ಮಂಗಳವಾರ, ಮಾರ್ಚ್ 21, 2023
27 °C
ಭಾದ್ರಪದ ತದಿಗೆಯಿಂದ ಪಂಚಮಿವರೆಗಿನ ಮೂರು ದಿನಗಳ ಹಬ್ಬ

ದಕ್ಷಿಣ ಕನ್ನಡ ಮತ್ತು ಉಡುಪಿ: ಎಲ್ಲೆಲ್ಲೂ ಶರಣು ಸಿದ್ಧಿವಿನಾಯಕನ ಸ್ತುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಭಾದ್ರಪದ ತದಿಗೆಯಿಂದ ಪಂಚಮಿವರೆಗಿನ ಮೂರು ದಿನಗಳ ಅಮ್ಮ– ಮಗನ ಹಬ್ಬಕ್ಕೆ ಜಿಲ್ಲೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿನಾಯಕನ ದೇವಸ್ಥಾನಗಳಿಗೆ ಇಂದು ಚೌತಿ ಹಬ್ಬದ ದಿನ ಸಹಸ್ರಾರು ಭಕ್ತರು ಭೇಟಿ ನೀಡಿ, ಹಣ್ಣು–ಕಾಯಿ, ಪಂಚಾಮೃತ ಸೇವೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.

ಶರವು ಗಣಪತಿ

ಶತಮಾನಗಳ ಇತಿಹಾಸ ಇರುವ ಮಂಗಳೂರು ನಗರ ಹಂಪನಕಟ್ಟೆ ಸಮೀಪದ ಶರವು ಗಣಪತಿ ದೇವಾಲಯವು ಭಕ್ತರ ಆರಾಧ್ಯ ಕೇಂದ್ರ. ಈ ದೇವಾಲಯವನ್ನು ತುಳುನಾಡಿನ ರಾಜ ವೀರಬಾಹು ಕಟ್ಟಿಸಿದ್ದು, ಇಲ್ಲಿರುವ ಗಣೇಶ ಸ್ವಯಂ ಉದ್ಭವವಾಗಿದೆ ಎಂದು ಹೇಳಲಾಗುತ್ತದೆ. ಗಣೇಶ ಚತುರ್ಥಿ ಅಂಗವಾಗಿ ಬುಧವರ ಗಣಹೋಮದ ಪೂರ್ಣಾಹುತಿ, 5,000 ತೆಂಗಿನಕಾಯಿಯ ಪಲ್ಲಪೂಜೆ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ರಥೋತ್ಸವ ನಡೆಯಲಿದೆ.

ಸೌತಡ್ಕ ಮಹಾಗಣಪತಿ ದೇವಸ್ಥಾನ

ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ ಸೌತಡ್ಕ ಮಹಾಗಣಪತಿ ದೇವಸ್ಥಾನ. ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿನ ಗಣಪನಿಗೆ ಗರ್ಭಗುಡಿ ಇಲ್ಲ. ಭಕ್ತರು ಹರಕೆ ರೂಪದಲ್ಲಿ ಗಂಟೆಗಳನ್ನು ನೀಡುವುದು ಇಲ್ಲಿನ ವಿಶೇಷತೆ.

ಮಧೂರು ದೇವಸ್ಥಾನ

ನೆರೆಯ ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ ಗಣಪತಿ ಪ್ರಸಿದ್ಧ ತಾಣ. ಮಳೆಗಾಲದಲ್ಲಿ ನದಿ ನೀರು ದೇವಾಲಯದ ಆವರಣವನ್ನು ಪ್ರವೇಶಿಸುತ್ತದೆ. ಧರ್ಮಗುಪ್ತನೆಂಬ ದೊರೆ ಕೈಗೊಂಡಿದ್ದ ಅತಿರುದ್ರ ಮಹಾಯಾಗಕ್ಕೆ ಯಾವುದೇ ವಿಘ್ನ ಬಾರಬಾರದೆಂದು ಈ ಗಣೇಶನ ದೇವಾಲಯದಲ್ಲಿ ಮದನಂತೇಶ್ವರ ಲಿಂಗವನ್ನೂ ಪ್ರತಿಷ್ಠಾಪಿಸಿದ್ದ ಎನ್ನುವ ಕಥೆಯಿದೆ. ಹಾಗಾಗಿ ಈ ದೇವಾಲಯವನ್ನು ಮದನಂತೇಶ್ವರ ಸಿದ್ಧಿ ವಿನಾಯಕ ದೇವಾಲಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದೇವಾಲಯವನ್ನು ಗಜಪೃಷ್ಠ ಆಕಾರದಲ್ಲಿ ನಿರ್ಮಾಣ ಮಾಡಲಾಗಿದೆ.

ಹಟ್ಟಿಯಂಗಡಿ ದೇವಸ್ಥಾನ

ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನಲ್ಲಿರುವ ಹಟ್ಟಿಯಂಗಡಿ ಶ್ರೀಸಿದ್ಧಿ ವಿನಾಯಕ ದೇವಸ್ಥಾನ ಜಿಲ್ಲೆಯ ಪ್ರಾಚೀನವಾದ ದೇವಸ್ಥಾನಗಳಲ್ಲಿ ಒಂದು. ದೇವಸ್ಥಾನದ ಪ್ರಾಂಗಣದಲ್ಲಿ 32 ಗಣೇಶ ವಿಗ್ರಹಗಳನ್ನು ಸುಂದರವಾಗಿ ಕೆತ್ತಲಾಗಿದ್ದು, ಭಕ್ತರ ಕಣ್ಮನ ಸೆಳೆಯುವಂತಿವೆ. ಎರಡೂವರೆ ಅಡಿಯ ಸಾಲಿಗ್ರಾಮ ಬಾಲ ಗಣೇಶನ ಮೂರ್ತಿ ಪ್ರಮುಖ ಆಕರ್ಷಣೆ. ಉಡುಪಿಯಿಂದ 45 ಕಿ.ಮೀ ದೂರದಲ್ಲಿರುವ ಹಟ್ಟಿಯಂಗಡಿ ವಿನಾಯಕ ದೇವಸ್ಥಾನ ಕುಂದಾಪುರದಿಂದ 8 ಕಿ.ಮೀ ದೂರವಿದೆ. ಪ್ರತಿದಿನ ದೇವರಿಗೆ ತ್ರಿಕಾಲ ಪೂಜೆಗಳು ನಡೆಯುತ್ತವೆ. ಅಲೂಪ ರಾಜರ ಕಾಲದಲ್ಲಿ ದೇವಾಲಯ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಹಟ್ಟಿಯಂಗಡಿ ದೇವಾಲಯ ವರಾಹಿ ನದಿ ದಡದ ಬಳಿ ಇದೆ.

ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಿಂದ 9 ಕಿ.ಮೀ ದೂರದಲ್ಲಿ ಆನೆಗುಡ್ಡೆ ಗ್ರಾಮದಲ್ಲಿ ವಿನಾಯಕ ದೇವಸ್ಥಾನ ಇದೆ. ಕುಂಭಾಶಿ ದೇವಸ್ಥಾನ ಎಂದೂ ಪ್ರಸಿದ್ಧಿ ಪಡೆದಿದೆ. ರಾಕ್ಷಸ ಕುಂಭಾಸುರನ ಸಂಹಾರವಾದ ಜಾಗ ಎಂಬ ಉಲ್ಲೇಖವೂ ಇದೆ. ಕರ್ನಾಟಕದ ಏಳು ಮುಕ್ತಿ ಸ್ಥಳಗಳಲ್ಲಿ ಆನೆಗುಡ್ಡೆ ದೇವಸ್ಥಾನವೂ ಒಂದಾಗಿದೆ. ಗಣೇಶ ಚತುರ್ಥಿಯಂದು ವಿಜೃಂಭಣೆಯಿಂದ ಉತ್ಸವ ನಡೆಯುತ್ತದೆ. ಡಿಸೆಂಬರ್‌ ಮೊದಲ ವಾರದಲ್ಲಿ ರಥೋತ್ಸವ ನಡೆಯುತ್ತದೆ. ವಿಗ್ರಹವನ್ನು ಕಲ್ಲಿನಿಂದ ಕೆತ್ತನೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು