ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡದಲ್ಲಿ ಆತಂಕ ಸೃಷ್ಟಿಸಿದ ಗಡಿ ಜಿಲ್ಲೆ ಕಾಸರಗೋಡು

ಕೋವಿಡ್‌–19: ಕಾಸರಗೋಡಿನಲ್ಲಿ ಒಂದೇ ದಿನ 19 ಪ್ರಕರಣ ಪತ್ತೆ
Last Updated 23 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಮಂಗಳೂರು: ನೆರೆಯ ಕಾಸರಗೋಡಿನಲ್ಲಿ ಕೋವಿಡ್‌–19 ಸೋಂಕು ತಗುಲಿರುವ 19 ಹೊಸ ಪ್ರಕರಣಗಳು ಸೋಮವಾರ ಒಂದೇ ದಿನ ದೃಢಪಟ್ಟಿವೆ. ಗಡಿ ಜಿಲ್ಲೆಯಲ್ಲಿ ಕೋವಿಡ್‌–19 ರೋಗಿಗಳ ಸಂಖ್ಯೆ 40ಕ್ಕೇರಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೀತಿ ಸೃಷ್ಟಿಸಿದೆ.

ಫೆಬ್ರುವರಿ ಮೊದಲ ವಾರ ಚೀನಾದ ವುಹಾನ್‌ನಿಂದ ಹಿಂದಿರುಗಿದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಕೋವಿಡ್‌–19 ಸೋಂಕು ಪತ್ತೆಯಾಗಿತ್ತು. ಇದು ಕಾಸರಗೋಡು ಜಿಲ್ಲೆಯ ಮೊದಲ ಪ್ರಕರಣ. ಆ ಬಳಿಕ ಸೋಂಕು ತಗುಲಿದವರ ಸಂಖ್ಯೆ ಏರುಗತಿಯಲ್ಲೇ ಸಾಗಿದೆ.

ಭಾನುವಾರ ಕಾಸರಗೋಡಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 21 ಇತ್ತು. 19 ಮಂದಿಯಲ್ಲಿ ಸೋಂಕು ತಗುಲಿರುವುದು ಸೋಮವಾರ ಖಚಿತವಾಗಿದೆ. ಒಂದೇ ಜಿಲ್ಲೆಯಲ್ಲಿ ಒಟ್ಟು 40 ಮಂದಿಗೆ ಸೋಂಕು ತಗುಲಿದ್ದು, ಗುಣಮುಖರಾದ ಒಬ್ಬ ರೋಗಿಯನ್ನು ಮಾತ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಮುಚ್ಚಿದರೂ ಭೀತಿ

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳು ಪರಸ್ಪರ ಗಡಿ ಹಂಚಿಕೊಂಡಿವೆ. ಉಭಯ ಜಿಲ್ಲೆಗಳನ್ನು ಸಂಪರ್ಕಿಸುವ 30ಕ್ಕೂ ಹೆಚ್ಚು ಮಾರ್ಗಗಳಿವೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಮತ್ತು ಸಣ್ಣ ರಸ್ತೆಗಳ ಮೂಲಕವೂ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರವೇಶಿಸಲು ಸಾಧ್ಯವಿದೆ. ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಬಹುತೇಕ ಎಲ್ಲ ರಸ್ತೆ ಮಾರ್ಗಗಳನ್ನೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಬಂದ್‌ ಮಾಡಿದೆ.

ಶನಿವಾರದಿಂದ ಗಡಿಗಳನ್ನು ಮುಚ್ಚಲಾಗಿದೆ. ಆದರೆ, ಮುಖ್ಯ ಹೆದ್ದಾರಿಗಳು ಮುಚ್ಚಿದ್ದರಿಂದ ಸಣ್ಣ ರಸ್ತೆಗಳ ಮೂಲಕ ಕೇರಳದಿಂದ ಮಂಗಳೂರಿನತ್ತ ಬರಲು ಜನರು ಯತ್ನಿಸಿದ್ದರು. ಆ ಮಾರ್ಗಗಳನ್ನೂ ಮುಚ್ಚಿದ ಜಿಲ್ಲಾಡಳಿತ, ಪೊಲೀಸ್‌ ಪಹರೆಯನ್ನೂ ಹಾಕಿದೆ.

ಆದರೆ, ಎಲ್ಲ ಮಾರ್ಗಗಳನ್ನೂ ಸಂಪೂರ್ಣವಾಗಿ ಬಂದ್‌ ಮಾಡುವುದು ಕಷ್ಟದ ಕೆಲಸ. ಇದರಿಂದಾಗಿ ಕೇರಳದಿಂದ ಜನರು ಪ್ರವೇಶಿಸಿದರೆ ಸೋಂಕು ಹರಡಬಹುದು ಎಂಬ ಆತಂಕ ಗಡಿ ಭಾಗದಲ್ಲಿದೆ. ಕೇರಳದಿಂದ ಯಾವುದೇ ವಾಹನಗಳು ಪ್ರವೇಶಿಸದಂತೆ ತೀವ್ರ ನಿಗಾ ಇರಿಸುವಂತೆ ಪೊಲೀಸರಿಗೆ ಜಿಲ್ಲಾಡಳಿತದಿಂದ ನಿರ್ದೇಶನ ನೀಡಲಾಗಿದೆ.

ವಾಹನಗಳ ಪ್ರವೇಶಕ್ಕೆ ನಿರ್ಬಂಧ

ರಾಜ್ಯದ ಒಳಗಿನಿಂದ ಜಿಲ್ಲೆ ಪ್ರವೇಶಿಸುವುದಕ್ಕೂ ನಿರ್ಬಂಧ ಹೇರಲಾಗಿದೆ. ಹೆಜಮಾಡಿ ಟೋಲ್‌ ಗೇಟ್‌, ಬಿ.ಸಿ.ರೋಡ್‌, ಸಂಪಾಜೆ ಹೆದ್ದಾರಿ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸ್‌ ತನಿಖಾ ಠಾಣೆಗಳನ್ನು ತೆರೆಯಲಾಗಿದೆ. ತುರ್ತು ಉದ್ದೇಶಕ್ಕೆ ಜಿಲ್ಲೆಯೊಳಕ್ಕೆ ಬರುವ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಅನಗತ್ಯವಾಗಿ ಜಿಲ್ಲೆಗೆ ಬರಲು ಯತ್ನಿಸುವವರನ್ನು ಅಲ್ಲಿಯೇ ತಡೆದು, ವಾಪಸ್‌ ಕಳುಹಿಸಲಾಗುತ್ತಿದೆ.

ಜಿಲ್ಲೆಯ ಒಳಕ್ಕೆ ಬರುವವರನ್ನು ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅವರ ವಿವರಗಳನ್ನೂ ಆರೋಗ್ಯ ಇಲಾಖೆಯ ಸಿಬ್ಬಂದಿ ದಾಖಲಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT