ವಿದ್ಯುತ್ ದರ ಪರಿಷ್ಕರಣೆ: ಕೈಗಾರಿಕೋದ್ಯಮಿಗಳು, ರೈತರ ಆಕ್ರೋಶ

ಮಂಗಳೂರು: ಮತ್ತೊಮ್ಮೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದ್ದು, ಪ್ರತಿ ಯುನಿಟ್‌ಗೆ 35 ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. ಇದರಿಂದಾಗಿ ಉದ್ಯಮಿಗಳು, ಕೃಷಿಕರು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.
ನಷ್ಟವನ್ನು ತುಂಬಿಕೊಳ್ಳಲು ಪ್ರತಿ ಯುನಿಟ್‌ಗೆ ₹1.33 ರಷ್ಟು ವಿದ್ಯುತ್ ದರ ಹೆಚ್ಚಳ ಮಾಡುವಂತೆ ಮೆಸ್ಕಾಂ ಪ್ರಸ್ತಾವ ಸಲ್ಲಿಸಿತ್ತು. ಇದೀಗ 35 ಪೈಸೆ ಹೆಚ್ಚಳವಾಗಿದೆ. ಆದರೆ, ವರ್ಷದಲ್ಲಿ ಎರಡು ಬಾರಿ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕೋವಿಡ್‌ನಿಂದ ತತ್ತರಿಸಿರುವ ಸಣ್ಣ ಉದ್ಯಮಗಳು ಇನ್ನೂ ಸಮರ್ಪಕ ವ್ಯವಸ್ಥೆಗೆ ತಲುಪಿಲ್ಲ. ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಹಿಂದಿನ ಬೆಲೆ ಸಿಗದೆ ಕಷ್ಟದಲ್ಲಿರುವಾಗ, ವಿದ್ಯುತ್ ಬೆಲೆ ಏರಿಕೆ ಮಾಡಿ ಸಣ್ಣ ಉದ್ದಿಮೆಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈ ಹಿಂದೆ ನಡೆದ ಕೆಆರ್‌ಇಸಿ ಸಭೆಯಲ್ಲಿ ಸಹ ವಿದ್ಯುತ್ ದರ ಏರಿಕೆ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸಲಾಗಿತ್ತು. ಮುಖ್ಯಮಂತ್ರಿ ಕೂಡ ವಿದ್ಯುತ್ ದರ ಏರಿಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು’ ಎಂದು ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಐಸಾಕ್ ವಾಸ್ ಹೇಳಿದರು.
‘ಆದರೆ, ಏಕಾಏಕಿ ದರ ಹೆಚ್ಚಳ ಆಘಾತ ತಂದಿದೆ. ಮೆಸ್ಕಾಂ ದರ ಏರಿಕೆ ಮೊದಲು ತನ್ನ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲಿ. ಕೋವಿಡೋತ್ತರ ಕಾಲದ ಕಷ್ಟಗಳನ್ನು ಗಣನೆಯಲ್ಲಿ ಇಟ್ಟುಕೊಂಡು ಹಿಂದಿನ ದರವನ್ನೇ ಮುಂದುವರಿಸಲಿ’ ಎಂದು ಅಭಿಪ್ರಾಯಪಟ್ಟರು.
‘ಕೋವಿಡ್–19ನಿಂದಾಗಿ ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಇದೀಗ ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ಈ ಕ್ಷೇತ್ರ ಸಂಪೂರ್ಣವಾಗಿ ಕುಸಿದು ಹೋಗಲಿದೆ. ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಬೆನ್ನೆಲುಬಾಗಿದ್ದು, ಅವುಗಳ ಮೇಲೆ ಹೊಡೆತ ಹಾಕಬಾರದು. ಆರು ತಿಂಗಳ ಹಿಂದಷ್ಟೇ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗಿದ್ದು, ಇದೀಗ ಮತ್ತೊಮ್ಮೆ ದರ ಹೆಚ್ಚಿಸಿರುವುದು ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ದೂಡಿದಂತಾಗಿದೆ’ ಎಂದು ಪ್ಲಾಸ್ಟಿಕ್ ತಯಾರಿಕಾ ಉದ್ಯಮಿಗಳ ಸಂಘದ ಅಧ್ಯಕ್ಷ ನಜೀರ್ ಹೇಳಿದರು.
‘ಮಂಜುಗಡ್ಡೆ ಸ್ಥಾವರಗಳು ವಿದ್ಯುತ್ ದರ ಏರಿಕೆಯಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಲಿದೆ. ಈಗಾಗಲೇ ಕೋವಿಡ್–19ನಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಇದೀಗ ಸ್ವಲ್ಪ ಚೇತರಿಕೆ ಕಾಣುತ್ತಿದ್ದು, ಈ ಸಂದರ್ಭದಲ್ಲಿ ದರ ಏರಿಕೆ ಮಾಡುವುದು ಸರಿಯಲ್ಲ. ಕೂಡಲೇ ಪರಿಷ್ಕರಣೆಯನ್ನು ಹಿಂಪಡೆಯಬೇಕು’ ಎಂದು ಮಂಜುಗಡ್ಡೆ ಸ್ಥಾವರಗಳ ಮಾಲೀಕರು ಆಗ್ರಹಿಸಿದ್ದಾರೆ.
‘ಮೊದಲೇ ಬೆಲೆ ಏರಿಕೆಯಿಂದ ಜನರು ತತ್ತರಿಸುವಂತಾಗಿದೆ. ನಿತ್ಯ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ದರವನ್ನೂ ಏರಿಕೆ ಮಾಡಿರುವುದು ಜನರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಆದಾಯವಿಲ್ಲದೇ ಜನರು ಕಂಗೆಟ್ಟಿದ್ದಾರೆ. ಜನರಿಗೆ ಉದ್ಯೋಗ, ಆರ್ಥಿಕ ಚೇತರಿಕೆಗೆ ಅವಕಾಶ ಕಲ್ಪಿಸಬೇಕಾದ ಸರ್ಕಾರ, ವಿದ್ಯುತ್ ದರ ಏರಿಸುವುದು ಸರಿಯಲ್ಲ. ಈಗಾಗಲೇ ವಿದ್ಯುತ್ ದರ ಹೆಚ್ಚಾಗಿದ್ದು, ಮೆಸ್ಕಾಂ ತನ್ನ ಸೋರಿಕೆಯನ್ನು ತಡೆಯದೇಮ ದರ ಹೆಚ್ಚಳದ ಭಾರವನ್ನು ಜನರ ಮೇಲೆ ಹೊರಿಸುವ ಕೆಲಸ ಮಾಡುತ್ತಿರುವುದು ಖಂಡನೀಯ’ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವಿಕಿರಣ ಪುಣಚ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.