ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಮಾನಾಥ್‌ ಕೋಟ್ಯಾನ್‌ಗೆ ಅಗೌರವ: ಆರೋಪ

Published : 11 ಸೆಪ್ಟೆಂಬರ್ 2024, 5:52 IST
Last Updated : 11 ಸೆಪ್ಟೆಂಬರ್ 2024, 5:52 IST
ಫಾಲೋ ಮಾಡಿ
Comments

ಮಂಗಳೂರು: ‘ಸರ್ಕಾರಿ ಕಾರ್ಯಕ್ರಮಗಳಿಗೆ ಆ ‌‌ಕ್ಷೇತ್ರದ ಶಾಸಕರನ್ನು ಆಹ್ವಾನಿಸುವುದು ಶಿಷ್ಟಾಚಾರ. ಆದರೆ ಪಿಲಿಕುಳದಲ್ಲಿ ಸರ್ಕಾರದ ವತಿಯಿಂದ ಏರ್ಪಡಿಸಿರುವ ಕಂಬಳದ  ಸಭೆಗೆ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್‌ ಅವರನ್ನು ಆಹ್ವಾನಿಸದೇ, ಅವರಿಗೆ ಅಗೌರವ ತೋರಿಸಲಾಗಿದೆ’ ಎಂದು ಬಿಲ್ಲವ ಸಮುದಾಯದ ಮುಖಂಡರು ಆರೋಪಿಸಿದರು.

ಇಲ್ಲಿ ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು, ‘ಪಿಲಿಕುಳ ಕಂಬಳದ ಸಭೆಗೆ  ಸ್ಥಳೀಯ ಶಾಸಕರನ್ನು ಆಹ್ವಾನಿಸದೇ ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕು ಇಲ್ಲದೇ ಜಿಲ್ಲಾಧಿಕಾರಿ ಈ ರೀತಿ ಮಾಡಲಾಗಿದೆ. ಈ ವಿಚಾರವನ್ನು ರಾಜಕೀಯಗೊಳಿಸಿದರೆ ಬಿಲ್ಲವ ಸಮಾಜ ತಕ್ಕ ಉತ್ತರ ನೀಡಲಿದೆ. ಬಿಲ್ಲವ ಸಮುದಾಯಕ್ಕೆ ಸೇರಿರುವ ಶಾಸಕರಿಗೆ ಆಗಿರುವ ಅನ್ಯಾಯವನ್ನು ನಾವು ಪ್ರತಿಭಟಿಸಲಿದ್ದೇವೆ’ ಎಂದರು.

‘ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇದ್ದರೂ, ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಪಕ್ಷದವರೂ ಒಗ್ಗಟ್ಟಿನಿಂದ ನಡೆದುಕೊಳ್ಳುವ ಸಂಪ್ರದಾಯ ಜಿಲ್ಲೆಯಲ್ಲಿದೆ. ಪಿಲಿಕುಳ ಕಂಬಳ ವಿಚಾರದಲ್ಲಿ  ಆದ ತಪ್ಪನ್ನು ಸರಿಪಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಪಿಲಿಕುಳ ಕಂಬಳ ನಡೆದಿಲ್ಲ ನಿಜ. ಆದರೆ ಆ ಕಾರಣಕ್ಕೆ ಶಾಸಕರನ್ನು ಅಗೌರವದಿಂದ ಕಾಣಬೇಕಿಲ್ಲ. ತಮ್ಮ ಕ್ಷೇತ್ರದ ಕಂಬಳದ ಸಭೆಗಳಿಗೆ ಆಹ್ವಾನಿಸದೇ  ಅಗೌರವ ತೋರಿಸಿದ್ದನ್ನು ಪ್ರಶ್ನಿಸಿ  ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲು ಉಮಾನಾಥ ಕೋಟ್ಯಾನ್‌ ಕ್ರಮವಹಿಸಿದ್ದಾರೆ. ಅಲ್ಲಿ ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.

ಬಿಲ್ಲವ ಸಮುದಾಯದ ಮುಖಂಡ  ರಮೇಶ್ ಪೂಜಾರಿ, ‘ಇದು ಕೇವಲ ಬಿಲ್ಲವರಿಗೆ ಮಾತ್ರವಲ್ಲ,  ಹಿಂದುಳಿದ ವರ್ಗದ ರಾಜಕಾರಣಿಗೆ‌ ಮಾಡಿದ‌ ಅಪಚಾರ. ಶೋಷಿತ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಇಂತಹ ನಡೆಯನ್ನು ನಿರೀಕ್ಷಿಸಿರಲಿಲ್ಲ. ಈ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸದಿದ್ದರೆ, ನಾವೂ ತಕ್ಕ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು. 
ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಸಮಾಜದ ಮುಖಂಡರಾದ ಯಶವಂತ್ ದೇರಾಜೆಗುತ್ತು, ಸತೀಶ್ ಕರ್ಕೇರ, ರಾಮ ಅಮೀನ್ ಪಚ್ಚನಾಡಿ, ವಕೀಲ ಮೋಹನ್ ರಾಜ್ ಕೆ.ಆರ್ ಮತ್ತಿತರರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT