ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷ್ಯಚಿತ್ರದಲ್ಲಿ ದೇವದಾಸಿ ಬದುಕಿನ ನೋಟ

ಸಂಶೋಧನಾನಿರತ ಪ್ರಾಧ್ಯಾಪಕಿಯ ಪ್ರಯತ್ನ
Published 28 ಸೆಪ್ಟೆಂಬರ್ 2023, 23:22 IST
Last Updated 28 ಸೆಪ್ಟೆಂಬರ್ 2023, 23:22 IST
ಅಕ್ಷರ ಗಾತ್ರ

ಮಂಗಳೂರು: ಪುತ್ತೂರಿನ ಮಹಿಳಾ ಪದವಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಪೂರ್ಣಿಮಾ ರವಿ ಅವರು ಉತ್ತರ ಕರ್ನಾಟಕದ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ದೇವದಾಸಿಯರ ಕುರಿತ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.

ಮಡಿಕೇರಿಯ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕಿ ನಯನಾ ಕಶ್ಯಪ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಾಡುತ್ತಿದ್ದು, ‘ರೆಪ್ರಸೆಂಟೇಷನ್ಸ್‌ ಆಫ್ ದಿ ದೇವದಾಸಿ ಟ್ರೆಡಿಷನ್ ಇನ್‌ ಸೆಲೆಕ್ಟ್ ಇಂಡಿಯನ್ ಇಂಗ್ಲಿಷ್ ನರೇಟಿವ್ಸ್’ ಅವರ ಸಂಶೋಧನೆಯ ವಿಷಯವಾಗಿದೆ.

ಅಧ್ಯಯನದ ವೇಳೆ ಅವರು ದೇವದಾಸಿಯರ ಬದುಕನ್ನು ಸಮೀಪದಿಂದ ಗಮನಿಸಿದ್ದಾರೆ. ‘ಒಡಲ ವೇದನೆ’ಯನ್ನು ಅರಗಿಸಿಕೊಂಡು, ಸಮಾಜದಲ್ಲಿ ಎಲ್ಲರೊಡನೆ ಜೀವನ ನಡೆಸುತ್ತಿರುವ ಅವರಿಗೆ ಸರ್ಕಾರ ಸಹಾಯಹಸ್ತ ಚಾಚಬೇಕೆಂಬ ಹಂಬಲದಿಂದ ಸಾಕ್ಷಚಿತ್ರ ನಿರ್ಮಿಸಿದ್ದಾರೆ.

 ದೇವದಾಸಿ ಬದುಕಿನ ನೋಟ ನೀಡುವ ಸಾಕ್ಷ್ಯಚಿತ್ರ ನಿರ್ಮಾಪಕಿ ಪೂರ್ಣಿಮಾ ರವಿ

ದೇವದಾಸಿ ಬದುಕಿನ ನೋಟ ನೀಡುವ ಸಾಕ್ಷ್ಯಚಿತ್ರ ನಿರ್ಮಾಪಕಿ ಪೂರ್ಣಿಮಾ ರವಿ

‘ಲೇಖಕಿ ಸುಧಾಮೂರ್ತಿ ಅವರ ‘ಥ್ರೀ ಥೌಸಂಡ್ ಸ್ಟಿಚಸ್’ ಕೃತಿಯಲ್ಲಿ ದೇವದಾಸಿಯರ ಬಗೆಗಿನ ಒಂದು ಅಧ್ಯಾಯ ಇತ್ತು. ಇದನ್ನು ಓದಿ ಮನಸ್ಸು ತಲ್ಲಣಿಸಿತು. ಆ ಕ್ಷಣದಲ್ಲೇ ಇದೇ ವಿಷಯವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದೆ. ಪಿಎಚ್‌.ಡಿ.ಗೆ ಅಧ್ಯಯನ ಮಾಡುವಾಗ ವಿಜಯಪುರ, ಕೊಪ್ಪಳ, ದಾವಣಗೆರೆ ಭಾಗದಲ್ಲಿ ದೇವದಾಸಿಯರ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿ ಇರುವುದು ಗಮನಕ್ಕೆ ಬಂತು. ದೇವದಾಸಿ ವಿಮೋಚನಾ ಸಂಘದವರ ನೆರವಿನೊಂದಿಗೆ 40 ದೇವದಾಸಿಯರನ್ನು ಮಾತನಾಡಿಸಿ, ಸಾಕ್ಷ್ಯಚಿತ್ರ ತಯಾರಿಸಿದ್ದೇನೆ’ ಎನ್ನುತ್ತಾರೆ ಪೂರ್ಣಿಮಾ.

‘ಗಾಡ್ಸ್‌ ವೈವ್ಸ್ ಮೆನ್ಸ್‌ ಸ್ಲೇವ್ಸ್‌ ತಲೆಬರಹದ ಸಾಕ್ಷ್ಯಚಿತ್ರದಲ್ಲಿ ದೇವದಾಸಿಯರಾಗಿರುವ 100ಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ. ಅವರಲ್ಲಿ 40 ಮಂದಿ ಧೈರ್ಯದಿಂದ ಮಾತನಾಡಲು ಮುಂದೆ ಬಂದಿದ್ದಾರೆ. ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಏಳೆಂಟು ತಿಂಗಳು ಸಮಯ ಹಿಡಿಯಿತು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಅವುಗಳ ಎಡಿಟಿಂಗ್ ಮಾಡಿದೆವು. 78 ನಿಮಿಷದ ಸಾಕ್ಷ್ಯಚಿತ್ರ ಇದಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ’ ಎಂದು ಅವರು ವಿವರಿಸಿದರು.

‘1982ರಲ್ಲಿ ದೇವದಾಸಿ ಪದ್ಧತಿ ನಿಷೇಧಗೊಂಡಿದ್ದರೂ, ದೇವದಾಸಿ ವಿಮೋಚನಾ ಸಂಘದ ಲೆಕ್ಕಾಚಾರದ ಪ್ರಕಾರ 80 ಸಾವಿರದಷ್ಟು ದೇವದಾಸಿಯರು ರಾಜ್ಯದಲ್ಲಿದ್ದಾರೆ. 2008ರಲ್ಲಿ ನಡೆದ ಸಮೀಕ್ಷೆಯಂತೆ ರಾಜ್ಯದಲ್ಲಿ ಇರುವುದು 45 ಸಾವಿರ ದೇವದಾಸಿಯರು ಮಾತ್ರ. ಈ ಸಮೀಕ್ಷೆ ಆಧರಿಸಿ 35 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾಸಿಕ ಪಿಂಚಣಿ ಸಿಗುತ್ತಿದೆ. ಈಗಲೂ ಅನೇಕರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಮಾಸಿಕ ಪಿಂಚಣಿ ದೊರೆಯಬೇಕು. ಅವರು ಎಲ್ಲರಂತೆ ಸಹಜ ಜೀವನ ನಡೆಸುವಂತಾಗಬೇಕು ಎಂಬುದು ಸಾಕ್ಷ್ಯಚಿತ್ರ ನಿರ್ಮಾಣದ ಮೂಲ ಆಶಯ. ಇಳಿಸಂಜೆಯಲ್ಲಿ ದೇವದಾಸಿಯರ ಬದುಕಿನ ಕರಾಳ ಸ್ವರೂಪವನ್ನೂ ಸಾಕ್ಷ್ಯಚಿತ್ರದಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಪೂರ್ಣಿಮಾ ಪ್ರತಿಕ್ರಿಯಿಸಿದರು.

ಪೂರ್ಣಿಮಾ ಅವರು ತಯಾರಿಸಿರುವ ಸಾಕ್ಷ್ಯಚಿತ್ರದ ಮುಖಪುಟ
ಪೂರ್ಣಿಮಾ ಅವರು ತಯಾರಿಸಿರುವ ಸಾಕ್ಷ್ಯಚಿತ್ರದ ಮುಖಪುಟ
ದೇವದಾಸಿಯರು ವಾಸಿಸುವ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿ ಅವರ ಜೀವನಕ್ಕೆ ನೆಲೆ ಒದಗಿಸಲು ಸ್ವಯಂಸೇವಾ ಸಂಸ್ಥೆಗಳು ಮುಂದೆ ಬರಬೇಕು.
–ಪೂರ್ಣಿಮಾ ರವಿ ಸಾಕ್ಷ್ಯಚಿತ್ರ ನಿರ್ಮಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT