ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಡಿಪು | ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ: ದಿನೇಶ್ ಗುಂಡೂರಾವ್ ಹೇಳಿದ್ದೇನು?

Published 10 ಜೂನ್ 2024, 13:29 IST
Last Updated 10 ಜೂನ್ 2024, 13:29 IST
ಅಕ್ಷರ ಗಾತ್ರ

ಮಂಗಳೂರು: ‘ಕಾನೂನು ವಿರೋಧಿ ಘಟನೆಗಳು ನಡೆದಾಗ ತಪ್ಪಿತಸ್ಥರು ಬಿಜೆಪಿ, ಕಾಂಗ್ರೆಸ್ ಅಥವಾ ಯಾವ ಪಕ್ಷದವರು ಎನ್ನುವುದು ಮುಖ್ಯವಲ್ಲ. ಘಟನೆಗೆ ಸಂಬಂಧಿಸಿ ಸರಿ– ತಪ್ಪು ವಿಶ್ಲೇಷಣೆಯಾಗಬೇಕೇ ವಿನಾ ಧರ್ಮ, ಜಾತಿ, ಭಾಷೆ ಯಾವುದನ್ನೂ ಪರಿಗಣಿಸಲು ಆಗದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.

ಮುಡಿಪು ಸಮೀಪದ ಬೋಳಿಯಾರ್ ಬಳಿ ಭಾನುವಾರ ರಾತ್ರಿ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ತಂಡವೊಂದು ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿ ಮಾಧ್ಯಮ ಪ್ರತಿನಿಧಿಗಳು ಸೋಮವಾರ ಇಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾನೂನು ವಿರೋಧಿ ಘಟನೆಗಳು ನಡೆದಾಗ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ. ಅದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಶಾಂತಿ, ಸುವ್ಯವಸ್ಥೆ, ಸಾಮರಸ್ಯ ಕಾಪಾಡುವುದು ನಮ್ಮ ಆದ್ಯತೆಯಾಗಿದ್ದು, ಅದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದರು.

‘ಬೋಳಿಯಾರ್‌ನಲ್ಲಿ ನಡೆದಿರುವ ಚೂರಿ ಇರಿತ ಪ್ರಕರಣಕ್ಕೆ ಕಾರಣ ಏನೇ ಇರಬಹುದು, ಕಾನೂನು ಕೈಗೆತ್ತಿಕೊಂಡಾಗ ಅಂತಹವರನ್ನು ಕ್ಷಮಿಸಲು ಆಗದು. ಕೆಲವರು ಪ್ರಚೋದನೆ ಮಾಡಿರಬಹುದು, ಆದರೆ, ಸಂಯಮ ಕಾಪಾಡಿಕೊಳ್ಳುವುದು ಪ್ರತಿ ವ್ಯಕ್ತಿಯ ಹೊಣೆಗಾರಿಕೆ. ಕಾನೂನು ಕೈಗೆತ್ತಿಕೊಂಡವರ ಮೇಲೆ ಕ್ರಮ ಆಗುತ್ತದೆ. ಘಟನೆ ಸಂಬಂಧ ಮೂವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಯಾರು ಕಾನೂನು ಕೈಗೆತ್ತಿಕೊಂಡರೂ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಜೆಪಿಯವರು ನಮಗೆ ಹೇಳಬೇಕಿಲ್ಲ. ಅವರ (ಬಿಜೆಪಿ) ಕಡೆಯವರು ಮಾಡಿದರೆ ಅದು ಕಾನೂನು ಉಲ್ಲಂಘನೆ ಅಲ್ಲ, ಅದನ್ನೇ ಬೇರೆಯವರು ಮಾಡಿದರೆ ಕಾನೂನು ಉಲ್ಲಂಘನೆ ಎಂಬುದು ಬಿಜೆಪಿಯವರ ನಿಲುವು. ತಪ್ಪು ಯಾರು ಮಾಡಿದರೂ ಕ್ರಮ ಆಗಬೇಕು ಅಷ್ಟೇ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲಿನ ಬಗ್ಗೆ ಆಂತರಿಕವಾಗಿ ಚರ್ಚಿಸುತ್ತೇವೆ. ಇಲ್ಲಿ ಜನರು ಜಾತಿ, ಧರ್ಮದ ಮೇಲೆ ಮತ ಚಲಾಯಿಸುತ್ತಾರೆ. ಕರಾವಳಿಯ ವಾತಾವರಣದ ಬಗ್ಗೆ ಅರಿವಿದೆ. ಆದರೂ, ಈ ಬಾರಿ ಗೆಲುವಿನ ಅಂತರ ಕಡಿಮೆಯಾಗಿದ್ದು, ಕೆಲಸಗಳ ಮೂಲಕ ಜನರ ಮನವೊಲಿಸುವ ಪ್ರಯತ್ನ ಮಾಡಲಾಗುವುದು. ಚುನಾವಣೆಯಲ್ಲಿ ಸೋತಾಗ ಎಲ್ಲವನ್ನೂ ಕಳೆದುಕೊಂಡಂತೆ, ಗೆದ್ದಾಗ ಎಲ್ಲವನ್ನೂ ಗೆದ್ದಂತೆ ಭಾವಿಸಬಾರದು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಧೋರಣೆಗೆ ಈ ಬಾರಿ ಕಡಿವಾಣ ಬಿದ್ದಿದೆ. ಪ್ರಜಾಪ್ರಭುತ್ವ ಉಳಿಸುವ ಫಲಿತಾಂಶವನ್ನು ದೇಶದ ಜನರು ನೀಡಿದ್ದಾರೆ' ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ರಚನೆಯಾಗಿರುವ ಆ್ಯಂಟಿ ಕಮ್ಯುನಲ್ ವಿಂಗ್ ಯಾವ ಹಂತದಲ್ಲಿದೆ ಎಂಬ ಮಾಹಿತಿ ಇಲ್ಲ. ಮೂರು ತಿಂಗಳು ಚುನಾವಣೆ ನೀತಿ ಸಂಹಿತೆ ಇದ್ದಿದ್ದರಿಂದ ಇನ್ನು ಅದರ ಬಗ್ಗೆ ಗಮನ ಹರಿಸಲಾಗುವುದು.

‘ಪಕ್ಷದ ಹಿತದೃಷ್ಟಿಯಿಂದ ಯಾವ ಬದಲಾವಣೆ ಆಗಬೇಕೋ ಅದನ್ನು ವರಿಷ್ಠರು ಮಾಡುತ್ತಾರೆ. ಎಲ್ಲರೂ ಮುಖ್ಯ, ಆದರೆ, ಯಾರೂ ಇಲ್ಲ ಅನಿವಾರ್ಯ ಅಲ್ಲ. ಸರ್ಕಾರದ ಉತ್ತಮ ಕಾರ್ಯನಿರ್ವಹಣೆಗೆ ಅಗತ್ಯವಿದ್ದಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಚುನಾವಣೆ ನಂತರ ಸಚಿವರ ಬದಲಾವಣೆ ಇದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT