ರ ಮೃತಪಟ್ಟಿದ್ದು, ಇನ್ನುಳಿದ ಎಲ್ಲರೂ ಗುಣಮುಖರಾಗಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಆರೋಗ್ಯ ಇಲಾಖೆ ಅಂಕಿ–ಅಂಶದ ಪ್ರಕಾರ, ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತರಾದವರಲ್ಲಿ 61–70ರ ನಡುವಿನ ವಯಸ್ಸಿನವರೇ ಹೆಚ್ಚು. ಈ ವಯೋಮಾನದ 233 ಜನರು ಸೋಂಕಿನಿಂದ ಚೇತರಿಸಿಕೊಳ್ಳಲಾಗದೆ, ಮೃತಪಟ್ಟಿದ್ದಾರೆ. 71–80ರ ವಯೋಮಾನದ 166 ಜನರು ಸೋಂಕಿಗೆ ಒಳಗಾಗಿ, ಜೀವ ಕಳೆದುಕೊಂಡಿದ್ದಾರೆ. ಹೀಗೆ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಂಡವರಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ದುಪ್ಪಟು ಇದೆ.

ಶುಕ್ರವಾರದವರೆಗಿನ ಮಾಹಿತಿಯಂತೆ ಜಿಲ್ಲೆಯಲ್ಲಿ 757 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅವರಲ್ಲಿ 226 ಮಹಿಳೆಯರಾದರೆ, 531 ಮಂದಿ ಪುರುಷರಾಗಿದ್ದಾರೆ.

‘ಎರಡನೇ ಅಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳು ಹೆಚ್ಚು ಸುರಕ್ಷಿತವಾಗಿದ್ದಾರೆ. 16ರಿಂದ 30 ವರ್ಷ ನಡುವಿನ ಹೆಚ್ಚಿನವರಿಗೆ ಸೋಂಕು ತಗುಲಿದೆ. ಪಿಯುಸಿ ತರಗತಿ ನಡೆಯುತ್ತಿದ್ದ ಕಾರಣಕ್ಕೆ ಕಾಲೇಜಿನಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು ದೃಢಪಟ್ಟಾಗ, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಹಾಗಾಗಿ, ಹಲವರಲ್ಲಿ ಸೋಂಕು ಇರುವುದು ಆರಂಭದಲ್ಲೇ ಪತ್ತೆಯಾಯಿತು. ಇಂತಹವರಿಗೆ ಕಡ್ಡಾಯವಾಗಿ ಐಸೊಲೇಷನ್‌ನಲ್ಲಿ ಇರುವಂತೆ ಸೂಚಿಸಲಾಗಿದ್ದರೂ, ಅವರು ಕಣ್ಣು ತಪ್ಪಿಸಿ ಸಾರ್ವಜನಿಕ ಸ್ಥಳದಲ್ಲಿ ಓಡಾಡಿದ ಜೊತೆಗೆ, ಕುಟುಂಬದ ಹಿರಿಯರಿಗೂ ಸೋಂಕು ಹರಡುವಂತೆ ಮಾಡಿದ್ದಾರೆ’ ಎನ್ನುತ್ತಾರೆ ಆರೋಗ್ಯ ಇಲಾಖೆ ಪ್ರಮುಖರು.

ಸೋಂಕು ತಗುಲಿದ ಮಧ್ಯ ವಯಸ್ಸಿನವರಲ್ಲಿ ಸಮಸ್ಯೆ ಬಿಗಡಾಯಿಸಿದೆ. ಅದು ಅವರು ತಡವಾಗಿ ಆಸ್ಪತ್ರೆಗೆ ಸೇರಿದ ಕಾರಣವೂ ಇರಬಹುದು. ಇದನ್ನು ಗಮನಲ್ಲಿಟ್ಟು, ಮಕ್ಕಳಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದಾಗ, ಹೆಚ್ಚು ನಿಗಾವಹಿಸಿ, ಕಂಟೈನ್‌ಮೆಂಟ್ ವಲಯ ಮಾಡಿ, ರೋಗ ಹರಡುವುದನ್ನು ನಿಯಂತ್ರಿಸಲಾಗಿದೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು