ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ | ಉದ್ಯೋಗ ಖಾತ್ರಿ ಯೋಜನೆ; 87 ತೆರೆದ ಬಾವಿ ನಿರ್ಮಾಣ

7,454 ಮಂದಿಗೆ ಉದ್ಯೋಗ ಕಾರ್ಡ್
ಅಕ್ಷರ ಗಾತ್ರ

ಮೂಡುಬಿದಿರೆ: ಗ್ರಾಮೀಣ ಜನರಿಗೆ ತಮ್ಮದೇ ಹೊಲದಲ್ಲಿ ದುಡಿದು ಸಂಪಾದನೆ ಮಾಡುವ ಜತೆಗೆ ಸರ್ಕಾರದಿಂದ ಉದ್ಯೋಗ ಅವಕಾಶ ಕಲ್ಪಿಸುವ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಮೂಡುಬಿದಿರೆ ತಾಲ್ಲೂಕಿನಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.

ವೈಯುಕ್ತಿಕ ಕಾಮಗಾರಿಗಳ ಜತೆಗೆ ಸಾರ್ವಜನಿಕ ಕಾಮಗಾರಿಗಳನ್ನು ಕೂಡ ಈ ಯೋಜನೆಯಲ್ಲಿ ಅನುಷ್ಠಾನಗೊಳಿಸುವ ಮೂಲಕ ಉದ್ಯೋಗ ಖಾತ್ರಿ ಫಲಾನುಭವಿಗಳು ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ.

ಕಳೆದ ವರ್ಷ ತಾಲ್ಲೂಕಿನಲ್ಲಿ ಒಟ್ಟು 662 ವೈಯುಕ್ತಿಕ ಕಾಮಗಾರಿಗಳು ನಡೆದರೆ, 124 ಸಾರ್ವಜನಿಕ ಕಾಮಗಾರಿಗಳು ನಡೆದಿವೆ. ಗ್ರಾಮಿಣ ಜನರಿಗೆ ಉದ್ಯೋಗ ಅವಕಾಶ ನೀಡಿದ್ದು, ಉತ್ತಮ ಆದಾಯದ ಜತೆಗೆ ಅಭಿವೃದ್ಧಿ ಕಾಮಗಾರಿಗಳ ಮೂಲಕ ಗ್ರಾಮ ಪ್ರಗತಿ ಹೊಂದಿದೆ.

ಈ ಯೋಜನೆಯ ಪಾರದರ್ಶಕ ಅನುಷ್ಠಾನಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಜಾಬ್ ಕಾರ್ಡ್ ವಿತರಿಸಲಾಗುತ್ತದೆ. ತಾಲ್ಲೂಕಿನಲ್ಲಿ ಈವರೆಗೆ 7,464 ಮಂದಿಗೆ ಜಾಬ್ ಕಾರ್ಡ್‌ ನೀಡಲಾಗಿದ್ದು, 1,02,769 ಮಾನವ ದಿನಗಳನ್ನು ಸೃಜಿಸಲಾಗಿದೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಪ್ರಮುಖರು.

ವೈಯುಕ್ತಿಕ ಕಾಮಗಾರಿಗಳು: ನರೇಗಾ ಯೋಜನೆಯಲ್ಲಿ ರೈತರು ತೋಟದ ಕೆಲಸ ಮಾಡಿಕೊಳ್ಳಬಹುದು. ಕೃಷಿಕರಿಗೆ ಈ ಯೋಜನೆ ತುಂಬಾ ಅನುಕೂಲವಾಗಿದೆ. ತಾಲ್ಲೂಕಿನಲ್ಲಿ ತೋಟಗಾರಿಕೆ ಇಲಾಖೆಯಿಂದ 141 ಕಾಮಗಾರಿಗಳು ನಡೆದಿವೆ. ಅದಲ್ಲದೆ 82 ಸೋಕ್ ಪಿಟ್, ಕುಡಿಯುವ ನೀರಿಗಾಗಿ 87 ತೆರೆದ ಬಾವಿ ನಿರ್ಮಾಣ, ನೀರಿಂಗಿಸಲು 7 ಕೃಷಿ ಹೊಂಡ ಹಾಗೂ ಸಾವಯುವ ಗೊಬ್ಬರ ತಯಾರಿಸಲು 16 ಎರೆಹುಳು ತೊಟ್ಟಿ ನಿರ್ಮಾಣ ಮಾಡಲಾಗಿದೆ. ದನ ಸಾಕಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 21 ರೈತರು ದನದ ಹಟ್ಟಿ ನಿರ್ಮಿಸಿಕೊಂಡಿದ್ದಾರೆ. 1 ಕುರಿ ಶೆಡ್, 7 ಕೋಳಿ ಶೆಡ್, 1 ಹಂದಿ ಶೆಡ್, 10 ಗೊಬ್ಬರ ಗುಂಡಿ, 5 ಮಂದಿಗೆ ವಸತಿ, 1 ಶೌಚಾಲಯ ನಿರ್ಮಾಣವಾಗಿದೆ. ತಾಲ್ಲೂಕಿನ ಫಲಾನುಭವಿಗಳು ನರೇಗಾ ಯೋಜನೆಯಲ್ಲಿ ಕೃಷಿಯ ಜತೆಗೆ ಆದಾಯ ತರುವ ಉಪಕಸುಬುಗಳಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡು ಪ್ರಯೋಜನ ಪಡೆದುಕೊಂಡಿದ್ದಾರೆ.

ಸಾರ್ವಜನಿಕ ಕಾಮಗಾರಿಗಳ ಅಡಿಯಲ್ಲಿ 1 ಶಾಲಾ ಆವರಣ ಗೋಡೆ ನಿರ್ಮಾಣ, ಸಮಗ್ರ ಕೆರೆ ಅಭಿವೃದ್ಧಿ 6, ತೋಡು ಹೂಳೆತ್ತಿರುವುದು 31, ಮಳೆನೀರು ಇಂಗಿಸುವ ಘಟಕ 8, ಮರುಪೂರಣ ಘಟಕ 1, ಪೌಷ್ಟಿಕ ತೋಟ 2, ಅರಣ್ಯೀಕರಣ 4 ಹಾಗೂ ಬಚ್ಚಲು ಗುಂಡಿ 3 ಕಡೆ ನಿರ್ಮಾಣವಾಗಿವೆ.

ಜನಜಾಗೃತಿಗೆ ಅಭಿಯಾನ
ನರೇಗಾ ಯೋಜನೆಯ ಪ್ರಯೋಜನಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ‘ದುಡಿಯೋಣ ಬಾ, ಜಲಶಕ್ತಿ, ರೈತ ಬಂಧು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಕುಟುಂಬದ ಒಬ್ಬ ಸದಸ್ಯ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಮೂಲಕ ಪ್ರಯೋಜನ ಪಡೆದುಕೊಳ್ಳುವ ಬಗ್ಗೆ ಮಾಹಿತಿ, ನರೇಗಾ ಅಕುಶಲ ಕೂಲಿ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ಶಿಬಿರ ಹಮ್ಮಿಕೊಳ್ಳುವ ಮೂಲಕ ಮೂಡುಬಿದಿರೆ ತಾಲ್ಲೂಕಿನಲ್ಲಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT