ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಅಗತ್ಯ ಪಡೆಯಿರಿ: ಇಂಡಿಯಾನಾ ಆಸ್ಪತ್ರೆಯಲ್ಲಿ ಅಭಿಯಾನ

ಇಂಡಿಯಾನಾ ಆಸ್ಪತ್ರೆಯಲ್ಲಿ ಅಭಿಯಾನ ಉದ್ಘಾಟಿಸಿದ ಡಿಸಿ
Last Updated 19 ಮಾರ್ಚ್ 2021, 13:46 IST
ಅಕ್ಷರ ಗಾತ್ರ

ಮಂಗಳೂರು: ‘ಇಂಡಿಯಾನಾ ಆಸ್ಪತ್ರೆಯು ಜನರಿಗೆ ಉಚಿತ ಕೋವಿಡ್‌–19 ನಿರೋಧಕ ಲಸಿಕೆ ನೀಡುವುದಕ್ಕೆ ಮುಂದೆ ಬಂದಿರುವುದು ಶ್ಲಾಘನೀಯ. ಎಲ್ಲ ಖಾಸಗಿ ಆಸ್ಪತ್ರೆಗಳು ಕೂಡ ಇಂತಹ ದಿಟ್ಟ ಹೆಜ್ಜೆ ಇಡಬೇಕು. ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.

ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಕೋವಿಡ್‌–19 ನಿರೋಧಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುತ್ತಿರುವ ಲಸಿಕೆ ಅಭಿಯಾನಕ್ಕೆ ಜನರ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಮತ್ತಷ್ಟು ಸಂಖ್ಯೆಯ ಜನರು ಆಸ್ಪತ್ರೆಗಳಲ್ಲಿ ನೀಡುವ ಲಸಿಕೆ ಪಡೆಯಬೇಕು. ಖಾಸಗಿ ಆಸ್ಪತ್ರೆಗಳು ಕೂಡ ಉಚಿತ ಲಸಿಕೆ ನೀಡುವುದಕ್ಕೆ ಮುಂದೆ ಬರುತ್ತಿವೆ. ಇಂಡಿಯಾನಾ ಆಸ್ಪತ್ರೆ ಜಿಲ್ಲೆಯಾದ್ಯಂತ ಉಚಿತ ಲಸಿಕೆ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯನ್ನು ಕೋವಿಡ್‍ ಮುಕ್ತಗೊಳಿಸುವ ಸಂಕಲ್ಪಕ್ಕೆ ಮುಂದಾಗಿರುವುದು ಸಂತಸದ ಸಂಗತಿ’ ಎಂದು ಹೇಳಿದರು.

ಜಿಲ್ಲಾಡಳಿತ ನಗರದ ಪ್ರಮುಖ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಲಸಿಕೆ ನೀಡುತ್ತಿದೆ. ಎಲ್ಲ ಪ್ರಾಥಮಿಕ, ಸಮುದಾಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದಾಗಿದೆ. ಜಿಲ್ಲೆಯ ಎಲ್ಲ ಜನರು ಕೋವಿಡ್ ಲಸಿಕೆಯನ್ನು ಸರ್ಕಾರಿ ನಿಯಮಾವಳಿ ಅನುಸಾರವಾಗಿ ಉಚಿತವಾಗಿ ಪಡೆಯಬಹುದು’ ಎಂದರು.

‘ಎಲ್ಲರೂ ಕಡ್ಡಾಯವಾಗಿ ಕೋವಿಡ್‌ ನಿಯಾಮಾವಳಿ ಪಾಲಿಸಬೇಕು. ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಕೋವಿಡ್‌ ಲಸಿಕೆ ಬಗ್ಗೆ ಆರೋಗ್ಯ ಕಾರ್ಯಕರ್ತರು ಹೆಚ್ಚು ಪ್ರಚಾರ ಮಾಡುವ ಅಗತ್ಯವಿದೆ. ಕಾಸರಗೋಡು ಗಡಿ ಭಾಗಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಕೆಲ ತಿಂಗಳಿನಿಂದ ಯಾವುದೇ ಸಾವಿನ ಪ್ರಕರಣಗಳು ನಡೆದಿರಲಿಲ್ಲ. ಆದರೆ, ಈಗ ಮತ್ತೆ ಶುರುವಾಗಿವೆ. ಯಾರು ಕೂಡ ಆತಂಕ ಪಡಬೇಕಾಗಿಲ್ಲ. ಕೂಡಲೇ ಲಸಿಕೆ ಪಡೆಯಿರಿ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಡಾ.ಮೋನಾ ರೋತ್‌, ಇಂಡಿಯಾನಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ಅಧ್ಯಕ್ಷ ಡಾ.ಅಲಿ ಕುಂಬ್ಳೆ ಮತ್ತು ಆಸ್ಪತ್ರೆಯ ಹಿರಿಯ ಸಿಬ್ಬಂದಿ ಇದ್ದರು.

‘ಉಚಿತ ಲಸಿಕೆಗೆ ಕರೆ ಮಾಡಿ’

ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಉಚಿತ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್‌ ಮುಕ್ತ ಜಿಲ್ಲೆ ಮಾಡುವ ಸಂಕಲ್ಪ ಮಾಡೋಣ ಎಂದುಇಂಡಿಯಾನಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಹೇಳಿದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ಇದಾಗಿದೆ. ಯಾವುದೇ ತರಹದ ಅಡ್ಡ ಪರಿಣಾಮಗಳಿಲ್ಲ. ಉಚಿತ ಲಸಿಕೆ ಪಡೆಯಲು ಬಯಸುವವರು ಮೊಬೈಲ್‌– 72590–16560 ಗೆ ಕರೆ ಮಾಡಬಹುದು. ಲಸಿಕೆ ನೀಡುವ ದಿನಾಂಕ ಮತ್ತು ಸಮಯ ತಿಳಿಸಲಾಗುವುದು. ಲಸಿಕೆ ಪಡೆಯುವವರು ಯಾವುದಾದರೂ ಗುರುತಿನ ಚೀಟಿ ತರುವುದು ಕಡ್ಡಾಯ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT