ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಐಪಿಎಸ್‌ ಅಧಿಕಾರಿ ಆಗಬೇಕೆಂಬ ಆಸೆಯಿತ್ತು; ನಟಿ ರಚಿತಾ ರಾಮ್

‘ಪಬ್ಬಾಸ್‌’ನಲ್ಲಿ ಐಸ್‌ಕ್ರೀಮ್ ಸವಿದ ನಟಿ
Last Updated 24 ಡಿಸೆಂಬರ್ 2021, 15:53 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರಿಗೆ ಬಂದಿದ್ದ ಚಿತ್ರನಟಿ ರಚಿತಾ ರಾಮ್ ‘ಪಬ್ಬಾಸ್‌’ಗೆ ಹೋಗಿ ಇಲ್ಲಿನ ಐಸ್‌ಕ್ರೀಮ್ ಸವಿ ಸವಿದರು. ನಗರದ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ಅಲ್ಲಿ ಪೊಲೀಸರೊಂದಿಗೆ ತುಸು ಹೊತ್ತು ಕಳೆದರು. ಪೊಲೀಸರು ರಚಿತಾ ಜತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದರು.

ಪೊಲೀಸ್ ಕಮಿಷನರ್‌ ಶಶಿಕುಮಾರ್ ಅವರು ರಚಿತಾ ಅವರನ್ನು ಅಭಿನಂದಿಸಿ, ‘ಪೊಲೀಸರು ನಿಮ್ಮ ಫ್ಯಾನ್‌’ ಅಂದಾಗ, ರಚಿತಾ ಅವರು ಸಂಭ್ರಮಿಸಿದರು. ‘ಚಿಕ್ಕವಳಿರುವಾಗ ಏನು ಆಗ್ತೀಯಾ ಅಂತ ಕೇಳಿದರೆ ಐಪಿಎಸ್ ಆಫೀಸರ್ ಆಗಬೇಕು ಎನ್ನುತ್ತಿದ್ದೆ. ಕಾನೂನು ಓದಬೇಕು ಅಂತನೂ ಇತ್ತು. ಈಗಲೂ ಸರ್ಕಾರಿ ಕಾರುಗಳನ್ನು ನೋಡಿದಾಗ ನಾನೂ ಅಧಿಕಾರಿಯಾಗಿ ಆ ಕಾರಿನಲ್ಲಿ ಹೋಗಬೇಕು ಅಂತ ಅಪ್ಪನ ಬಳಿ ಹೇಳುತ್ತಿರುತ್ತೇನೆ’ ಎಂದು ರಚಿತಾ ತಮ್ಮ ಆಸೆ ಹೊರಗಿಕ್ಕಿದರು.

‘ನಾನು ಲಾಯರ್, ಡಾಕ್ಟರ್ ಎಲ್ಲ ಪಾತ್ರಗಳನ್ನು ಮಾಡಿದ್ದೇನೆ. ಆದರೆ, ಒಳ್ಳೆಯ ಪೊಲೀಸ್ ಅಧಿಕಾರಿ ಪಾತ್ರ ಮಾಡುವ ಆಸೆಯಿದೆ. ಅದಕ್ಕಾಗಿ ಕಾಯ್ತಿದ್ದೇನೆ’ ಎಂದಾಗ, ಅಲ್ಲೇ ಇದ್ದವರು, ‘ರಚಿತಾರಾಮ್ ಐಪಿಎಸ್ ಅಂತ ಸಿನಿಮಾ ಮಾಡಿ’ ಎಂದರು. ಗಡಿ ಕಾಯುವ ಸೈನಿಕರನ್ನು ಸ್ಮರಿಸಿದ ಅವರು, ಕೋವಿಡ್ ವೇಳೆ ಪೊಲೀಸರು ಮಾಡಿದ ಕಾರ್ಯವನ್ನು ಶ್ಲಾಘಿಸಿದರು.

ಆಮಂತ್ರಣ ಬಿಡುಗಡೆ: ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಡಿ.28ರಂದು ನಡೆಯಲಿರುವ ಪತ್ರಕರ್ತರ ಜಿಲ್ಲಾ ಸಮ್ಮೇಳನ ಹಾಗೂ ಸಾಧನ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಚಿತ್ರ ನಟಿ ರಚಿತಾರಾಮ್ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಿಡುಗಡೆಗೊಳಿಸಿ, ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ದಿನೇಶ್, ಅನಘ ರಿಫೈನರೀಸ್ ಆಡಳಿತ ನಿರ್ದೇಶಕ ಸಾಂಬಶಿವ ರಾವ್, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ್ ರೈ ಕಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT