ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಬಿಡ ಮಂಜುನಾಥ: ಧರ್ಮಸ್ಥಳದಲ್ಲಿ ಇಂದಿನಿಂದ ಕಾರ್ತೀಕ ಲಕ್ಷ ದೀಪೋತ್ಸವ

ಎಲ್ಲರ ಚಿತ್ತ ಧರ್ಮಸ್ಥಳದತ್ತ
Last Updated 22 ನವೆಂಬರ್ 2019, 6:37 IST
ಅಕ್ಷರ ಗಾತ್ರ

ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಸರ್ವಧರ್ಮ ಸಮನ್ವಯ ಕೇಂದ್ರ ಹಾಗೂ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನವೆಂಬರ್ 22ರಿಂದ 27ರವರೆಗೆ ಶ್ರೀಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವದ ಸಂಭ್ರಮ-ಸಡಗರ ಮೇಳೈಸಲಿದೆ. ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರತಿ ದಿನ ಆಯೋಜಿಸಲಾಗಿದೆ.

ದೀಪ ಬೆಳಕಿನ ಸಂಕೇತ. ಲಕ್ಷದೀಪೋತ್ಸವ ಕೇವಲ ಉತ್ಸವವಲ್ಲ. ಅಜ್ಞಾನದ ಅಂಧಕಾರವನ್ನು ತೊಲಗಿಸಿ, ಸುಜ್ಞಾನದ ಸುಗಂಧವನ್ನು ಪಸರಿಸುವ ಕಾಯಕ. ಇಲ್ಲಿ ಶಾಂತಿಯ ಸಂದೇಶವಿದೆ. ಸರಳತೆಯ ಮಾರ್ಗದರ್ಶನವಿದೆ. ಸಹ ಜೀವನದ ಬೋಧನೆ ಇದೆ. ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಮಾತ್ರವಲ್ಲದೆ ಪ್ರತಿ ಮನೆಯನ್ನೂ-ಮನವನ್ನೂ ಸ್ವಚ್ಛವಾಗಿರಿಸಿಕೊಳ್ಳುವ ಸಾರ್ವಕಾಲಿಕ ಸಂದೇಶವಿದೆ.

ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ನಿತ್ಯೋತ್ಸವವಾಗಿದೆ. ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ‘ಮಾತು ಬಿಡ ಮಂಜುನಾಥ’ ಎಂಬ ನುಡಿ ಎಲ್ಲರಿಗೂ ಚಿರಪರಿಚಿತವಾಗಿದೆ.

ಧರ್ಮ, ಕಲೆ, ಸಾಹಿತ್ಯದ ತ್ರಿವೇಣಿ ಸಂಗಮ: ಲಕ್ಷದೀಪೋತ್ಸವಕ್ಕೆ ನಾಡಿನೆಲ್ಲೆಡೆಯಿಂದ ಜಾತಿ-ಮತ ಭೇದವಿಲ್ಲದೆ ಲಕ್ಷಾಂತರ ಮಂದಿ ಬರುತ್ತಿದ್ದು, ಇದು ಬರಿ ಜಾತ್ರೆ ಆಗಬಾರದು, ಭಕ್ತಾದಿಗಳಿಗೆ ಜ್ಞಾನ ದೀವಿಗೆಯ ಬೆಳಕನ್ನು ಪಸರಿಸುವ ಕೆಲಸವೂ ಆಗಬೇಕು. ಜನಮನದಲ್ಲಿ ಶಾಶ್ವತ ಪರಿಣಾಮ ಬೀರಬೇಕು ಎಂಬ ಉದ್ದೇಶದಿಂದ 1933ರಲ್ಲಿ ಅಂದಿನ ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆ ಅವರು ಲಕ್ಷದೀಪೋತ್ಸವ ಸಂದರ್ಭ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷವೂ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತದೆ.

ವಿಶಿಷ್ಟ ಸಂಪ್ರದಾಯ: ಅತಿಥಿಗಳೆಲ್ಲ ಹೆಗ್ಗಡೆಯವರ ನಿವಾಸದಲ್ಲಿ (ಬೀಡು) ಸೇರಿ, ಭವ್ಯ ಮೆರವಣಿಗೆಯಲ್ಲಿ ಸಭಾ ವೇದಿಕೆಗೆ ಹೋಗುವುದು ಸಂಪ್ರದಾಯ.

ಸರ್ವಧರ್ಮ ಸಮ್ಮೇಳನ: ಇದೇ 25ರಂದು ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ಲೋಕಸಭಾ ಮಾಜಿ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಉದ್ಘಾಟಿಸುವರು. ವಿದ್ವಾನ್ ಕೆ. ವಾಗೀಶ ಅವರಿಂದ ಶಾಶ್ತ್ರೀಯ ಸಂಗೀತ ಗಾಯನವಿದೆ. ಮಂಗಳೂರಿನ ದೃಷ್ಟಿ ಕಲಾವಿದರಿಂದ ಸಮೂಹ ನೃತ್ಯ ಪ್ರದರ್ಶನವಿದೆ.

ನವೆಂಬರ್ 25 ಹೆಗ್ಗಡೆ ಅವರ ಜನ್ಮದಿನವೂ ಆಗಿದೆ. ಆಪ್ತರು, ಭಕ್ತರು ಅಭಿಮಾನಿಗಳು ಹೆಗ್ಗಡೆ ಅವರಿಗೆ ಮಾಲಾರ್ಪಣೆ ಮಾಡಿ ಭಕ್ತಿ ಪೂರ್ವಕ ಜನ್ಮದಿನದ ಶುಭಾಶಯ ಸಲ್ಲಿಸುತ್ತಾರೆ.

ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನವನ್ನು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಉದ್ಘಾಟಿಸುವರು. ಬೆಂಗಳೂರಿನ ಅಶೋಕ್ ಕುಮಾರ್ ಮತ್ತು ಬಳಗದವರಿಂದ ಕಥಕ್ ನೃತ್ಯರೂಪಕ ಪ್ರದರ್ಶನವಿದೆ. ರಾತ್ರಿ 12 ಗಂಟೆ ಬಳಿಕ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯಲಿದ್ದು ನಾಡಿನೆಲ್ಲೆಡೆಯಿಂದ ಲಕ್ಷಾಂತರ ಮಂದಿ ಭಕ್ತಾದಿಗಳು ಬರುತ್ತಾರೆ. ನಾಡಿನ 400ಕ್ಕೂ ಮಿಕ್ಕಿ ಕಲಾವಿದರು ಶಂಖ, ಕೊಂಬು, ಕಹಳೆ, ಜಾಗಟೆ ವಾದನದ ಮೂಲಕ ಕಲಾ ಸೇವೆ ಮಾಡುವರು.

27ರಂದು ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಳ್ಳುತ್ತವೆ. ತೀರ್ಥಂಕರರು ತಮ್ಮ ದಿವ್ಯಧ್ವನಿ ಮೂಲಕ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಪ್ರಾಣಿ-ಪಕ್ಷಿಗಳಿಗೂ ಧರ್ಮೋಪದೇಶ ಕೇಳುವ ಅವಕಾಶವಿದೆ. ಜೈನರ ಆರಾಧನಾ ಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ.

ಮಳಿಗೆಗಳು: 22ರಿಂದ 27ರವರೆಗೆ ಧರ್ಮಸ್ಥಳದಲ್ಲಿರುವ ಪ್ರೌಢಶಾಲಾ ವಠಾರದಲ್ಲಿ ರಾಜ್ಯ ಮಟ್ಟದ ವಸ್ತುಪ್ರದರ್ಶನ ಏರ್ಪಡಿಸಿದ್ದು ಮುನ್ನೂರಕ್ಕೂ ಮಿಕ್ಕಿ ಮಳಿಗೆಗಳಿವೆ. ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 10ರವರೆಗೆ ಉಚಿತ ಪ್ರವೇಶಾವಕಾಶವಿದೆ. ವೇದಿಕೆಯಲ್ಲಿ ಪ್ರತಿದಿನ ಸಂಜೆ ಗಂಟೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.

ಉತ್ಸವಗಳು: ಇದೇ 22ರಂದು ಹೊಸಕಟ್ಟೆ ಉತ್ಸವ, 23ರಂದು ಕೆರೆಕಟ್ಟೆ ಉತ್ಸವ, 24ರಂದು ಲಲಿತೋದ್ಯಾನ ಉತ್ಸವ, 25ರಂದು ಕಂಚಿಮಾರುಕಟ್ಟೆ ಉತ್ಸವ, 26ರಂದು ಗೌರಿಮಾರುಕಟ್ಟೆ ಉತ್ಸವಗಳು ನಡೆಯಲಿವೆ.

ವೈವಿಧ್ಯಮಯ ಸೇವೆ: ಲಕ್ಷದೀಪೋತ್ಸವ ಸಂದರ್ಭ ನಾಡಿನ ಎಲ್ಲೆಡೆಯಿಂದ ಬಂದ ಭಕ್ತರು ವೈವಿಧ್ಯಮಯ ಸೇವೆ ಸಲ್ಲಿಸುತ್ತಾರೆ. ಸೈಕಲ್ ಮೂಲಕ, ಪಾದಯಾತ್ರೆಯಲ್ಲಿ ಹಲವರು ಬರುತ್ತಾರೆ. ಅನೇಕ ಮಂದಿ ಅಕ್ಕಿ, ತರಕಾರಿ, ಹಣ್ಣು, ಬೇಳೆಕಾಳುಗಳನ್ನು ಕಾಣಿಕೆಯಾಗಿ ನೀಡುತ್ತಾರೆ. 26ರಂದು ರಾತ್ರಿ ಬೆಂಗಳೂರಿನ ಭಕ್ತರು ಎಲ್ಲರಿಗೂ ಅನ್ನದಾನದ ವ್ಯವಸ್ಥೆ ಮಾಡುತ್ತಾರೆ.

ದೇವರ ದರ್ಶನದ ಸಮಯ: ಪ್ರತಿದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಸಂಜೆ 5ರಿಂದ ರಾತ್ರಿ 10ರವರೆಗೆ. ಜಾತ್ರೆ, ಉತ್ಸವ ಹಾಗೂ ವಿಶೇಷ ದಿನಗಳಲ್ಲಿ ದೇವರ ದರ್ಶನದ ಸಮಯದಲ್ಲಿ ಕೊಂಚ ವ್ಯತ್ಯಾಸವಾಗಬಹುದು.

ಪ್ರೇಕ್ಷಣೀಯ ಸ್ಥಳಗಳು: ಮಂಜೂಷಾ ವಸ್ತು ಸಂಗ್ರಹಾಲಯ, ಉದ್ಯಾನ, ರತ್ನಗಿರಿ (ಬಾಹುಬಲಿ ಬೆಟ್ಟ) ಕಾರು ಮ್ಯೂಸಿಯಂ, ಅಣ್ಣಪ್ಪ ಸ್ವಾಮಿ ಬೆಟ್ಟ, ಜಮಾ ಉಗ್ರಾಣ, ಭಗವಾನ್ ಚಂದ್ರನಾಥ ಸ್ವಾಮಿ ಬಸದಿ, ವಸಂತಮಹಲ್ ಮತ್ತು ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ.

ವಸತಿ ಗೃಹಗಳು: ಗಾಯತ್ರಿ, ವೈಶಾಲಿ, ಶರಾವತಿ, ಸಾಕೇತ, ರಜತಾದ್ರಿ, ಸಹ್ಯಾದ್ರಿ, ಗಂಗೋತ್ರಿ ಮೊದಲಾದ ವಸತಿಗೃಹಗಳಿವೆ. ಆಯಾ ವಸತಿ ಗೃಹದಲ್ಲಿ ಸಂಪರ್ಕಿಸಿ ವಸತಿ ಸೌಲಭ್ಯ ಪಡೆಯಬಹುದು. ಸನ್ನಿಧಿ ಮತ್ತು ನೇತ್ರಾವತಿ ಅತಿಥಿ ಗೃಹದಲ್ಲಿ ವಸತಿ ವ್ಯವಸ್ಥೆಗೆ ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಬೇಕು. ಪ್ರವೇಶದ್ವಾರ, ದೇವಸ್ಥಾನ, ಬೀಡು, ಅನ್ನಪೂರ್ಣ ಹಾಗೂ ವಿವಿಧ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಕೆಎಸ್‌ಆರ್‌ಟಿಸಿ ನಾಡಿನ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಒದಗಿಸಿದೆ. ಪೊಲೀಸ್ ಇಲಾಖೆ ಮತ್ತು ಗೃಹರಕ್ಷಕ ದಳದವರು ಹಾಗೂ ಊರಿನ ನಾಗರಿಕರು ಭಕ್ತರ ಸೇವೆ ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT