ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ: ಸಂಜೆ ಆಶ್ಲೇಷ ಬಲಿಗೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ

ಗುರುವಾರದಿಂದ ನಿರಂತರ ಆರಂಭವಾದ ಸಂಜೆಯ ಆಸ್ಲೇಷ ಬಲಿ ಸೇವೆ
Last Updated 5 ಜುಲೈ 2018, 11:32 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪ್ರಧಾನ ಸೇವೆಗಳಲ್ಲಿ ಒಂದಾದ ಆಶ್ಲೇಷ ಬಲಿ ಸೇವೆ ಬುಧವಾರ ಸಂಜೆ ಶ್ರೀ ದೇವಳದ ವತಿಯಿಂದ ಇಲ್ಲಿಯ ಶೃಂಗೇರಿ ಮಠದಲ್ಲಿ ನಡೆಸಲಾಯಿತು. ಈಗ ಭಕ್ತರಿಗೆ ಸಂಜೆಯ ವೇಳೆ ಸೇವೆ ನೆರವೇರಿಸಲು ಅವಕಾಶ ಒದಗಿಸಲಾಗಿದ್ದು, ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಜೆ ಆಶ್ಲೇಷ ಬಲಿ ಸೇವೆ ನೆರವೇರಿಸುವ ಸಲುವಾಗಿ ಅಷ್ಠಮಂಗಲ ಪ್ರಶ್ನೆ ಚಿಂತನೆಯಲ್ಲಿ ಸೂಚಿಸಿದಂತೆ ದೇವರಿಗೆ ದ್ರವ್ಯಕಲಶಾಭಿಷೇಕವನ್ನು ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಬೆಳಿಗ್ಗೆ ನೆರವೇರಿಸಿದರು. ದೇವರಲ್ಲಿ ಅನುಜ್ಞಾ ಪ್ರಾರ್ಥನೆ ನೆರವೇರಿತು.

ಈ ಹಿಂದೆ ಕ್ಷೇತ್ರದಲ್ಲಿ ಬೆಳಗ್ಗಿನ ವೇಳೆ ಮೂರು ಹಂತದಲ್ಲಿ ಸೇವೆ ನೆರವೇರುತ್ತಿತ್ತು. ಭಕ್ತರ ವಿಶೇಷ ಅನುಕೂಲಕ್ಕಾಗಿ ಸಂಜೆಯ ವೇಳೆ ಆಶ್ಲೇಷ ಬಲಿ ಸೇವೆ ನಡೆಸುವ ನಿರ್ಧಾರವನ್ನು ಆಡಳಿತ ಮಂಡಳಿ ಮಾಡಿತ್ತು. ಬುಧವಾರ ಸಂಜೆ 6 ಗಂಟೆಗೆ ಶ್ರೀ ದೇವಳದ ವತಿಯಿಂದ ಆಶ್ಲೇಷ ಬಲಿ ಸೇವೆಯು ಈಗಾಗಲೇ ಬೆಳಗ್ಗೆ ಸೇವೆ ನಡೆಯುವ ಶೃಂಗೇರಿ ಮಠದಲ್ಲಿ ಆರಂಭವಾಯಿತು. ಪುರೋಹಿತರಾದ ವೇದಮೂರ್ತಿ ಮದುಸೂಧನ ಕಲ್ಲೂರಾಯ ಮತ್ತು ಸುಬ್ರಹ್ಮಣ್ಯ ಕೋರ್ನಾಯ ಆಶ್ಲೇಷ ಬಲಿಯ ವೈದಿಕ ವಿದಿ ವಿಧಾನ ನೆರವೇರಿಸಿದರು.

ಮುಜರಾಯಿ ಇಲಾಖೆಯ ಶೈವಾಗಮ ಪಂಡಿತ ಪ್ರೊ.ಶಿವಕುಮಾರ್, ಶ್ರೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಆಡಳಿತ ಮಂಡಳಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಹೇಶ್ ಕುಮಾರ್ ಕರಿಕ್ಕಳ, ಮಾಧವ.ಡಿ, ರಾಜೀವಿ ಆರ್ ರೈ, ಮಾಸ್ಟರ್‍ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಹೆಬ್ಬಾರ್ ಷಣ್ಮುಖ ಉಪಾರ್ಣ, ಕಛೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶಿಷ್ಟಾಚಾರ ಅಧಿಕಾರಿ ಕೆ.ಎಂ.ಗೋಪಿನಾಥ್ ನಂಬೀಶ, ಶ್ರೀ ದೇವಳದ ಪದ್ಮನಾಭ ಶೆಟ್ಟಿಗಾರ್ ಇದ್ದರು.

ಕುಕ್ಕೆ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆಯು ಪ್ರತಿದಿನ ಬೆಳಗ್ಗಿನ ವೇಳೆ ನಡೆಯುತ್ತಿತ್ತು. ಆದರೆ ಭಕ್ತರ ಅನುಕೂಲಕ್ಕಾಗಿ ಅಷ್ಟಮಂಗಲ ಪ್ರಶ್ನೆಚಿಂತನೆಯಲ್ಲಿ ಒಪ್ಪಿಗೆ ಸಿಕ್ಕಿದ ಬಳಿಕ ಸಂಜೆಯ ವೇಳೆ ನಡೆಸಲು ಆಡಳಿತ ಮಂಡಳಿ ಸೇವೆಯನ್ನು ಆರಂಭಿಸಿದೆ. ಬೆಳಗ್ಗೆ ನಡೆಯುವ ಸಾಂಪ್ರದಾಯಿಕ ರೀತಿಯಂತೇ ಸಂಜೆ ಕೂಡಾ ನಡೆಯುತ್ತಿದೆ ಎಂದು ಮುಜರಾಯಿ ಇಲಾಖೆಯ ಶೈವಾಗಮ ಪಂಡಿತ ಪ್ರೊ.ಶಿವಕುಮಾರ್ ಹೇಳಿದರು.

ಭಕ್ತರ ಅನುಕೂಲಕ್ಕಾಗಿ ಸಂಜೆಯ ವೇಳೆ ಆಶ್ಲೇಷ ಬಲಿ ಸೇವೆ ನಡೆಯುತ್ತಿದೆ. ಪ್ರಥಮವಾಗಿ ದೇವಳದಿಂದ ಸೇವೆ ಸಲ್ಲಿಸಲಾಗಿದೆ.ಇನ್ನು ಮುಂದೆ ಸಂಜೆ ಕೂಡಾ ಆಶ್ಲೇಷ ಬಲಿ ಸೇವೆ ನೆರವೇರಿಸಬಹುದು.ಸಂಜೆ ಆಶ್ಲೇಷ ಬಲಿ ಸೇವೆ ನಡೆಸುವ ಭಕ್ತರು ಮಾತ್ರವಲ್ಲದೆ ಶ್ರೀ ದೇವರ ಸಕಲ ಭಕ್ತರ ಆಶೋತ್ತರಗಳು ಈಡೇರಿ ಅವರ ಶ್ರೇಯೋಭಿವೃದ್ಧಿಯಾಗಲಿ ಎಂದು ಈ ಸಂದರ್ಭದಲ್ಲಿ ಸಂಕಲ್ಪ ಮಾಡಿ ಪ್ರಾರ್ಥಿಸಿದ್ದೇನೆ ಎಂದು ‌ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT