ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ನಿಯಂತ್ರಣ ವಲಯ–ಮರಳು ಗಣಿಗಾರಿಕೆಗೆ ಮತ್ತೆ ಹಸಿರು ನಿಶಾನೆ

ನೇತ್ರಾವತಿ, ಫಲ್ಗುಣಿ ನದಿಗಳಲ್ಲಿ 14 ಕಡೆ ಮರಳು ದಿಬ್ಬ ತೆರವು– ಸಮಿತಿ ಅನುಮತಿ
Last Updated 16 ನವೆಂಬರ್ 2022, 15:46 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಜೆಡ್‌) ಸಾಂಪ್ರದಾಯಿಕ ಮರಳುಗಾರಿಕೆ ಪುನರಾರಂಭಿಸಲು ಜಿಲ್ಲಾಡಳಿತವು ಮತ್ತೆ ಹಸಿರು ನಿಶಾನೆ ತೋರಿದೆ.

ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಏಳು ಸದಸ್ಯರ ಸಮಿತಿಯ ಸಭೆಯಲ್ಲಿ ಸಿಆರ್‌ಜೆಡ್‌ ವಲಯದಲ್ಲೂ ಮರಳುಗಾರಿಕೆ ನಡೆಸಲು ಅನುಮತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.

ಸಿಆರ್‌ಜೆಡ್‌ ವಲಯದಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಗಳಲ್ಲಿ ಮರಳು ದಿಬ್ಬ ತೆರವುಗೊಳಿಸಲು ಜಿಲ್ಲಾಡಳಿತವು 14 ಕಡೆ ಸ್ಥಳಗಳನ್ನು ಗುರುತಿಸಿತ್ತು. ಅಲ್ಲಿ ಸಾಂಪ್ರದಾಯಿಕವಾಗಿ ಮರಳುಗಾರಿಕೆಗೆ ಅನುಮತಿ ನೀಡಲು ಜಿಲ್ಲಾಡಳಿತವು ಮೇ ತಿಂಗಳಲ್ಲಿ ಟೆಂಡರ್‌ ಕರೆದಿತ್ತು. ಒಟ್ಟು 287 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 200 ಅರ್ಜಿಗಳನ್ನು ಗುರುತಿಸಲಾಗಿದ್ದು, 148 ಮಂದಿಗೆ ಪರವಾನಗಿಯನ್ನೂ ನೀಡಲಾಗಿತ್ತು.

ಸಿಆರ್‌ಜೆಡ್‌ ವಲಯದಲ್ಲಿ ತೆಗೆಯುವ ಮರಳನ್ನು ಮಾರಾಟ ಮಾಡುವಂತಿಲ್ಲ. ನದಿ ದಂಡೆಯ ತಗ್ಗುಪ್ರದೇಶಗಳನ್ನು ಭರ್ತಿ ಮಾಡುವುದಕ್ಕೆ ಹಾಗೂ ಕಿನಾರೆಗಳಲ್ಲಿ ಮರಳು ಪೋಷಣೆಗೆ ಮಾತ್ರ ಆ ಮರಳನ್ನು ಬಳಸಬಹುದು ಎಂದು ಹಸಿರು ನ್ಯಾಯ ಮಂಡಳಿಯ ಚೆನ್ನೈ ಪೀಠವು ಮೇ 18ರಂದು ಆದೇಶ ಮಾಡಿತ್ತು. ಇದರ ಅನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ನಿರ್ಬಂಧಿಸಿ ಆಗಿನ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಆದೇಶ ಮಾಡಿದ್ದರು. ಹಾಗಾಗಿ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಪರವಾನಗಿ ಪಡೆದ 148 ಮಂದಿ ಮರಳುಗಾರಿಕೆ ನಡೆಸಲು ಸಾಧ್ಯವಾಗಿರಲಿಲ್ಲ.

‘ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತದ ನಿರ್ಬಂಧ ಹೇರಿದ್ದನ್ನು ಕೆಲವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್‌ ವಜಾಗೊಳಿಸಿದೆ. ಹೈಕೋರ್ಟ್‌ ತೀರ್ಪಿನ ಪ್ರಕಾರ ಸಿಆರ್‌ಜೆಡ್‌ ವ್ಯಾಪ್ತಿಯಲ್ಲೂ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಲು ಏಳು ಮಂದಿ ಸದಸ್ಯರ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್. ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

‘ಈ ಹಿಂದೆ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಗುರುತಿಸಿದ್ದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಲು ಸಮಿತಿಯಲ್ಲಿ ತೀರ್ಮಾನಿಸಿದ್ದೇವೆ. ಸಿಆರ್‌ಜೆಡ್‌ ವಲಯದಲ್ಲಿ ಮರಳುಗಾರಿಕೆಗೆ ಎಲ್ಲೂ ಯಂತ್ರ ಬಳಸುವಂತಿಲ್ಲ. ಪಾರಂಪರಿಕ ಕಾರ್ಮಿಕರಿಗೆ ಮಾತ್ರ ಅವಕಾಶ. ಯಾವುದೇ ಅಕ್ರಮ ನಡೆಸುವಂತಿಲ್ಲ. ಮರಳು ದಿಬ್ಬಗಳ ಬಳಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅಲ್ಲಿನ ಚಟುವಟಿಕೆ ಮೇಲೆ ನಿಗಾ ಇಡುತ್ತೇವೆ. ಆ್ಯಪ್‌ ಮೂಲಕ ಮಾತ್ರ ಮರಳು ಹಂಚಿಕೆಗೆ ಅವಕಾಶ ಕಲ್ಪಿಸಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

‘ಸಿಆರ್‌ಜೆಡ್‌ ವಲಯದಲ್ಲಿ ಮರಳುಗಾರಿಕೆ ನಡೆಸಲು ಒಟ್ಟು 200 ಮಂದಿಯನ್ನು ಆಯ್ಕೆ ಮಾಡಿದ್ದು, 148 ಜನರಿಗೆ ಪರವಾನಗಿ ನೀಡಿದ್ದೇವೆ. ಅವರು ಮಾತ್ರ ಮರಳು ತೆಗೆಯಬಹುದು. ಇನ್ನುಳಿದವರಿಗೆ ಶೀಘ್ರವೇ ಪರವಾನಗಿ ನೀಡಲಿದ್ದೇವೆ. 2011ರ ನ. 8ಕ್ಕೆ ಮುನ್ನ ಜಿಲ್ಲೆಯಲ್ಲಿ ದೋಣಿಗಳನ್ನು ನೋಂದಾಯಿಸಿದ್ದವರಿಗೆ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಿದ್ದೇವೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಪ್ರದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

’ಜಿಲ್ಲೆಯಲ್ಲಿ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಇಲ್ಲದ 17 ಕಡೆ ಮರಳು ಘಟಕಗಳನ್ನು ಗುರುತಿಸಲಾಗಿದೆ. ಇಲ್ಲಿ ಟೆಂಡರ್‌ ಆಹ್ವಾನಿಸಿ ಐದು ವರ್ಷಗಳ ಕಾಲ ಮರಳುಗಾರಿಕೆಗೆ ಪರವಾನಗಿ ನೀಡಿದ್ದೇವೆ. ಇನ್ನೂ 18 ಕಡೆ ಮರಳು ಘಟಕಗಳಿಗೆ ಜಾಗ ಗುರುತಿಸಲಾಗಿದ್ದು, ಅವುಗಳಿಗೆ ರಾಜ್ಯ ಪರಿಸರ ಆಘಾತ ಅಂದಜೀಕರಣ ಪ್ರಾಧಿಕಾರದಿಂದ (ಎಸ್‌ಇಐಐಎ) ಪರಿಸರ ವಿಮೋಚನಾ ಪತ್ರ ಇನ್ನಷ್ಟೇ ಸಿಗಬೇಕಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಮರಳು ಬೇಡಿಕೆಯನ್ನು ಆಧರಿಸಿ ಇನ್ನಷ್ಟು ಕಡೆ ಮರಳು ಘಟಕಗಳನ್ನು ಗುರುತಿಸಲು ಸಿದ್ಧತೆ ನಡೆದಿದೆ’ ಎಂದರು.

****

ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಯಿಂದ ಎನ್‌ಜಿಟಿ ಆದೇಶ ಉಲ್ಲಂಘನೆ ಆಗದಂತೆ ತಡೆಯಲು ಷರತ್ತುಗಳನ್ನು ವಿಧಿಸುತ್ತೇವೆ
-ರವಿಕುಮಾರ್‌ ಎಂ.ಆರ್‌., ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT