ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ವ್ಯವಸ್ಥೆ

ಹೊರ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್‌, ರಿಯಾಯಿತಿ ದರದಲ್ಲಿ ತಪಾಸಣೆ: ಯು.ಟಿ. ಖಾದರ್
Last Updated 12 ಜೂನ್ 2020, 19:49 IST
ಅಕ್ಷರ ಗಾತ್ರ

ಮಂಗಳೂರು: ಹೊರ ರಾಜ್ಯಗಳಿಂದ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವವರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಕ್ವಾರಂಟೈನ್‌ ನಿರ್ವಹಣೆ ಮಾಡಲಾಗುತ್ತಿದೆ.‌

‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ಆರೋಗ್ಯ ಖಾತೆ ಮಾಜಿ ಸಚಿವ ಹಾಗೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್‌, ‘ಹೊರ ರಾಜ್ಯದಿಂದ ಬರುವವರನ್ನು ಕ್ವಾರಂಟೈನ್‌ ಇಲ್ಲದೇ ಮನೆಗೆ ಕಳುಹಿಸುವುದರಿಂದ ಸೋಂಕು ಹರಡುವ ಅಪಾಯವಿದೆ. ಅಲ್ಲದೇ, ಹೊರಗಿನಿಂದ ಬಂದವರನ್ನು ಅನುಮಾನದಿಂದ ನೋಡುವ, ದೂರ ಇಡುವ ಮತ್ತು ವೈಮನಸ್ಸು ಸೃಷ್ಟಿಸುವುದಕ್ಕೂ ಕಾರಣವಾಗಬಹುದು. ಇದೆಲ್ಲವನ್ನೂ ತಡೆಯಲು ಸ್ಥಳೀಯವಾಗಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ’ ಎಂದರು.

ನೋಡಲ್‌ ಅಧಿಕಾರಿ ನೇಮಕ: ಬೆಳ್ಮ ಗ್ರಾಮ ಪಂಚಾಯಿತಿಯನ್ನು ಕ್ವಾರಂಟೈನ್‌ ಸೌಲಭ್ಯದ ನೋಡಲ್‌ ಗ್ರಾಮ ಪಂಚಾಯಿತಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

‘ನಮ್ಮ ಕ್ಷೇತ್ರಕ್ಕೆ ಯಾವುದೇ ರಾಜ್ಯದಲ್ಲಿರುವವರೂ ವಾಪಸ್‌ ಬರಬಹುದು. ಯಾರನ್ನೂ ನಾವು ತಡೆಯುವುದಿಲ್ಲ. ಕ್ಷೇತ್ರಕ್ಕೆ ಬಂದವರು ಬೆಳ್ಮ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಬೇಕು. ಅವರು ಸೂಚಿಸುವ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯ ಅಥವಾ ಶಾಲೆಯಲ್ಲಿ ಏಳು ದಿನಗಳ ಕಾಲ ಇರಬೇಕು. ಈ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗಿದೆ. ಕ್ವಾರಂಟೈನ್‌ನಲ್ಲಿ ಇರುವವರಿಗೆ ಅವರ ಮನೆಯವರೇ ಊಟ ಪೂರೈಸಬೇಕು’ ಎಂದು ಹೇಳಿದರು.

ಹೋಟೆಲ್‌ ಕ್ವಾರಂಟೈನ್‌ಗೂ ವ್ಯವಸ್ಥೆ: ಬೇರೆ ರಾಜ್ಯಗಳಿಂದ ಬರುವವರು ಹೋಟೆಲ್‌ ಕ್ವಾರಂಟೈನ್‌ಗೆ ಒಳಗಾಗಲು ಮುಂದಾದರೆ, ಕನಿಷ್ಠ ದರದಲ್ಲಿ ಹೋಟೆಲ್‌ಗಳಲ್ಲಿಯೂ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಿತ್ಯ ₹700, ₹ 500 ದರದಲ್ಲಿ ಹೋಟೆಲ್‌ ಕೋಣೆಗಳೂ ಲಭ್ಯವಾಗಿವೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿದರೆ ಸಾಕು ಎಂದು ತಿಳಿಸಿದರು.

ಹೊರ ರಾಜ್ಯಗಳಿಂದ ಬಂದವರು ಏಳು ದಿನ ಸಾಂಸ್ಥಿಕ ಕ್ವಾರಂಟೈನ್‌ ಪೂರ್ಣಗೊಳಿಸಿದ ನಂತರ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದಕ್ಕಾಗಿ ಕೆಲವೊಂದು ಪರೀಕ್ಷಾ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಸೌಲಭ್ಯ ಒದಗಿಸಲಾಗುತ್ತದೆ. ಒಂದು ವೇಳೆ ವರದಿ ನೆಗೆಟಿವ್‌ ಬಂದಲ್ಲಿ, ಅಂಥವರು ನಿರಾಳವಾಗಿ ಮನೆಗೆ ಹೋಗಬಹುದು ಎಂದು ಹೇಳಿದರು.

ಕೋವಿಡ್‌–19 ಸೋಂಕು ದೃಢಪಟ್ಟಲ್ಲಿ, ಅಂಥವರನ್ನು ಆಸ್ಪತ್ರೆಗೆ ಕಳುಹಿಸಿ, ಚಿಕಿತ್ಸೆ ಒದಗಿಸಲಾಗುತ್ತದೆ. ಜತೆಗೆ ಆ ಪ್ರದೇಶವನ್ನು ಸೀಲ್‌ಡೌನ್ ಮಾಡುವುದು ಹಾಗೂ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸುವ ಪ್ರಕ್ರಿಯೆ ಮಾಡಲಾಗುತ್ತದೆ. ಸೀಲ್‌ಡೌನ್‌ ಆದ ಪ್ರದೇಶದಲ್ಲಿ ಅಗತ್ಯ ವಸ್ತುಗಳನ್ನು ಸ್ಥಳೀಯ ಸಂಸ್ಥೆಗಳಿಂದಲೇ ಪೂರೈಕೆ ಮಾಡಲಾಗುತ್ತದೆ ಎಂದು ವಿವರಿಸಿದರು.

‘ಬರುವುದಾದರೆ ಬೇಗ ಬನ್ನಿ’
ಹೊರ ರಾಜ್ಯಗಳಿಂದ ತವರಿಗೆ ಮರಳುವವರು ಆದಷ್ಟು ಬೇಗನೆ ಬಂದರೆ ಒಳ್ಳೆಯದು. ಅವರೆಲ್ಲರೂ ನಮ್ಮವರೇ. ಅವರ ಉದ್ಯೋಗ ಸರಿಯಾಗಿದ್ದಾಗ, ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ತೊಂದರೆಯಲ್ಲಿ ಇರುವ ಸಮಯದಲ್ಲಿ ಅವರನ್ನು ಸ್ವಾಗತಿಸುವುದು ನಮ್ಮ ಕರ್ತವ್ಯ ಕೂಡ ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಸದ್ಯಕ್ಕೆ ಶಾಲೆ–ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹೀಗಾಗಿ ವಸತಿ ನಿಲಯಗಳು ಕ್ವಾರಂಟೈನ್‌ಗೆ ಲಭ್ಯವಾಗಿವೆ. ಇನ್ನಷ್ಟು ವಿಳಂಬವಾದರೆ, ಶಾಲೆ–ಕಾಲೇಜುಗಳು ಆರಂಭವಾಗುತ್ತವೆ. ಆ ಸಂದರ್ಭದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ತೊಂದರೆ ಆಗಲಿದೆ. ಹೀಗಾಗಿ ತಾಯ್ನಾಡಿಗೆ ಮರಳಲು ಬಯಸುವವರು ಆದಷ್ಟು ಬೇಗನೆ ಬರುವುದು ಒಳ್ಳೆಯದು ಎಂದು ಸಲಹೆ ನೀಡಿದರು.

‘ಲಾಕ್‌ಡೌನ್‌ನಲ್ಲೇ ಪರೀಕ್ಷೆ ಮಾಡಬಹುದಿತ್ತು’
ರಾಜ್ಯ ಸರ್ಕಾರ ಈಗ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದನ್ನು ಲಾಕ್‌ಡೌನ್‌ ಅವಧಿಯಲ್ಲಿಯೇ ಮಾಡಬಹುದಿತ್ತು ಎಂದು ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಲಾಕ್‌ಡೌನ್ ಸಂದರ್ಭದಲ್ಲಿ ಜನರೂ ಹೊರಗೆ ಬರುತ್ತಿರಲಿಲ್ಲ. ವಿದ್ಯಾರ್ಥಿಗಳ ಗುರುತಿನ ಚೀಟಿ ಪರಿಶೀಲಿಸಿ, ಅವರಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬಹುದಿತ್ತು. ಇದೀಗ ಲಾಕ್‌ಡೌನ್‌ ಸಡಿಲಿಕೆಯಾಗಿದ್ದು, ಯಾರಿಗೆ ಸೋಂಕು ಇದೆ ಎನ್ನುವುದೇ ತಿಳಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದರಿಂದ ತೊಂದರೆಯೇ ಹೆಚ್ಚು ಎಂದು ಹೇಳಿದರು.

‘ದಿನಕ್ಕೊಂದು ನಿಯಮದಿಂದ ಗೊಂದಲ’
ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ದಿನಕ್ಕೊಂದು ನಿಯಮ ರೂಪಿಸುತ್ತಿದೆ. ಇದರಿಂದ ಸಹಜವಾಗಿಯೇ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಯು.ಟಿ. ಖಾದರ್ ಆರೋಪಿಸಿದರು.

ಲಾಕ್‌ಡೌನ್‌ ಇದ್ದಾಗ ಪರೀಕ್ಷೆಯನ್ನು ತೀವ್ರಗೊಳಿಸಲಾಗಿತ್ತು. ಇದೀಗ ಲಾಕ್‌ಡೌನ್‌ ಹಿಂದಕ್ಕೆ ಪಡೆದಿದ್ದರೂ, ಪರೀಕ್ಷೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದ ಸೋಂಕು ಹರಡುವ ಅಪಾಯವೇ ಹೆಚ್ಚು ಎಂದರು.

ವೈರಸ್‌ ಅನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಆದಷ್ಟು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಮಂಗಳೂರು ಕ್ಷೇತ್ರ ಮಾದರಿ
ಮಂಗಳೂರು ಕ್ಷೇತ್ರದ ಮಾದರಿಯನ್ನು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅನುಸರಿಸುವುದು ಒಳ್ಳೆಯದು. ಇದರಿಂದ ನಿಯಂತ್ರಣದ ಜತೆಗೆ ಜನರಿಗೆ ಮಾನಸಿಕ ಸ್ಥೈರ್ಯ ಸಿಗುತ್ತದೆ ಎಂದು ಶಾಸಕ ಯು.ಟಿ. ಖಾದರ್‌ ಹೇಳುತ್ತಾರೆ.

‘ವೆನ್ಲಾಕ್‌ ಆಸ್ಪತ್ರೆ ಆರಂಭಿಸಿ’
ಬೆಂಗಳೂರಿನ ಮಾದರಿಯಲ್ಲಿಯೇ ಜಿಲ್ಲಾಡಳಿತ ತರಾತುರಿಯಲ್ಲಿ ವೆನ್ಲಾಕ್‌ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿದೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ಕೂಡಲೇ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯು.ಟಿ. ಖಾದರ್‌ ಆಗ್ರಹಿಸಿದರು.

ವೆನ್ಲಾಕ್‌ಗೆ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ದರದಲ್ಲಿಯೇ ಚಿಕಿತ್ಸೆ ನೀಡುವುದಾಗಿ ಹೇಳಲಾಗುತ್ತಿದೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಆಗಿದೆ. ಆಯುಷ್ಮಾನ ಭಾರತ್– ಆರೋಗ್ಯ ಕರ್ನಾಟಕ ಕಾರ್ಡ್‌ ತೆಗೆದುಕೊಂಡು ಹೋಗುವ ರೋಗಿಗಳಿಗೆ ಅನಗತ್ಯವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಕೋವಿಡ್–19 ಪರೀಕ್ಷೆಗಾಗಿಯೇ ಖಾಸಗಿ ಆಸ್ಪತ್ರೆಗಳು ₹20 ಸಾವಿರ ಪಡೆಯುತ್ತಿವೆ ಎಂದು ದೂರಿದರು.

ಇತ್ತ ವೆನ್ಲಾಕ್ ಆಸ್ಪತ್ರೆಯೂ ಖಾಲಿ ಉಳಿದಿದೆ. ಕೋವಿಡ್–19 ರೋಗಿಗಳಿಗೆ ಆಯುಷ್‌ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲಿನಿಂದಲೇ ಆಯುಷ್‌ ಆಸ್ಪತ್ರೆ ಹೊಸ ಕಟ್ಟಡವನ್ನು ಬಳಸಿಕೊಂಡು, ವೆನ್ಲಾಕ್‌ನಲ್ಲಿ ಬಡಜನರಿಗೆ ಚಿಕಿತ್ಸೆ ನೀಡಬಹುದಾಗಿತ್ತು. ಈಗಲಾದರೂ ಆ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಆಗ್ರಹಿಸಿದರು.

ಜನರ ಪ್ರಶ್ನೆಗಳಿಗೆ ಖಾದರ್ ಉತ್ತರ

**
* ವಿಮಾನದಲ್ಲಿ ಬಂದವರಿಗೆ ಕ್ವಾರಂಟೈನ್‌ ಮಾಡಲಾಗುತ್ತದೆ. ಆದರೆ, ರೈಲಿನಲ್ಲಿ ಬಂದವರಿಗೆಇಲ್ಲದಾಗಿದೆ.ಪರೀಕ್ಷೆಯನ್ನೂ ಮಾಡುತ್ತಿಲ್ಲ.
-ಅಬ್ದುಲ್‌ ಅಬೂಬಕ್ಕರ್‌,ವಿಟ್ಲ

ಸರ್ಕಾರ ದಿನಕ್ಕೊಂದು ನಿಯಮ ತರುತ್ತಿದೆ. ಕ್ವಾರಂಟೈನ್‌ ಮಾಡುವುದೇ ಬೇಡ ಎನ್ನುತ್ತಿದ್ದಾರೆ. ಹೀಗಾಗಿಯೇ ಗೊಂದಲ ಉಂಟಾಗುತ್ತಿದೆ. ಸರ್ಕಾರ ಕೈಚೆಲ್ಲಿ ಕೂತಿದೆ. ಕ್ವಾರಂಟೈನ್‌, ಪರೀಕ್ಷೆ ಯಾವುದೂ ಇಲ್ಲ. ಆದರೆ, ಮಂಗಳೂರು ಕ್ಷೇತ್ರದಲ್ಲಿ ಮಾದರಿ ವ್ಯವಸ್ಥೆ ಮಾಡಲಾಗಿದೆ. ಇದು ಎಲ್ಲ ಕ್ಷೇತ್ರಗಳಲ್ಲೂ ಆಗಬೇಕು.

* ಕೊರೊನಾ ನಿಯಂತ್ರಣಕ್ಕಾಗಿ ವೈದ್ಯಕೀಯಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಬೇಕು.
-ಮಹಾದೇವ,ಬೆಂಗಳೂರು

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ₹15 ಸಾವಿರ ಕೋಟಿ ನೀಡಿದ್ದು, ಅದರಲ್ಲಿ ರಾಜ್ಯಕ್ಕೆ ₹4 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ. ಅದರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಏನು ಕೊಡಲಿದ್ದಾರೆ ಎಂಬುದು ತಿಳಿದಿಲ್ಲ. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಪ್ರತಿಪಕ್ಷವಾಗಿ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಿದ್ದೇವೆ. ಕೆಲಸ ಮಾಡಲು ಸಾಕಷ್ಟು ಅವಕಾಶವನ್ನೂ ನೀಡಲಾಗಿದೆ. ಈಗ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ.

* ಕೊರೊನಾ ನಿಯಂತ್ರಣಕ್ಕೆ ಗ್ರಾಮ ಕಾರ್ಯಪಡೆ ಮಾಡಿದ್ದು, ಅನುದಾನವೇ ಇಲ್ಲದಾಗಿದೆ.
-ಪ್ರತಿಭಾ ಶ್ರೀಧರ್ ಶೆಟ್ಟಿ,ಕೊಂಚಾಡಿ ಗ್ರಾ.ಪಂ. ಅಧ್ಯಕ್ಷೆ

ಸರ್ಕಾರದಿಂದ ಅಗತ್ಯ ಅನುದಾನ ಒದಗಿಸುವ ಬಗ್ಗೆ ಸಂಬಂಧಿಸಿದ ಸಚಿವರಿಗೆ ಮನವರಿಕೆಮಾಡಿಕೊಡಲಾಗುವುದು.

* ನಮ್ಮವರು ಬೇರೆ ರಾಜ್ಯಗಳಿಂದ ಊರಿಗೆ ಮರಳಲು ಬಯಸುತ್ತಿದ್ದಾರೆ. ಏನು ಮಾಡಬೇಕು?
-ಮಹಮ್ಮದ್ ಅಶ್ರಫ್‌,ಇರಾ

ನಮ್ಮ ಕ್ಷೇತ್ರದವರಿಗೆ ಮುಕ್ತ ಆಹ್ವಾನ ನೀಡಿದ್ದೇವೆ. ಈ ಕಷ್ಟಕಾಲದಲ್ಲಿ ಅವರನ್ನು ನಮ್ಮಲ್ಲಿಗೆ ಕರೆಸಿಕೊಂಡು, ಕಾಪಾಡುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯ.

* ನಮ್ಮವರು ಗುಜರಾತಿನಲ್ಲಿದ್ದು, ವಾಪಸ್‌ ಬರಲು ಏನು ಮಾಡಬೇಕು?
-ಇರ್ಷಾದ್‌,ಹರೇಕಳ

ಬೇರೆ ರಾಜ್ಯದಿಂದ ಬರುವವರು ನೇರವಾಗಿ ಬೆಳ್ಮ ಗ್ರಾಮ ಪಂಚಾಯಿತಿಗೆ ತೆರಳಿ, ವಿಷಯ ತಿಳಿಸಬೇಕು. ಅವರು ಏಳು ದಿನಗಳ ಕ್ವಾರಂಟೈನ್‌, ಪರೀಕ್ಷೆಯ ವ್ಯವಸ್ಥೆ ಮಾಡುತ್ತಾರೆ.

*ಲಾಕ್‌ಡೌನ್‌ ತೆರವಾದ ಬಳಿಕ ಪರೀಕ್ಷೆ ಮಾಡುವುದು ಕಡಿಮೆಯಾಗಿದೆ. ಕ್ವಾರಂಟೈನ್‌ ಇಲ್ಲದಾಗಿದೆ.
-ಪೂವಣಿ,ಉಜಿರೆ– ಅಬ್ದುಲ್‌,ಕೈರಂಗಳ

ಲಾಕ್‌ಡೌನ್‌ ಸಡಿಲಿಕೆ ನಂತರ ಹೆಚ್ಚು ಜನರಿಗೆ ಸೋಂಕು ತಗಲುವುದು ಸಹಜ. ಹೆಚ್ಚಿನ ತಪಾಸಣೆನಡೆಸುವುದು ಅಗತ್ಯ. ಆದರೆ, ಸರ್ಕಾರ ಏನೂ ಮಾಡುತ್ತಿಲ್ಲ. ಕ್ವಾರಂಟೈನ್‌ ವ್ಯವಸ್ಥೆ ಮಾಡುವುದೇ ಬೇಡ ಎನ್ನುತ್ತಿದ್ದಾರೆ. ಈ ಬಗ್ಗೆ ಗಮನ ಸೆಳೆಯಲಾಗುವುದು.

* ನಮ್ಮ ತಂದೆ ವಿದೇಶದಲ್ಲಿ ಬಾಕಿಯಾಗಿದ್ದಾರೆ. ಅವರನ್ನು ಕರೆಸಿಕೊಳ್ಳುವುದು ಹೇಗೆ?
-ಉಬೇರ್‌, ವಿಟ್ಲ

ನನಗೆ ಅವರ ವಿವರ ಕಳುಹಿಸಿ. ಅಲ್ಲಿ ಪ್ರವೀಣ್‌ ಶೆಟ್ಟಿವಕ್ವಾಡಿ ಅವರಿಗೆ ಮಾಹಿತಿ ನೀಡಿ, ವಾಪಸ್ ಕರೆಸುವ ವ್ಯವಸ್ಥೆ ಮಾಡಲಾಗುವುದು.

* ಕೊರೊನಾ ನಿರ್ವಹಣೆಯ ಸಂದರ್ಭದಲ್ಲಿ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ. ಎಲ್ಲರಿಗೂ ಆಯುಷ್‌ ಔಷಧಿ ನೀಡಿದ್ದು, ನಮಗೆ ಕೊಟ್ಟಿಲ್ಲ.
-ಸುನೀತಾ ಗಟ್ಟಿ,ಅಂಗನವಾಡಿ ಕಾರ್ಯಕರ್ತೆ

ಅಂಗನವಾಡಿ ಕಾರ್ಯಕರ್ತೆಯರ ಸೇವೆಯೂಅನುಪಮವಾಗಿದೆ. ಈ ಬಗ್ಗೆ ಈಗಲೇ ಆಯುಷ್‌ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡಿ,ನಿಮಗೂ ಕೊಡುವಂತೆ ಸೂಚನೆ ನೀಡುತ್ತೇನೆ.

*ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಈಗ ಏನು ಮಾಡಬೇಕು?
-ಯೋಗೀಶ್‌,ಮಂಗಳೂರು

ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌ನೊಂದಿಗೆ ವೆನ್ಲಾಕ್‌ ಆಸ್ಪತ್ರೆಗೆ ಹೋಗಿ. ಅಗತ್ಯ ಚಿಕಿತ್ಸೆ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT