ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಮಾಜಿ ಸಚಿವ ಅಭಯಚಂದ್ರ ಜೈನ್

ಮಂಗಳೂರು: ‘ಇನ್ನು ಮುಂದೆ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆ ಸ್ಥಾನವನ್ನು ಯುವಕರಿಗೆ ಬಿಟ್ಟುಕೊಟ್ಟು ಅವರನ್ನು ಗೆಲ್ಲಿಸಲು ಶ್ರಮಿಸುತ್ತೇನೆ’ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರಕಟಿಸಿದ್ದಾರೆ.
ಕಳೆದ ಚುನಾವಣೆಗೂ ಮೊದಲೇ ಆಗಿನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿಥುನ್ ರೈ ಅವರಿಗೆ ಅವಕಾಶ ಕೊಡಿ ಎಂದು ವರಿಷ್ಠರಿಗೆ ಹೇಳಿದ್ದೆ. ಚುನಾವಣೆಯಲ್ಲಿ ಹೀನಾಯವಾಗಿ ಸೋತೆ. ಪ್ರಾಮಾಣಿಕತೆ ನನ್ನನ್ನು ಗೆಲ್ಲಿಸಲಿಲ್ಲ. ಇನ್ಮುಂದೆ ಯುವಕರನ್ನು ನಿಲ್ಲಿಸಿ ಗೆಲ್ಲಿಸಲು ಪಣ ತೊಡುತ್ತೇನೆ ಎಂದು ಜೈನ್ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಒಲಿಂಪಿಕ್ಸ್ ಪದಕ ವಿಜೇತ, ಪದ್ಮಶ್ರೀ ಮಿಲ್ಖಾ ಸಿಂಗ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶ ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ‘ಕಾಂಗ್ರೆಸ್ ಉಳಿಯಬೇಕಾದರೆ ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು. ಯುವಕರಿಗೆ ಅವಕಾಶ ನೀಡಿದರೆ ಮತದಾರರಿಗೂ ಸ್ಫೂರ್ತಿ ಬರುತ್ತದೆ. ರಾಜಕಾರಣದಲ್ಲಿ ಈ ಬದಲಾವಣೆಯ ಅಗತ್ಯವಿದೆ. ಎಲ್ಲ ಹಿರಿಯರಿಗೆ ಇದೇ ಕಿವಿಮಾತು ಹೇಳುತ್ತಿದ್ದೇನೆ’ ಎಂದರು.
‘ಕ್ರೀಡಾ ಸಚಿವನಾಗಿದ್ದಾಗ ಮಂಗಳೂರಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ಕಟ್ಟುವ ಉದ್ದೇಶವಿತ್ತು. ಬಳಿಕ ಖಾತೆ ಹೋಗಿದ್ದರಿಂದ ಆ ಕನಸು ಸಾಕಾರವಾಗಲಿಲ್ಲ. ಈಗಿನ ಶಾಸಕರು, ಸಚಿವರು ಈ ಕಾರ್ಯವನ್ನು ಆದ್ಯತೆಯಲ್ಲಿ ಮಾಡಬೇಕು. ನಾನು ಸಚಿವನಾಗಿದ್ದಾಗ ಮೂಡುಬಿದಿರೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್, ಈಜುಕೊಳ, ಜಿಮ್ ನಿರ್ಮಾಣ ಮಾಡಿದ್ದರಿಂದ ಹೆಚ್ಚಿನ ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯವಾಯಿತು. ಎಮ್ಮೆಕೆರೆಯಲ್ಲೂ ಈಜುಕೊಳ ನಿರ್ಮಿಸಲು ಶಂಕುಸ್ಥಾಪನೆ ಮಾಡಿದ್ದರೂ ಈಗ ಅದು ನನೆಗುದಿಗೆ ಬಿದ್ದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಿಲ್ಖಾ ಸಿಂಗ್ ಬರಿಗಾಲಿನಲ್ಲಿ ಓಡಿ ಸಾಧನೆ ಮಾಡಿದವರು. ಸ್ವ ಪ್ರಯತ್ನದಿಂದ ಸಾಧಕರಾಗಿ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕು’ ಎಂದು ಆಗ್ರಹಿಸಿದರು.
ಯುವ ಮುಖಂಡ ಮಿಥುನ್ ರೈ ಮಾತನಾಡಿ, ‘ದೇಶಕ್ಕೆ ಗೌರವ ತಂದುಕೊಟ್ಟವರನ್ನು ಸ್ಮರಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತದೆ’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಹಿರಿಯ ಕ್ರೀಡಾಪಟು ಸುನಿಲ್ ಕುಮಾರ್ ಶೆಟ್ಟಿ, ಮುಖಂಡರಾದ ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ವಲೇರಿಯನ್, ಲಾರೆನ್ಸ್, ಸಂತೋಷ್ ಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.