ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಅಪ್ಪಂದಿರ ದಿನ: ‘ಮನೆತುಂಬ ಅಪ್ಪನ ಸುಗಂಧ...’

Last Updated 20 ಜೂನ್ 2021, 5:26 IST
ಅಕ್ಷರ ಗಾತ್ರ

ಮಂಗಳೂರು: ‘ಅಪ್ಪನ ಅಪರೂಪದ ಚಿತ್ರಗಳು, ಅಪ್ಪ–ಅಮ್ಮ ಜೊತೆಗಿರುವ ಚಂದದ ಪಟಗಳನ್ನೆಲ್ಲ ಸೇರಿಸಿ ಒಂದು ಆಲ್ಬಂ ಮಾಡಿ ಅಚ್ಚರಿಯ ಗಿಫ್ಟ್ ಕೊಟ್ಟಾಗ, ಅಪ್ಪನ ಮೊಗದಲ್ಲಿ ಬೀರಿದ ಸಂತುಷ್ಟ ಭಾವ ಕಣ್ಣಮುಂದಿದೆ. ಜೊತೆಗೊಂದು ಪರ್ಫ್ಯೂಮ್‌ ಅನ್ನು ಇಟ್ಟಿದ್ದೆವು. ಇವೆಲ್ಲ ಈ ವರ್ಷ ನೆನಪಷ್ಟೇ’ ಎನ್ನುತ್ತ ಹಿಂದಿನ ವರ್ಷದ ‘ಅಪ್ಪಂದಿರ ದಿನ’ ಸಂಭ್ರಮವನ್ನು ಮೆಲುಕು ಹಾಕುವಾಗ ರಕ್ಷಿತಾಳಿಗೆ ಗಂಟಲು ತುಂಬಿ ಬಂತು.

ಆಕೆಯನ್ನು ಕದಲಿಸಿದ ಮೇಲೆ ಮತ್ತೆ ಮಾತು ಮುಂದುವರಿಸಿದರು. ‘ಅಪ್ಪ ಆಲ್ಬಂ ಒಳಗೆ ಬಂಧಿಯಾಗಬಹುದೆಂಬ ಕಲ್ಪನೆ ಯಾವತ್ತೂ ಮೂಡಿರಲಿಲ್ಲ. ಈಗ ಅಪ್ಪನನ್ನು ಕಾಣಬೇಕೆಂದರೆ ಆಲ್ಬಂ ನೋಡಬೇಕು. ಅಪ್ಪನಿಗೆ ಕೊಟ್ಟಿದ್ದ ಪರ್ಫ್ಯೂಮ್‌ ಬಾಟಲಿಯಲ್ಲಿದೆ. ಅಪ್ಪನ ಸುಗಂಧ ಮನೆತುಂಬ ಆವರಿಸಿದೆ. ಅಮ್ಮ ಮೌನಕ್ಕೆ ಜಾರಿದ್ದಾರೆ. ತಂಗಿ ದಿನವಿಡೀ ಮಂಕಾಗಿ ಕೂತಿರುತ್ತಾಳೆ. ತಮ್ಮ ಮಾತ್ರ ಅಪ್ಪ ಯಾವಾಗ ಬರುತ್ತಾರೆ ಎಂದು ಪ್ರಶ್ನಿಸುತ್ತಾನೆ’ ಎನ್ನುವಾಗ ಹಿರಿಯ ಮಗಳಾಗಿರುವ ರಕ್ಷಿತಾಳ ಮಾತಿನಲ್ಲಿ ಉತ್ತರ ಕಾಣದ ತೊಳಲಾಟಗಳಿದ್ದವು.

ಪ್ರವಾಸೋದ್ಯಮ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ,
ಬನವಾಸಿ ಸೋಮಶೇಖರ ಅವರು ಕೊರೊನಾ ಸೋಂಕಿಗೆ ಒಳಗಾಗಿ, ಚಿಕಿತ್ಸೆಗೆ ಸ್ಪಂದಿಸದೆ, ಮೃತಪಟ್ಟು ಎರಡು ವಾರಗಳು ಕಳೆದಿವೆ. ಅಪ್ಪನನ್ನು ಕಳೆದುಕೊಂಡ ನೋವಿನಲ್ಲೇ ಅಮ್ಮ, ತಂಗಿಗೆ ಸಾಂತ್ವನ ಹೇಳುತ್ತ ರಕ್ಷಿತಾ, ಜುಲೈ ಮೂರನೇ ವಾರ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಣಿಯಾಗುತ್ತಿದ್ದಾರೆ.

‘ಅಪ್ಪ ಆಫೀಸ್‌ ಕೆಲಸ ಮುಗಿಸಿ ಮನೆಗೆ ಬರುವಾಗ ರಾತ್ರಿ 8.30 ದಾಟುತ್ತಿತ್ತು. ಮನೆಗೆ ಬಂದವರೇ ನಮ್ಮ ಜೊತೆ ಅರ್ಧಗಂಟೆ ಕಳೆದು ಊಟಕ್ಕೆ ಹೊರಡುತ್ತಿದ್ದರು. ದಿನವೂ ಬೆಳಗಿನ ತಿಂಡಿಗೆ ಕೈತುತ್ತು ನೀಡದಿದ್ದರೆ ಅಪ್ಪನಿಗೆ ಸಮಾಧಾನವಿಲ್ಲ. ಮೂವರು ಮಕ್ಕಳಿಗೂ ತಾವೇ ತಿಂಡಿ ತಿನ್ನಿಸಿ, ಆಫೀಸಿಗೆ ಹೊರಡುತ್ತಿದ್ದರು.ಅಪ್ಪನಿಗೆ ಆಫೀಸಿಗೆ ರಜೆ ಇದ್ದಾಗ, ಅಮ್ಮನಿಗೆ ಮನೆಯಲ್ಲಿ ರಜೆ. ಅಡುಗೆಮನೆ ಉಸ್ತುವಾರಿ ಆ ದಿನ ಅಪ್ಪನದು. ಪ್ರೀತಿಯಿಂದ ಅಡುಗೆ ಮಾಡುತ್ತಿದ್ದರು’ ಎಂದು ನಿರ್ಲಿಪ್ತರಾದರು.

‘ಪರಿಶಿಷ್ಟ ಜಾತಿ ಮಕ್ಕಳಲ್ಲಿ ಶಿಕ್ಷಣದ ಅರಿವು ಮೂಡಿಸಬೇಕು. ಅವರನ್ನು ಮೇಲೆತ್ತಬೇಕು ಎಂಬುದು ಅಪ್ಪನ ಮಹದಾಸೆಯಾಗಿತ್ತು’ ಎಂಬುದನ್ನು ರಕ್ಷಿತಾ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT