ಮಂಗಳೂರು: ‘ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಬಿಸಿಯೂಟ ಕೊಠಡಿ ನಿರ್ಮಾಣ ಹಾಗೂ ಜಾಗ ಲಭ್ಯ ಇರುವ ಶಾಲೆಗಳಲ್ಲಿ ಮೈದಾನ ಅಭಿವೃದ್ಧಿಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗ) ಆದ್ಯತೆ ಮೇರೆಗೆ ಕೈಗೊಳ್ಳಬೇಕು’ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು.
ದಕ್ಷಿಣ ಕನ್ನಡ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಂಗಳವಾರ ಇಲ್ಲಿ ಮಾತನಾಡಿದರು.
‘ನರೇಗಾ ಯೋಜನೆಯಡಿ ಹೊಸ ವಿಧದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಆಸ್ಥೆ ವಹಿಸಬೇಕು. ಅನೇಕ ಶಾಲೆಗಳಲ್ಲಿ ಬಿಸಿಯೂಟ ಕೊಠಡಿಗಳ ಪರಿಸ್ಥಿತಿ ಹದಗೆಟ್ಟಿದೆ. ಜಾಗ ಲಭ್ಯ ಇದ್ದರೂ ಮೈದಾನ ಅಭಿವೃದ್ಧಿಯಾಗಿಲ್ಲ. ಇಂತಹ ಕಾಮಗಾರಿಗಳನ್ನು ಈ ಯೋಜನೆಯಡಿ ನಡೆಸಬೇಕು’ ಎಂದು ಸಂಸದರು ಸೂಚನೆ ನೀಡಿದರು. ಈ ಯೋಜನೆಯಡಿ ತಾಲ್ಲೂಕುವಾರು ಕೈಗೊಂಡ ಕಾಮಗಾರಿಗಳ ವಿವರ ಪಡೆದ ಅವರು, ‘ಈ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ಎಷ್ಟು ಎಕರೆಗಳಷ್ಟು ಅಡಿಕೆ ತೋಟ ಅಭಿವೃದ್ಧಿಯಾಗಿದೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕು’ ಎಂದು ಸೂಚಿಸಿದರು.
‘ಜಿಲ್ಲೆಯಲ್ಲಿ ನರೇಗ ಯೋಜನೆಯಡಿ ಒಟ್ಟು 16 ಲಕ್ಷ ಮಾನವ ದಿನಗಳ ಕೆಲಸ 2022–23ನೇ ಸಾಲಿನಲ್ಲಿ ನಡೆದಿದ್ದು, ಒಟ್ಟು ₹ 73 ಕೋಟಿ ವೆಚ್ಚಮಾಡಲಾಗಿದೆ. ಶೇ 90ರಷ್ಟು ಗುರಿ ಸಾಧನೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ ಮಾಹಿತಿ ನೀಡಿದರು.
‘ಕುಡಿಯುವ ನೀರು ಪೂರೈಕೆ ಸಂಬಂಧಿಸಿ ಮಂಗಳೂರು–ಮೂಡುಬಿದಿರೆ, ಬಂಟ್ವಾಳ ಉಳಾಯಿಬೆಟ್ಟು, ಪುತ್ತೂರು ಕುಟ್ರುಪ್ಪಾಡಿ, ಆಲಂಕಾರು– ಅಳಿಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಡಿ ಒಟ್ಟು ₹1,563 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜಲಜೀವನ್ ಮಿಷನ್ ಅಡಿ 98 ಸಾವಿರ ಕುಟುಂಬಗಳಿಗೆ ನೀರು ಪೂರಯಸುವ ಗುರಿ ಹೊಂದಿದ್ದು, 60 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಕುಮಾರ ವಿವರಿಸಿದರು.
ಸುಳ್ಯದಲ್ಲಿ ಕಸ ವಿಲೇವಾರಿಗೆ ಎರಡು ಎಕರೆಗಳಷ್ಟು ಮೀಸಲು ಅರಣ್ಯದ ಜಾಗವನ್ನು ಒದಗಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಈ ವಿಚಾರ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
‘ಇಲ್ಲಿ ಕಸ ವಿಲೇವಾರಿ ಘಟಕಕ್ಕೆ ಬೇಕಾಗಿರುವ 3 ಎಕರೆಯಲ್ಲಿ 2 ಎಕರೆ ಡೀಮ್ಡ್ ಅರಣ್ಯ ಅಥವಾ ಮೀಸಲು ಅರಣ್ಯ ಎಂಬ ಪ್ರಸ್ತಾವ ದಾಖಲೆಗಳಲ್ಲಿ ಇಲ್ಲ. ಆದರೂ ಅರಣ್ಯ ಇಲಾಖೆಯವರು ಸಾರ್ವಜನಿಕ ಉದ್ದೇಶದ ಈ ಕಾರ್ಯಕ್ಕೆ ಅಡ್ಡಿಪಡಿಸುವುದು ತರವಲ್ಲ. ಕಸ ನಿರ್ವಹಣೆಗೆ ಸಂಬಂಧಿಸಿದ ಹೈಕೋರ್ಟ್ ಹಾಗೂ ರಾಷ್ಟ್ರಿಯ ಹಸಿರು ನ್ಯಾಯಮಂಡಳಿ ಆದೇಶ ಪಾಲಿಸುವ ಅನಿವಾರ್ಯ ಇದೆ’ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹೇಳಿದರು.
‘ಜಿಲ್ಲೆಯ ಬೇರೆಲ್ಲ ಒತ್ತುವರಿಗಳನ್ನು ತೆರವುಗೊಳಿಸುವುದಾದರೆ ಅರಣ್ಯ ಇಲಾಖೆಯ ಕ್ರಮವನ್ನು ಒಪ್ಪಬಹುದು’ ಎಂದು ನಳಿನ್ ಹೇಳಿದರು.
‘ಈ ಹಿಂದೆ ಮದ್ರಾಸ್ ಪ್ರಾಂತ್ಯದಲ್ಲಿದ್ದ ಭೂದಾಖಲೆಗಳು ನಂತರ ಕರ್ನಾಟಕ ರಾಜ್ಯಕ್ಕೆ ಹಸ್ತಾಂತರವಾಗಿವೆ. ಮೂಲದಾಖಲೆಗಳಲ್ಲಿ ಅರಣ್ಯದ ಜಾಗ ಎಂದು ಉಲ್ಲೇಖ ಇದೆ. ಮೀಸಲು ಅರಣ್ಯ ಎಂದು ಗುರುತಿಸಿರುವ ಪ್ರದೇಶವನ್ನು ಅನ್ಯ ಉದ್ದೇಶಕ್ಕೆ ಬಳಸಲು ಕೇಂದ್ರದ ಅನುಮತಿ ಅನಿವಾರ್ಯ’ ಎಂದು ಅರಣ್ಯ ಉಪಸಂರಕ್ಷಣಾಧಿಕಾರಿ ದಿನೇಶ್ ಕುಮಾರ್ ತಿಳಿಸಿದರು.
ಕೋಟೆಕಾರು ದೇವರ ಅರಮನೆ ಪ್ರದೇಶದಲ್ಲಿ 9 ಎಕರೆ ಸರ್ಕಾರಿ ಜಾಗ ಲಭ್ಯವಿದೆ. ಇಲ್ಲಿ ವಸತಿರಹಿತರಿಗೆ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಾನೂನು ತೊಡಕಿನಿಮದ ಇದು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ನೀಗಿಸಿ ಎಂದು ಸಮಿತಿ ಸದಸ್ಯೆ ಜಯಶ್ರೀ ಪ್ರಫುಲ್ಲದಾಸ್ ಒತ್ತಾಯಿಸಿದರು.
–0–
ಹಳೆಕಸದ ರಾಶಿ ವಿಲೇ ವಿಳಂಬ– ಡಿ.ಸಿ ಅಸಮಾಧಾನ
ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಕಸ ಭೂಭರ್ತಿ ಪ್ರದೇಶದಲ್ಲಿ ದಶಕಗಳಿಂದ ಸಂಗ್ರಹವಾಗಿರುವ ಹಳೆ ಕಸ ವಿಲೇವಾರಿ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಆಗದಿರುವ ಬಗ್ಗೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸುವಂತೆ ಅವರು ಸೂಚಿಸಿದರು.
‘ಪಚ್ಚನಾಡಿ ಭೂಭರ್ತಿ ಪ್ರದೇಶದಲ್ಲಿ 9 ಲಕ್ಷ ಟನ್‌ಗಳಷ್ಟು ಹಳೆ ಕಸ ಇದೆ. ಇದರ ವಿಲೇವಾರಿಗೆ ಗುತ್ತಿಗೆದಾರರು ನಾಲ್ಕು ಘಟಕಗಳನ್ನು ಸ್ಥಾಪಿಸಬೇಕಿತ್ತು. ಇದುವರಗೆ ಒಂದು ಘಟಕವನ್ನು ಮಾತ್ರ ಸ್ಥಾಪಿಸಿದ್ದಾರೆ. ಅವರು ಕಸದ ರಾಶಿಗೆ ಬೆಂಕಿ ಬಿದ್ದರೆ, ನಂದಿಸಲು ಬೇಕಾದ ಪರಿಕರಗಳನ್ನು ಇಟ್ಟುಕೊಂಡಿರಬೇಕು. ಬೆಂಕಿ ಬೀಳದಂತೆ ತಡೆಯಲು ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು. ಇದ್ಯಾವುದನ್ನೂ ಗುತ್ತಿಗೆದಾರರು ಮಾಡಿಲ್ಲದ ಕಾರಣ ಬಿಲ್ ಪಾವತಿ ತಡೆಹಿಡಿದ್ದೇವೆ’ ಎಂದು ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ. ತಿಳಿಸಿದರು.
‘ಈಗಲೂ ಮಿಶ್ರ ಕಸ ಪಚ್ಚನಾಡಿ ಭೂಭರ್ತಿ ಪ್ರದೇಶಕ್ಕೆ ಹೋಗುತ್ತಿದೆ. ಇದನ್ನು ತಪ್ಪಿಸುವಂತೆ ಗುತ್ತಿಗೆದಾರರು ಕೋರಿದ್ದಾರೆ’ ಎಂದರು.
ಕೊಟ್ಟಾರಚೌಕಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅಡ್ಡಿ
‘ಕೊಟ್ಟಾರ ಚೌಕಿ ಬಳಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಶಿಕ್ಷಣ ಸಂಸ್ಥೆಯೊಂದು ಜಾಗ ಬಿಟ್ಟುಕೊಡದ ಕಾರಣ ಸಮಸ್ಯೆ ಎದುರಾಗಿದೆ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ತಿಳಿಸಿದರು.
ಕೂಳೂರು ಸೇತುವೆ ಕಾಮಗಾರಿ ಶೇ 40ರಷ್ಟು ಪೂರ್ಣಗೊಂಡಿದೆ ಎಂದು ಹಿಂದಿನ ದಿಶಾ ಸಭೆಯಲ್ಲಿ ಎನ್‌ಎಚ್‌ಎಐ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಕಾಮಗಾರಿಯಲ್ಲಿ ಆ ಬಳಿಕವೂ ಯಾವುದೇ ಪ್ರಗತಿ ಆಗಿಲ್ಲ.
ದಿಶಾ ಸಮಿತಿ ಸದಸ್ಯ ಕೃಷ್ಣಪ್ಪ ಪೂಜಾರಿ, ‘ಕಲ್ಲಡ್ಕ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಕಡೆ ಕಟ್ಟಡವೊಂದಕ್ಕೆ ಪರಿಹಾರ ಪಾವತಿಯಾಗಿದ್ದರೂ ಅದನ್ನು ತೆರವುಗೊಳಿಸಿಲ್ಲ. ಇದರಿಂದ ಕಾಮಗಾರಿಗೂ ಅಡ್ಡಿಯಾಗುತ್ತಿದೆ’ ಎಂದು ದೂರಿದರು.
‘ಕಲ್ಲಡ್ಕ–ಮಾಣಿ ನಡುವೆ ಹೆದ್ದಾರಿ ಅಭಿವೃದ್ಧಿ ಸಂದರ್ಭದಲ್ಲಿ ಗುಡ್ಡಗಳನ್ನು ಕತ್ತರಿಸಲಾಗಿದ್ದು, ಕೆಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ಇಂತಹ ಮನೆಗಳಿಗೆ ಪೂರ್ತಿ ಪರಿಹಾರ ನೀಡಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
‘ಹೆದ್ದಾರಿ ಕಾಮಗಾರಿ ನಡೆಸುವಲ್ಲಿ ಸರ್ವಿಸ್ ರಸ್ತೆಯನ್ನು ಸಮರ್ಪಕವಾಗಿ ನಿರ್ಮಿಸಿಲ್ಲ. ಏಪ್ರಿಲ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆಗ ವಾಹನ ಸವಾರರು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.
–0–
ಹಳದಿ ರೋಗ–ಪರ್ಯಾಯ ಬೆಳೆಗೆ ಉತ್ತೇಜನ
ಸುಳ್ಯ, ಸಂಪಾಜೆ ಪರಿಸರದಲ್ಲಿ ಅಡಿಕೆ ತೋಟಗಳಲ್ಲಿ ಹಳದಿ ರೋಗ ವ್ಯಾಪಕವಾಗಿದೆ. ಈ ರೋಗ ಕಾಣಿಸಿಕೊಂಡ ಕಡೆ ಪರ್ಯಾಯ ಬೆಳೆ ಬೆಳೆಯಲು ನರೇಗಾ ಯೋಜನೆಯಡಿ ಉತ್ತೇಜನ ನೀಡುತ್ತಿದ್ದೇವೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
–0–
ಎನ್‌ಎಚ್‌ಎಂ ಸಿಬ್ಬಂದಿ ಮುಷ್ಕರ– ಸಮಸ್ಯೆ
‘ರಾಷ್ಟ್ರಿಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿ ಮುಷ್ಕರದಿಂದ ಆರೋಗ್ಯ ಸೇವೆಗಳಲ್ಲಿ ಏರುಪೇರಾಗಿತ್ತು. ಮುಷ್ಕರ ನಿರತ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದ ಬಳಿಕ ಶೇ 60ರಷ್ಟು ಸಿಬ್ಬಂದಿ ಕೆಲಸಕ್ಕೆ ಮರಳಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದರು.
–0–
ಮುಖ್ಯಾಂಶ
41ಕಸ ವಿಲೇ ವಾಹನಗಳು ಮಹಿಳೆಯರಿಂದ ಚಾಲನೆ
ಜಿಲ್ಲಾ ಪಂಚಾಯಿತಿ ಕ್ಯಾಂಟೀನ್ ಮಹಿಳೆಯರಿಂದಲೇ ನಿರ್ವಹಣೆ
ಸ್ವಸಹಾಯ ಸಂಘವೊಂದರಿಂದ ₹ 1.28 ಕೋಟಿ ಉಳಿತಾಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.