ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆ ಪಡೆಯದೆ ರೋಗಿಗಳ ಸೇವೆ ಮಾಡುತ್ತಿರುವ ಹಿರಿಯ ಶುಶ್ರೂಷಕಿ

ನಿವೃತ್ತಿಯ ಅಂಚಿನಲ್ಲಿ ಹಿರಿಯ ಶುಶ್ರೂಷಕಿ ಯೋಗಿಣಿ ಕೆ.ಟಿ. ಸುವರ್ಣ
Last Updated 20 ಮೇ 2021, 4:02 IST
ಅಕ್ಷರ ಗಾತ್ರ

ಉಳ್ಳಾಲ: ಆರೋಗ್ಯ ಇಲಾಖೆಯಲ್ಲಿ 36 ವರ್ಷಗಳಿಂದ ಕರ್ತವ್ಯ ನಿರ್ವಹಿಸು ತ್ತಿರುವ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಶುಶ್ರೂಷಕಿ ಯೋಗಿಣಿ ಕೆ.ಟಿ ಸುವರ್ಣ ಎರಡೂವರೆ ತಿಂಗಳಿಂದ ರಜೆ ಪಡೆಯದೆ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ನಿವೃತ್ತಿ ಹೊಂದಲಿರುವ ಅವರ ಕರ್ತವ್ಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ.

ರಾಜ್ಯ ಹಿಂದುಳಿದ ಆಯೋಗದ ನಿರ್ದೇಶಕ ಕೆ.ಟಿ. ಸುವರ್ಣ ಅವರ ಪತ್ನಿಯಾಗಿರುವಯೋಗಿಣಿ ಅವರು ರೋಗಿಗಳ ಸೇವೆಯ ಹಂಬಲದಲ್ಲಿ ಸಂತೋಷ ಕಂಡವರು. ಕೋವಿಡ್‌ 2ನೇ ಅಲೆಯ ಸಂದರ್ಭದಲ್ಲಿ ರಜೆ ಪಡೆಯದೆ, ಸ್ವಇಚ್ಛೆಯಿಂದ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ಕೋವಿಡ್‌ ಮೊದಲ ಅಲೆಯ ಸಂದರ್ಭ ಸಂಪೂರ್ಣವಾಗಿ ಹೆದರಿದ್ದೆ. ಕರ್ತವ್ಯಕ್ಕೆ ಬರುವ ಸಂದರ್ಭವೂ ಆತಂಕ ಕಾಡುತ್ತಿತ್ತು. ಮನೆಯಲ್ಲಿಯೂ ಕೆಲಸಕ್ಕೆ ಹೋಗದಂತೆ ಮನವಿ ಮಾಡುತ್ತಿದ್ದರು. ಆದರೂ ಸಿಬ್ಬಂದಿ ಕೊರತೆ, ವೈದ್ಯರ ಕೊರತೆ ಮನಗಂಡು ಕಾರ್ಯಕ್ಕೆ ಹಾಜರಾಗುತ್ತಿದ್ದೆ. ಎರಡನೇ ಅಲೆಯ ಸಂದರ್ಭ ನಾನೇ ಮುಂದೆ ನಿಂತು, ಎರಡು ತಿಂಗಳಿನಿಂದಲೂ ಒಂದೂ ರಜೆಯನ್ನು ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದೇನೆ. ಇನ್ನೇನಿದ್ದರೂ ತಿಂಗಳು ಮಾತ್ರ. ಆ ನಂತರ ಬಿಳಿ ಕೋಟು ಧರಿಸುವ ಭಾಗ್ಯವಿಲ್ಲ. ಅಷ್ಟರವರೆಗೆ ಜನರ ಸೇವೆಯ ಭಾಗ್ಯವನ್ನು ತೀರಿಸಿಯೇ ನಿವೃತ್ತಿಯಾಗುವೆನು ಅನ್ನುವ ಇಚ್ಛೆಯಂತೆ ಕರ್ತವ್ಯ ನಿರ್ವಹಿಸಿದ್ದೇನೆ’ ಎಂದು ಅವರು ಹೇಳುತ್ತಾರೆ.

‘ನನ್ನ ಸೇವಾವಧಿಯಲ್ಲಿ ಎಲ್ಲ ಸಹೋದ್ಯೋಗಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ರೋಗಿಗಳನ್ನು ಪ್ರೀತಿಯಿಂದ ಕಂಡಿದ್ದರಿಂದ ಅವರು ನನ್ನನ್ನು ಪ್ರೀತಿಯಿಂದಲೇ ಕಾಣುತ್ತಿದ್ದರು. ಇದರಿಂದಾಗಿ ನಿವೃತ್ತಿ ಹೊಂದುವುದು ಖುಷಿಯಿಲ್ಲ, ತುಂಬಾ ಬೇಜಾರಿದೆ’ ಎನ್ನುತ್ತಾರೆ ಯೋಗಿಣಿ ಸುವರ್ಣ.

‘ಯೋಗಿಣಿ ಸುವರ್ಣ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಏನೇ ಸಮಸ್ಯೆ ಎದುರಾದರೂ ಆಸ್ಪತ್ರೆಯೊಳಗೆ ಎಲ್ಲವನ್ನೂ ನಿಭಾಯಿಸುವವರು. ರಜೆ ಯಿಲ್ಲದೆ ದುಡಿದವರು, ರೋಗಿಗಳನ್ನು ಪ್ರೀತಿಯಿಂದ ಕಂಡವರು. ಅವರ ನಿವೃತ್ತಿ ಆಸ್ಪತ್ರೆ ಸಿಬ್ಬಂದಿಗೆ ಒಂದು ಕೈ ಮುರಿದಂತಾಗಿದೆ’ ಎಂದು 5 ವರ್ಷ ಗಳಿಂದ ಯೋಗಿಣಿ ಅವರ ಜತೆಗೆ ಕರ್ತವ್ಯ ನಿಭಾಯಿಸುತ್ತಿರುವ ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಜಲೀಲ್ ಹೇಳುತ್ತಾರೆ.

ರಾಮಕುಂಜದ ನಿವಾಸಿ ಯೋಗಿಣಿ ಅವರು ಬಡ ಕೃಷಿಕ ಕುಟುಂಬದಿಂದ ಬೆಳೆದು ಬಂದವರು. ಉದ್ಯೋಗ ಅರಸಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 3 ವರ್ಷಗಳ ಕಾಲ ಶುಶ್ರೂಷಕಿ ತರಬೇತಿಯನ್ನು ಪಡೆದು, ನಂತರ ಬೆಂಗಳೂರಿನ ಇಂದಿರಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಿರಿಯ ಶುಶ್ರೂಷಕಿಯಾಗಿ ಉದ್ಯೋಗಕ್ಕೆ ಸೇರ್ಪಡೆಗೊಂಡರು. ಅಲ್ಲಿ ಐದು ವರ್ಷ ಗಳ ಕಾಲ ಸೇವೆ ಸಲ್ಲಿಸಿ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡರು.

ಜಿಲ್ಲೆಯ ಕುರ್ನಾಡು, ಬೋಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ ನಂತರ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳ ಕಾಲ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸಿದವರು. 5 ವರ್ಷ ಗಳಿಂದ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಯೋಗಿಣಿ ಸುವರ್ಣ ಇವರು ಮೇ 31ರಂದು ನಿವೃತ್ತಿಯನ್ನು ಹೊಂದಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT