ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇರಿಯಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 1ನೇ ಸ್ಥಾನ: ರೋಗ ನಿಯಂತ್ರಣಕ್ಕೆ ಕಸರತ್ತು

ಮಲೇರಿಯಾ, ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕಸರತ್ತು
Last Updated 9 ಜುಲೈ 2021, 2:07 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ ಸೋಂಕಿನ ನಡುವೆಯೇ ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಗಿ ಅಬ್ಬರ ಹೆಚ್ಚಾಗಿದ್ದು, ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ರಾಜ್ಯದ ಶೇ 80 ರಷ್ಟು ಮಲೇರಿಯಾ ಪ್ರಕರಣ ಇರುವ ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ.

ರಾಜ್ಯದಲ್ಲಿ ಕಳೆದ ವರ್ಷ ಒಟ್ಟು 1,701 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದವು. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ 1,397 ಪ್ರಕರಣ ಪತ್ತೆಯಾಗಿದ್ದರೆ, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿಯೇ ದಾಖಲೆಯ 1,306 ಪ್ರಕರಣಗಳು ಪತ್ತೆಯಾಗಿದ್ದವು. ಈ ಬಾರಿ ಕೂಡ ಮಲೇರಿಯಾ ಪ್ರಕರಣಗಳು ಹೆಚ್ಚಾಗುವ ಭೀತಿ ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.

ಜಿಲ್ಲೆಯಲ್ಲಿ ಪ್ರತಿ ವರ್ಷವೂ ಮಲೇರಿಯಾ ಹಾಗೂ ಡೆಂಗಿ ಪ್ರಕರಣಗಳು ಏರಿಕೆ ಆಗುತ್ತಲೇ ಇವೆ. ಇವುಗಳನ್ನು ನಿಯಂತ್ರಣಕ್ಕೆ ತರುವುದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಜೂನ್‌ ತಿಂಗಳಿನಿಂದ ಏರಿಕೆ ಆಗುತ್ತಿವೆ. ಮೇ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 277 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದವು. ಇದರಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿಯೇ 255 ಪ್ರಕರಣ ದಾಖಲಾಗಿವೆ. ಇದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗಿ ಅಬ್ಬರ ಕೂಡ ಜೋರಾಗುತ್ತಿದ್ದು ಮೇ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 122 ಪ್ರಕರಣ ಪತ್ತೆಯಾಗಿವೆ.

2019ರಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿಯೇ 2,593 ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯಲ್ಲಿ 2,797 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದವು. ಈ ವೇಳೆಯಲ್ಲಿಯೇ ಮಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆ ಪರದಾಟವೂ ಉಂಟಾಗಿತ್ತು. ಹಲವು ಸಾವುಗಳು ಕೂಡ ಸಂಭವಿಸಿದ್ದವು. ಇದನ್ನು ಮನಗಂಡು ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ಮಲೇರಿಯಾ ಹಾಗೂ ಡೆಂಗಿ ರೋಗದ ಬಗ್ಗೆ ಮತ್ತು ಸೊಳ್ಳೆಗಳ ನಿಯಂತ್ರಣದ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಹೆಜ್ಜೆ ಇಟ್ಟಿದೆ.

‘ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಗಿ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕ್ಷೇತ್ರ ಹಾಗೂ ಮನೆ ಭೇಟಿ, ಲಾರ್ವಾ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ವೈದ್ಯಾಧಿಕಾರಿ ನೇತೃತ್ವದಲ್ಲಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಸಲಾಗುತ್ತಿದೆ. ರ‍್ಯಾಪಿಡ್‌ ಡಯಾಗ್ನೋಸ್ಟಿಕ್ ಕಿಟ್ ಮೂಲಕ 20 ನಿಮಿಷ, ಕ್ವಾಂಟಿಟೇಟಿವ್ ಬಫ್ಪಿ ಕೋಟ್ ವಿಧಾನದ ಮೂಲಕ ಪರೀಕ್ಷೆ ನಡೆಸಿ 10 ನಿಮಿಷದಲ್ಲಿ ಮಲೇರಿಯಾ ಫಲಿತಾಂಶ ನೀಡಲಾಗುತ್ತದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್‌ ತಿಳಿಸಿದರು.

‘ನಗರ ಪ್ರದೇಶ ವ್ಯಾಪ್ತಿಯಲ್ಲಿ ತಂಡ ರಚನೆ ಮಾಡಲಾಗಿದೆ. ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಲೇರಿಯಾ ತಡೆ ಮಾಸಾಚರಣೆ ನಡೆಯುತ್ತಿದೆ. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ವ್ಯಾಪ್ತಿಯಲ್ಲಿ ಡೆಂಗಿ ಪ್ರಕರಣ ಹೆಚ್ಚಾಗಿವೆ. ಜ್ವರ ಬಂದರೂ ಡೆಂಗಿ, ಮಲೇರಿಯಾ, ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜನರು ಯಾವ ಕಾರಣಕ್ಕೂ ನಿರ್ಲಕ್ಷ್ಯ ಭಾವನೆ ತಳೆಯಬಾರದು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್‌ ಕುಮಾರ್‌ ಹೇಳಿದರು.

ದಿನದ 24 ಗಂಟೆ ಸೇವೆ ವ್ಯವಸ್ಥೆ

ಕೋವಿಡ್‌ ಸೋಂಕು ಒಮ್ಮೆ ಬಾಧಿಸಿ ಹೋಗಬಹುದು, ಆದರೆ ಡೆಂಗಿ, ಮಲೇರಿಯಾ ಪದೇ ಪದೇ ಬರಬಹುದು. ಮಳೆಗಾಲದಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಬೇಕು. ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಬಿಟ್ಟು ಬಿಟ್ಟು ಬರುವ ಚಳಿ ಜ್ವರ, ತಲೆ ನೋವು, ಮೈಕೈ, ನೋವು ಇದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆಯು ದಿನದ 24 ಗಂಟೆ ಉಚಿತ ಸೇವೆ ನೀಡುತ್ತಿದೆ. ಮೊಬೈಲ್‌ 9448556872 ಸಂಪರ್ಕಿಸಿ ಸೇವೆ ಪಡೆಯಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT