ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಪರೀಕ್ಷೆ ರದ್ದು; ತರಗತಿ ಮುಂದೂಡಲು ಸೂಚನೆ

ಮಂಗಳೂರು ವಿವಿ ಕುಲಸಚಿವರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪತ್ರ
Last Updated 3 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಎಲ್ಲ ಪದವಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ, ಮುಂದಿನ ಆದೇಶದವರೆಗೆ ತರಗತಿ ಹಾಗೂ ಪರೀಕ್ಷೆಗಳನ್ನು ಮುಂದೂಡುವಂತೆ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ನೀಡುವಂತೆ ತಿಳಿಸಿದ್ದಾರೆ.

ಕೇರಳದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಯಾವುದೇ ವಿನಾಯಿತಿಯನ್ನು ನೀಡಲು ಅವಕಾಶ ಇಲ್ಲದೇ ಇರುವುದರಿಂದ ಈ ಕ್ರಮ ಅನಿವಾರ್ಯ ಎಂದಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಂತರ ಜಿಲ್ಲೆಯಾದ ಕೇರಳದ ಕಾಸರಗೋಡು ಜಿಲ್ಲೆಯಿಂದ ಬರುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣಿಕರ ಓಡಾಟದಿಂದಾಗಿ ಸೋಂಕು ಹರಡುವ ಸಾಧ್ಯತೆಗಳಿದ್ದು, ಸಂಭಾವ್ಯ ಅಪಾಯವನ್ನು ತಪ್ಪಿಸಲು ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಟ್ಟುನಿಟ್ಟಿನ ನಿರ್ಬಂಧಗಳ ನಂತರವು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕಣ್ಗಾವಲು, ನಿಯಂತ್ರಣ ಮತ್ತು ಜಾಗೃತಿಗೆ ಸಂಬಂಧಿಸಿದಂತೆ ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ವಿಶೇಷ ತಪಾಸಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಮದ್ಯದಂಗಡಿ ಬಂದ್‌:ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ತಾಲ್ಲೂಕು ಪ್ರದೇಶಗಳ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ಆ.3ರಿಂದ 15ರವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ನಿರ್ದೇಶನ ನೀಡಲಾಗಿದ್ದು, ಈ ಸಮಯದಲ್ಲಿ ಆ ವ್ಯಾಪ್ತಿಯ ವೈನ್‌ಶಾಪ್ ಅಥವಾ ಬಾರ್‌ಗಳ ಮುಂದಿನ ಮತ್ತು ಹಿಂದಿನ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಮೊಹರು ಹಾಕಿ ಕಡ್ಡಾಯವಾಗಿ ಮುಚ್ಚುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಕಾಸರಗೋಡು ಜಿಲ್ಲೆಯ ಸಾರ್ವಜನಿಕರು ಮದ್ಯ ಸೇವನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳ ಮದ್ಯದಂಗಡಿಗಳನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುವ ಸಾಧ್ಯತೆಗಳು ಇವೆ. ಈ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಹೆಚ್ಚಿದ ಪಾಸಿಟಿವಿಟಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಪಾಸಿಟಿವಿಟಿ ದರ ಹೆಚ್ಚಳವಾಗಿದ್ದು, ಶೇ 5.26ಕ್ಕೆ ಏರಿಕೆಯಾಗಿದೆ. ಸೋಮವಾರ ಪಾಸಿಟಿವಿಟಿ ದರ ಶೇ 3.66 ರಷ್ಟಿತ್ತು.

ಪಾಸಿಟಿವಿಟಿ ಶೇ 5ಕ್ಕಿಂತ ಹೆಚ್ಚಾಗಿರುವ ಕಾರಣದಿಂದ ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಗಡಿ ಭಾಗದಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಕಾಸರಗೋಡಿನಲ್ಲಿ 789 ಪ್ರಕರಣ
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 789 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು, 685 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ 7,007 ಸಕ್ರಿಯ ಪ್ರಕರಣಗಳಿದ್ದು, 27,068 ಮಂದಿ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 1,09,553 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 1,01, 672 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 11.4 ಕ್ಕೆ ತಲುಪಿದೆ.

ಕಾಸರಗೋಡಿಗೆ ಕೇಂದ್ರದ ತಂಡ
ಕಾಸರಗೋಡು ಜಿಲ್ಲೆಯ ಕೋವಿಡ್‌–19 ಸ್ಥಿತಿಗತಿ ಅವಲೋಕನಕ್ಕೆ ಕೇಂದ್ರ ತಂಡ ಸೋಮವಾರ ಜಿಲ್ಲೆಗೆ ಭೇಟಿ ನೀಡಿದೆ.

ಕಾಞಂಗಾಡು ಎನ್ಎಚ್ಎಂ ಕಚೇರಿಗೆ ಭೇಟಿ ನೀಡಿದ ತಂಡ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿತು. ಕಾಸರಗೋಡು ಜಿಲ್ಲೆಯ ಕೋವಿಡ್–19 ಪ್ರಕರಣಗಳು, ಆಸ್ಪತ್ರೆ ಸೌಲಭ್ಯಗಳು, ಚಟುವಟಿಕೆಗಳು ಇತ್ಯಾದಿಗಳ ಮಾಹಿತಿ ಪಡೆಯಿತು.

ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯದ ಸಲಹೆಗಾರ ಡಿ.ಎಂ.ಸೆಲ್, ಮಾಜಿ ಉಪ ಮಹಾನಿರ್ದೇಶಕ ಡಾ.ಪಿ. ರವೀಂದ್ರನ್, ಕೋಯಿಕ್ಕೋಡ್‌ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ನ ಹೆಚ್ಚುವರಿ ನಿರ್ದೇಶಕ ಡಾ.ಕೆ.ರಘು ತಂಡದಲ್ಲಿದ್ದರು.

ಆನ್ ಲೈನ್ ಮೂಲಕ ಸರ್ಕಾರ ಪ್ರಧಾನ ಕಾರ್ಯದರ್ಶಿ ಜೊತೆಗೆ ಕೇಂದ್ರ ತಂಡ ಸಂವಾದ ನಡೆಸಿತು. ನಂತರ ಅಜಾನೂರು, ಪುಲ್ಲೂರು-ಪೆರಿಯ ಗ್ರಾಮ ಪಂಚಾಯಿತಿಗಳ ಕಂಟೈನ್‌ಮೆಂಟ್ ವಲಯಗಳಿಗೆ ತಂಡ ಭೇಟಿ ನೀಡಿತು.

***
ಜಿಲ್ಲಾಡಳಿತ ಕೆಲವು ಕಟ್ಟುನಿಟ್ಟಿನ ನಿರ್ಬಂಧಗಳಿಂದ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುವ ಸಾಧ್ಯತೆ ಇದ್ದು, ಪರೀಕ್ಷೆ, ತರಗತಿ ಮುಂದೂಡುವುದು ಅನಿವಾರ್ಯ.
-ಡಾ.ಕೆ.ವಿ. ರಾಜೇಂದ್ರದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT