ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ಎರಡೇ ದಿನ ನೀರು ಪೂರೈಕೆ: ಪಕ್ಷಭೇದ ಮರೆತು ಹರಿಹಾಯ್ದ ಸದಸ್ಯರು

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ
Last Updated 31 ಜನವರಿ 2023, 16:02 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬೋಳೂರು, ಕೊಡಿಯಾಲ್‌ಬೈಲ್‌, ಅಶೋಕನಗರ, ಮಣ್ಣಗುಡ್ಡ, ಕುದ್ರೊಳಿ, ಸುರತ್ಕಲ್‌, ಮುಕ್ಕ, ಕಾಟಿಪಳ್ಳ, ಕೃಷ್ಣಾಪುರ ಮತ್ತಿತರ ಕಡೆ ಕೆಲವು ವಾರಗಳಿಂದ ಕುಡಿಯುವ ನೀರಿನ ತೀವ್ರ ಕೊರತೆ ಕಾಡುತ್ತಿರುವ ಬಗ್ಗೆ ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಆಕ್ಷೇಪ ವ್ಯಕ್ತಪಡಿಸಿದರು. ಕೆಲವು ಕಡೆ ವಾರದಲ್ಲಿ ಮೂರು– ನಾಲ್ಕು ದಿನಗಳಿಗೊಮ್ಮೆಯೂ ನೀರು ಪೂರೈಕೆ ಆಗುತ್ತಿಲ್ಲ ಎಂದು ಕಿಡಿಕಾಡಿದರು.

ಮೇಯರ್‌ ಜಯಾನಂದ ಅಂಚನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಪಿಸಿದ ಕಾಂಗ್ರೆಸ್‌ನ ಅಬ್ದುಲ್‌ ರವೂಫ್‌, ‘ನಿತ್ಯ 16 ಕೋಟಿ ಲೀಟರ್‌ ನೀರನ್ನು ತುಂಬೆ ಕಿಂಡಿ ಅಣೆಕಟ್ಟೆಯಿಂದ ನಗರಕ್ಕೆ ಪಂಪ್‌ ಮಾಡಲಾಗುತ್ತಿದೆ. ಇದರಲ್ಲಿ 5 ಕೋಟಿ ಲೀಟರ್‌ಗಳಷ್ಟು ನೀರು ನಗರವನ್ನು ತಲುಪುತ್ತಲೇ ಇಲ್ಲ. ಆದರೂ ದಿನದ 24 ಗಂಟೆಯೂ ನೀರು ಪೂರೈಸುವುದಾಗಿ ನಂಬಿಸಿ ಜಲಸಿರಿ ಯೋಜನೆಯಡಿ ನಗರದ ಮನೆ ಮನೆಗಳಿಗೆ ಹೊಸ ಕೊಳವೆ ಅಳವಡಿಸಲಾಗುತ್ತಿದೆ. ನೀರಿನ ಮೂಲವನ್ನು ಹೆಚ್ಚಿಸಲು ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಶಶಿಧರ ಹೆಗ್ಡೆ,‘ನೀರಿನ ಸೋರಿಕೆ ತಪ್ಪಿಸಿ ವಿತರಣಾ ಜಾಲವನ್ನು ಬಲಪಡಿಸಬೇಕು. ತುಂಬೆಯಲ್ಲಿ ನೀರು ಪಂಪ್‌ ಮಾಡುವುದು ಒಂದು ದಿನ ಸ್ಥಗಿತಗೊಂಡರೂ ರಥಬೀದಿಯಿಂದ ಬೋಳೂರುವರೆಗಿನ ಕೆಲ ವಾರ್ಡ್‌ಗಳ ಜನರು ಮೂರು ದಿನಗಳವರಗೆ ನೀರಿಲ್ಲದೇ ಕಳೆಯಬೇಕು’ ಎಂದರು.

ಕಾಂಗ್ರೆಸ್‌ನ ಎ.ಸಿ.ವಿನಯರಾಜ್‌, ‘ತುಂಬೆ ಅಣೆಕಟ್ಟೆಯಲ್ಲಿ 7 ಮೀ ಎತ್ತರದವರೆಗೆ ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ವಿರೋಧ ಪಕ್ಷದ ಪಾಲಿಕೆ ಸದಸ್ಯರು ಸಮಸ್ಯೆಯ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದ ಸಚೇತಕ ಪ್ರೇಮಾನಂದ ಶೆಟ್ಟಿ, ‘ಈ ಸಮಸ್ಯೆ ನೀಗಿಸಲು ಶೀಘ್ರವೇ ವಿಶೇಷ ಸಭೆ ಕರೆಯುವಂತೆ ಸಲಹೆ ನೀಡಿದರು.

ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ‘ಕೊಟ್ಟಾರಚೌಕಿಯ ಮುಖ್ಯ ಕೊಳವೆಯಲ್ಲಿ ಕಳೆದ ವಾರ ನೀರು ಸೋರಿಕೆ ಯಾಗಿತ್ತು. ಪುದು, ಫರಂಗಿಪೇಟೆ ಹಾಗೂ ಕಣ್ಣೂರುಗಳಲ್ಲಿ ಅಕ್ರಮ ಸಂಪರ್ಕದಿಂದ ನೀರು ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. ಒಮ್ಮೆ ಈ ಗ್ರಾಮಗಳಿಗೆ ಪ್ರತ್ಯೇಕ ಕೊಳವೆಮಾರ್ಗ ಅಳವಡಿಸಿದ ಬಳಿಕ ಸೋರಿಕೆ ಕಡಿಮೆ ಆಗಲಿದೆ’ ಎಂದರು.

‘ಗೇಲ್‌ ಅನಿಲ ಕೊಳವೆ ಮಾರ್ಗಳ ಅಳವಡಿಸುವಾಗಲೂ ನೀರಿನ ಕೊಳವೆಗಳಿಗೆ ಹಾನಿ ಉಂಟಾಗಿದೆ. ನೀರು ಪೂರೈಕೆಗೆ ಇದರಿಂದಲೂ ಅಡ್ಡಿಯುಂಟಾಗಿದೆ. ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟವನ್ನು 7 ಅಡಿಗಳವರೆಗೆ ಹೆಚ್ಚಿಸುವ ಬಗ್ಗೆ ಪರಿಶೀಲಿಸಲು ಡ್ರೋನ್‌ ಸರ್ವೆ ನಡೆಸಲಾಗಿದೆ. ನೀರಿನ ಸಂಗ್ರಹ ಮಟ್ಟ ಹೆಚ್ಚಿಸಿದರೆ ಕೆಲವು ಗ್ರಾಮಗಳು ಮುಳುಗಡೆಯಾಗುತ್ತವೆ. ಅಲ್ಲಿನ ಗ್ರಾಮಸ್ಥರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ’ ಎಂದರು.

‘ಕಡುಬೇಸಿಗೆಯಲ್ಲಿ ಅಗತ್ಯಬಿದ್ದರೆ ನೀರಿನ ಮಟ್ಟವನ್ನು ಮೂರು– ನಾಲ್ಕು ತಿಂಗಳ ಕಾಲ 7 ಅಡಿಗೆ ಹೆಚ್ಚಿಸಿ, ಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಸ್ತಾವವೂ ಇದೆ’ ಎಂದರು.

‘ಕುಡಿಯುವ ನೀರಿನ ಅಕ್ರಮ ಸಂಪರ್ಕವನ್ನು 58 ಕಡೆ ಕಡಿತಗೊಳಿಸಿದ್ದೇವೆ. ಈ ಅಭಿಯಾನ ಮುಂದುವರಿಯಲಿದೆ’ ಎಂದು ಸುಧೀರ್‌ ಶೆಟ್ಟಿ ಕಣ್ಣೂರು ತಿಳಿಸಿದರು.‌‌

ರಸ್ತೆಗಳಿಗೆ ನಾಮಕರಣ: ಮೋರ್ಗನ್ಸ್‌ಗೇಟ್‌ನಿಂದ ರಾಷ್ಟ್ರೀಯ ಹೆದ್ದಾರಿ 66ರವರೆಗಿನ ರಸ್ತೆಗೆ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಹೆಸರಿಡುವ ಪ್ರಸ್ತಾವವನ್ನು ಪಾಲಿಕೆ ಅಂಗೀಕರಿಸಿದೆ. ಪಂಪ್‌ವೆಲ್‌ನಿಂದ ಪಡೀಲ್‌ ವರೆಗಿನ ರಸ್ತೆಗೆ ಕಂಕನಾಡಿ ಗರೋಡಿ ರಸ್ತೆ ಎಂದು ಹೆಸರಿಡುವ ಪ್ರಸ್ತಾವ ಬಗ್ಗೆಪರಿಶೀಲಿಸಲು ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಶಿಫಾರಸು ಮಾಡಲಾಗಿದೆ ಎಂದು ಸಚೇತಕ ಪ್ರೇಮಾನಂದ ಶೆಟ್ಟಿ ತಿಳಿಸಿದರು.

‘ಸ್ಮಾರ್ಟ್‌ ಸಿಟಿ ಕಾಮಗಾರಿ– ಲೋಕಾಯುಕ್ತ ತನಿಖೆಯಾಗಲಿ’
ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್‌ ಸದಸ್ಯ ಎ.ಸಿ.ವಿನಯರಾಜ್‌ ಒತ್ತಾಯಿಸಿದರು.

‘63 ಕಾಮಗಾರಿಗಳಲ್ಲಿ ವರಮಾನ ಹಂಚಿಕೆ ಮಾದರಿಯಲ್ಲಿ ಕೇವಲ ಐದು (ಶೇ 7.95) ಕಾರ್ಯಕ್ರಮಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗಿದೆ ಎಂದು ಮಹಾಲೇಖಪಾಲರ ವರದಿಯಲ್ಲಿ ಹೇಳಲಾಗಿದೆ. ವರಮಾನ ಆಧರಿತ ಯೋಜನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪ ಇರುವುದನ್ನು ಮಹಾಲೇಖಪಾಲರ ವರದಿ ಎತ್ತಿತೋರಿಸಿದೆ’ ಎಂದು ಟೀಕಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆಯ ಕಸ ನಿರ್ವಹಣೆ ವ್ಯವಸ್ಥೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸದ ಕಾರಣ ₹ 15.43 ಕೋಟಿ ವೆಚ್ಚವೇ ಅಪ್ರಸ್ತುತವಾಗಿದೆ. ಟೆಂಡರ್‌ ಷರತ್ತುಗಳನ್ನು ಸಡಿಲಗೊಳಿಸಿದ್ದರಿಂದ ಯೋಜನೆಗಳ ಮಾರ್ಗಸೂಚಿಗೆ ವಿರುದ್ಧವಾಗಿ ಅನರ್ಹ ಗುತ್ತಿಗೆಸಂಸ್ಥೆಗಳೂ ಕಾಮಗಾರಿ ನಿರ್ವಹಣೆಗೆ ಆಯ್ಕೆ ಆಗುವುದಕ್ಕೆ ಅವಕಾಶ ಸಿಕ್ಕಿದೆ ಎಂಬ ಬಗ್ಗೆಯೂ ಮಹಾಲೇಖಪಾಲರ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ, ‘ಸಂಬಂಧಪಟ್ಟ ಸಂಸ್ಥೆಗೆ ನಾವು ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಿದ್ದೇವೆ’ ಎಂದರು.

ಪಚ್ಚನಾಡಿಯಲ್ಲಿ ಮತ್ತೆ 10 ಎಕರೆ ಸ್ವಾಧೀನ– ವಿರೋಧ
ಕಸ ನಿರ್ವಹಣೆ ಸಲುವಾಗಿ ಪಚ್ಚನಾಡಿಯಲ್ಲಿ ಮತ್ತೆ 10.08 ಎಕರೆ ಜಾಗವನ್ನು ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನೀಡುವ ಮೂಲಕ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವವನ್ನು ಕಾಂಗ್ರೆಸ್‌ ವಿರೋಧಿಸಿದೆ.

ಈ ವಿಚಾರ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ನವೀನ್‌ ಡಿಸೋಜ, ‘2016ರ ಕಸ ವಿಲೇವಾರಿ ನಿಯಮಗಳ ಪ್ರಕಾರ ಭೂಭರ್ತಿ ಕೇಂದ್ರವನ್ನು ಕಡಿಮೆಗೊಳಿಸಬೇಕು. ಅದಕ್ಕೆ ವಿರುದ್ಧವಾಗಿ ಪಾಲಿಕೆ ನಡೆದುಕೊಳ್ಳುತ್ತಿದೆ. ಪಚ್ಚನಾಡಿ ಪರಿಸರದ ಜನರು ಈಗಾಗಲೇ ಕಸದ ರಾಶಿಯಿಂದಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ’ ಎಂದರು.

ಈ ಪ್ರಸ್ತಾವ ಕೈಬಿಡುವಂತೆ ಭಾಸ್ಕರ ಮೊಯಿಲಿ ಒತ್ತಾಯಿಸಿದರು.

ಪಚ್ಚನಾಡಿಯಲ್ಲಿ ಕಸ ಸಂಸ್ಕರಣೆ ಮತ್ತು ನಿರ್ವಹಣೆಗೆ 77.93 ಎಕರೆ ಜಾಗವು ಲಭ್ಯ ಇದೆ. ಅದರಲ್ಲಿ 62.75 ಎಕರೆಯನ್ನು ಪರಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಉಳಿದ 15.21 ಎಕರೆ ಜಾಗವನ್ನು ಬಸವಲಿಂಗಪ್ಪ ನಗರ ಮತ್ತು ಸಂತೋಷ್‌ ನಗರದ ಮೈದಾನಕ್ಕೆ ಹಾಗೂ 9.21 ಎಕರೆ ಜಾಗವನ್ನು ಹಸಿರು ಕವಚ ಹೆಚ್ಚಳಕ್ಕಾಗಿ ಬಳಸಲಾಗುತ್ತದೆ. ಭೂಭರ್ತಿ ತಾಣದ ಕಸದ ಜೈವಿಕ ಪರಿಹಾರ ಕಾರ್ಯ ಕೈಗೊಳ್ಳುವಾದ ಕಸವನ್ನು ಸಂಸ್ಕರಣೆ ಮಾಡಲು ಹೆಚ್ಚುವರಿಯಾಗಿ 10ರಿಂದ 15 ಎಕರೆ ಜಮೀನಿನ ಅಗತ್ಯ ಇದೆ ಎಂದು ಪರಿಸರ ಎಂಜಿನಿಯರ್‌, ಆರೋಗ್ಯಾಧಿಕಾರಿ ಹಾಗೂ ವಲಯ ಆಯುಕ್ತರು ಬೇಡಿಕೆ ಸಲ್ಲಿಸಿದ್ದಾರೆ ಎಂಬ ಅಂಶ ಪ್ರಸ್ತಾವದಲ್ಲಿದೆ.

ಹೆಚ್ಚುವರಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವಕ್ಕೆ ಕೌನ್ಸಿಲ್ ಸಭೆ 2016ರ ಸೆ. 24ರಂದು ಅಂಗೀಕರಿಸಲಾಗಿತ್ತು. ಜಿಲ್ಲಾಧಿಕಾರಿ ನೇತೃತ್ವದ ಭೂಪರಿಹಾರ ನಿಗದಿ ಸಮಿತಿ ಇದಕ್ಕೆ ₹ 8 ಕೋಟಿ ದರವನ್ನು ನಿಗದಿಪಡಿಸಿದೆ. ಹೆಚ್ಚುವರಿ ಅನುದಾನ ಒದಗಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಿಲ್ಲ.ಹಾಗಾಗಿ ಟಿಡಿಆರ್‌ ನೀಡುವ ಮೂಲಕ ಭೂಸ್ವಾಧೀನ ನಡೆಸಲು ಪಾಲಿಕೆ ನಿರ್ಧರಿಸಿದೆ.

‘ಪಚ್ಚನಾಡಿಯಲ್ಲಿ ಸ್ವಾಧೀನಪಡಿಸಿಕೊಳ್ಳುವ ಜಮೀನನ್ನು ಕಸ ವಿಲೇವಾರಿಗೆ ಬಳಸುವುದಿಲ್ಲ. ಹಳೆ ಕಸ ಸಂಸ್ಕರಣೆಗೆ ಮಾತ್ರ ಬಳಸಲಾಗುತ್ತದೆ‘ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಕಸ ಸಂಗ್ರಹ ವಾಹನ ಖರೀದಿ
ಮನೆ ಮನೆಯಿಂದ ಕಸ ಸಂಗ್ರಹಿಸಲು ಹಾಗೂ ಕಸ ಸಾಗಿಸಲು ವಾಹನ ಖರೀದಿಸುವ ಪ್ರಸ್ತಾವಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತು.

ಕಸ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದ ₹ 27.15 ಕೋಟಿ ಮೊತ್ತದ ವಿಸ್ತೃತ ಯೊಜನಾ ವರದಿಗೆ ರಾಜ್ಯ ಸರ್ಕಾರದ ಉನ್ನತಾಧಿಕಾರ ಸಮಿತಿ ಅನುಮೋದನೆ ನೀಡಿದೆ. ತಳ್ಳುಗಾಡಿಗಳು, ಬ್ಯಾಟರಿ ಚಾಲಿತ ತ್ರಿಚಕ್ರವಾಹನಗಳು, ಜೀಪ್‌ ಟಿಪ್ಪರ್‌ಗಳು, ಟಿಪ್ಪರ್‌ಗಳು ಹಾಗೂ ಕಾಂಪ್ಯಾಕ್ಟರ್‌ಗಳ ಖರೀದಿ, ವಾಹನಗಳಲ್ಲಿ ಧ್ವನಿವ್ಯವಸ್ಥೆ, ಜಿಪಿಎಸ್‌, ವೇಗ ನಿಯಂತ್ರಕ ಅಳವಡಿಕೆ, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಯೂ ಇದರಲ್ಲಿ ಒಳಗೊಂಡಿದೆ.

ಈ ₹ 27.15 ಕೋಟಿಯಲ್ಲಿ ಕೇಂದ್ರ ಸರ್ಕಾರ ಶೇ 35ರಷ್ಟು, ರಾಜ್ಯ ಸರ್ಕಾರ ಶೇ 23.33 ಹಾಗೂ ಪಾಲಿಕೆ ಶೇ 41.67ರಷ್ಟು ಮೊತ್ತವನ್ನು ಭರಿಸಲಿವೆ. ನಗರದ ಸ್ವಚ್ಛತೆ ಕಾಪಾಡಲು ಮತ್ತು ಆಡಳಿತಾತ್ಮಕ ಉದ್ದೇಶದಿಂದ 60 ವಾರ್ಡ್‌ಗಳನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗುತ್ತಿದೆ. ಒಂದು ವರ್ಷದ ಅವಧಿಗೆ ಮನೆ–ಮನೆಯಿಂದ ಕಸ ಸಂಗ್ರಹ ಮತ್ತು ಸಾಗಣೆಯನ್ನು ನಾಲ್ಕು ಪ್ಯಾಕೇಜ್‌ಗಳಲ್ಲಿ ಜಾರಿಗೊಳಿಸಲಾಗುತ್ತದೆ.

‘ಕಸ ಸಂಗ್ರಹ ಹಾಗೂ ಸಾಗಣೆ ವಾಹನಗಳನ್ನು ಪಾಲಿಕೆಯೇ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ವಾಹನಗಳ ನಿರ್ವಹಣೆಯೂ ಸೇರಿದಂತೆ ಇಡೀ ಕಸ ವಿಲೇವಾರಿ ಕಾರ್ಯವನ್ನು ಹೊರಗುತ್ತಿಗೆ ನೀಡುವುದು ಒಳ್ಳೆಯದು’ ಎಂದು ವಿರೋಧ ಪಕ್ಷದ ಸದಸ್ಯರು ಅಭಿಪ್ರಾಯಪಟ್ಟರು.

ಆಯುಕ್ತರು,‘ಈ ಹಿಂದೆ ಪಾಲಿಕೆಯಲ್ಲಿ ಕಾಯಂ ಪೌರಕಾರ್ಮಿಕರ ಸಂಖ್ಯೆ ಸಾಕಷ್ಟು ಇರಲಿಲ್ಲ. ಈಗ ಅವರನ್ನು ನೇರಪಾವತಿ ವ್ಯವಸ್ಥೆಯಡಿ ತರಲಾಗಿದೆ. ಮುಂಬರುವ ದಿನಗಳಲ್ಲಿ ಲೋಡರ್‌ಗಳು ಹಾಗೂ ಚಾಲಕರನ್ನೂ ನೇರಪಾವತಿ ವ್ಯವಸ್ಥೆಯಡಿ ನೇಮಿಸಿಕೊಳ್ಳಲಾಗುತ್ತದೆ. ಪಾಲಿಕೆಯಲ್ಲೇ ಸಾಕಷ್ಟು ಮಾನವ ಸಂಪನ್ಮೂಲ ಇರುವಾಗ ವಾಹನಗಳ ನಿರ್ವಹಣೆ ಕಷ್ಟವಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT