ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಅನುದಾನ‌ದ ಕೊರತೆಯಿಂದ ಅಭಿವೃದ್ಧಿ ಕುಂಠಿತ: ಕುಂಪಲ

Published 4 ಮಾರ್ಚ್ 2024, 4:29 IST
Last Updated 4 ಮಾರ್ಚ್ 2024, 4:29 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದಲ್ಲಿ ಬಿಜೆಪಿ‌ ನೇತೃತ್ವದ ಸರ್ಕಾರವಿದ್ದಾಗ ಬೂತ್ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದವು.   ಕಾಂಗ್ರೆಸ್ ನೇತೃತ್ವದ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ.‌ ಅನುದಾನ‌ದ ಕೊರತೆಯಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಬದ್ಧತೆ ಈಗಿನ ಸರ್ಕಾರದ ಮೇಲೂ ಇರುತ್ತದೆ. ಆದರೆ ಅನೇಕ ಕಾಮಗಾರಿಗಳು ಅನುದಾನ ಬಿಡುಗಡೆ ಆಗದ ಕಾರಣಕ್ಕೆ ಸ್ಥಗಿತಗೊಂಡಿವೆ’ ಎಂದರು.

‘ವಿಧಾನ ಸೌಧದ ಬಳಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಲಾಗಿದೆ ಎನ್ನಲಾದ ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವೂ ಸರ್ಕಾರ ಆರೋಪಿ ವಿರುದ್ಧ ಕ್ರಮ ಕೈಗೊಂಡಿಲ್ಲ. ದೇಶ ವಿರೋಧಿ ಚಟುವಟಿಕೆಗೆ ಉತ್ತೇಜನ ನೀಡುವಂತೆ ಸರ್ಕಾರ ವರ್ತಿಸಿದೆ. ಬೆಂಗಳೂರಿನ ರಾಮೇಶ್ವರಿ ಕೆಫೆ ಹೋಟೆಲ್‌ನಲ್ಲಿ ಶುಕ್ರವಾರ ಬಾಂಬ್‌ ಸ್ಫೋಟ ಸಂಭವಿಸಿದೆ. ಇನ್ನೂ ಆರೋಪಿಯ ಬಂಧನವಾಗಿಲ್ಲ. ಜನರಿಗೆ ರಾಜ್ಯದಲ್ಲಿ ಭದ್ರತೆ ಎಲ್ಲಿದೆ’ ಎಂದು ಪ್ರಶ್ನಿಸಿದರು.  

‘ಅರುಣ್ ಕುಮಾರ್‌ ಪುತ್ತಿಲ ಅವರು ರಾಜಕೀಯ ಕಾರಣಕ್ಕೆ ರಚಿಸಿರುವ ಪುತ್ತಿಲ ಪರಿವಾರ ಸಂಘಟನೆಯನ್ನು ವಿಸರ್ಜನೆ ಮಾಡಿ ಬಿಜೆಪಿಗೆ ಸೇರಬೇಕು. ಅವರು ಪಕ್ಷಕ್ಕೆ ಸೇರಿದ ಬಳಿಕವೇ ಅವರಿಗೆ ಸ್ಥಾನಮಾನ ನೀಡುವ ಬಗ್ಗೆ ಚರ್ಚಿಸಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸಂಸದ ನಳಿನ್ ಕುಮಾರ್‌ ಕಟೀಲ್‌ ಅವರಿಗೆ ಟಿಕೆಟ್‌ ನೀಡಬಾರದು ಎಂಬ ಪುತ್ತಿಲ ಪರಿವಾರದ ಬೇಡಿಕೆಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾರಿಗೆ ಟಿಕೆಟ್‌ ನೀಡಬೇಕು ಎಂಬ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತದೆ. ಅದು ನಮ್ಮ ಹಂತದಲ್ಲಿ ಆಗುವ ತೀರ್ಮಾನ ಅಲ್ಲ. ಯಾರಿಗೆ ಟಿಕೆಟ್‌ ನೀಡಿದರೂ ಈ ಸಲ ಜಿಲ್ಲೆಯಲ್ಲಿ ಬಿಜೆಪಿ 4 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲಿದೆ’ ಎಂದರು.

‘ಪುತ್ತಿಲ ಅವರು ಪಕ್ಷಕ್ಕೆ ಸೇರುವುದಕ್ಕೆ ಸ್ಥಳೀಯ ನಾಯಕರ ವಿರೋಧವಿಲ್ಲ. ಪಕ್ಷಕ್ಕೆ ಯಾರು ಬರುವುದಾದರೂ ಸ್ವಾಗತ. ಸತ್ಯಜಿತ್‌ ಸುರತ್ಕಲ್‌ ಅವರಿಗೂ ನಾವೂ ಇದನ್ನೇ ಹೇಳುತ್ತೇವೆ. ಅಷ್ಟಕ್ಕೂ ಪುತ್ತಿಲ ಹಾಗೂ ಸತ್ಯಜಿತ್‌ ಅವರಂತಹವರು ಪಕ್ಷಕ್ಕೆ ಬರುವುದಕ್ಕೆ ಏಕೆ ಪ್ರಯತ್ನ ಪಡುತ್ತಿದ್ದಾರೆ ಎಂಬ ಬಗ್ಗೆಯೂ ಜನ ಆಲೋಚಿಸಬೇಕು’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಬೃಜೇಶ್‌ ಚೌಟ, ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿ, ಪ್ರಮುಖರಾದ ಕಿಶೋರ್‌ ಕುಮಾರ್‌, ನಿತಿನ್ ಕುಮಾರ್‌, ಮಾಧ್ಯಮ ಸಂಚಾಲಕ ವಸಂತ ಜೆ.ಪೂಜಾರಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT