ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2024 | ಮೀನುಗಾರಿಕೆ, ಬಂದರಿಗೆ ಭರಪೂರ ಕೊಡುಗೆ

ಜಲ ಬವಣೆ ನಿವಾರಣೆಗೆ ಸಿಕ್ಕಿಲ್ಲ ಮನ್ನಣೆ, ಅಪೂರ್ಣ ಸಂಕೀರ್ಣಕ್ಕೆ ದೊರೆಯದ ಅನುದಾನ
Published 17 ಫೆಬ್ರುವರಿ 2024, 6:57 IST
Last Updated 17 ಫೆಬ್ರುವರಿ 2024, 6:57 IST
ಅಕ್ಷರ ಗಾತ್ರ

ಮಂಗಳೂರು: ಕಡಲ ಮಕ್ಕಳು, ಕಡಲ ತೀರ ಮತ್ತು ಬಂದರುಗಳ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಭರಪೂರ ಕೊಡುಗೆ ದೊರೆತಿದೆ.

ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಕರಾವಳಿಯ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು ₹1,500ದಿಂದ ₹3,000ಕ್ಕೆ ಹೆಚ್ಚಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.

ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಥಮ ಬಾರಿಗೆ ₹7 ಕೋಟಿ ವೆಚ್ಚದಲ್ಲಿ ಸಮುದ್ರ ಆಂಬುಲೆನ್ಸ್ ಖರೀದಿ, 2024-25ನೇ ಸಾಲಿನಲ್ಲಿ 10ಸಾವಿರ ವಸತಿರಹಿತ ಮೀನುಗಾರರಿಗೆ ವಿವಿಧ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಲು ಸಹಾಯಧನ, ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಿನ ವರ್ಷಗಳಲ್ಲಿ ₹3,000 ಕೋಟಿ ವೆಚ್ಚದ ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿದೆ.

ಹಳೆ ಮಂಗಳೂರು ಬಂದರು, ಕಾರವಾರ, ಮಲ್ಪೆ ಬಂದರುಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ನಾಲ್ಕು ಬರ್ತ್‌ಗಳ ಅಭಿವೃದ್ಧಿ, ಹಳೆ ಮಂಗಳೂರು ಬಂದರಿನಲ್ಲಿ ಹಂತ ಹಂತವಾಗಿ ಹೂಳೆತ್ತುವ ಕಾಮಗಾರಿ ಅನುಷ್ಠಾನ, 2024–25ನೇ ಸಾಲಿನಲ್ಲಿ 350 ಮೀಟರ್ ಉದ್ದದ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಯೋಜನೆ, ಹಳೆ ಮಂಗಳೂರು ಮತ್ತು ಹಂಗಾರಕಟ್ಟೆ ಬಂದರುಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಿರುವ ಆಧುನಿಕ ಹಡಗು ನಿರ್ಮಾಣ ಚಟುವಟಿಕೆ ವಲಯದಲ್ಲಿ ಇನ್ನೂ ಹೆಚ್ಚು ಹೂಡಿಕೆ ಆಕರ್ಷಿಸಲು ಆದ್ಯತೆ ಪ್ರಸ್ತಾಪವು ಮೀನುಗಾರರಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. 

ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಡಿ ಕಾರ್ಯಸಾಧ್ಯತಾ ವರದಿ ತಯಾರಿಕೆಗೆ ಕರ್ನಾಟಕ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಫಂಡ್ ಅನ್ನು (ಕೆಐಪಿಡಿಎಫ್) ಸ್ಥಾಪಿಸಲಾಗಿದೆ. ಇದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರು ಅಭಿವೃದ್ಧಿಗೆ ಐಐಟಿ ಮದ್ರಾಸ್ ಸಹಯೋಗದಲ್ಲಿ ಕಾರ್ಯ ಸಾಧ್ಯತಾ ವರದಿ ತಯಾರಿ, ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೊ ಸೇವೆ ಪರಿಚಯಿಸುವ ಕಾರ್ಯಸಾಧ್ಯತಾ ವರದಿ ತಯಾರಿಗೆ ಬಜೆಟ್‌ನಲ್ಲಿ ಭರವಸೆ ದೊರೆತಿದೆ.

ಹಜ್ ಭವನ: ಮಂಗಳೂರಿನಲ್ಲಿ ₹ 10 ಕೋಟಿ ವೆಚ್ಚದಲ್ಲಿ ಹಜ್‌ ಭವನ ನಿರ್ಮಾಣ, ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಲು ಉದ್ಯೋಗಾವಕಾಶ ಸೃಜಿಸುವ ಯೋಜನೆಯಡಿ ಮಂಗಳೂರು ಸೇರಿದಂತೆ ಒಂಬತ್ತು ಕಡೆಗಳಲ್ಲಿ ಇಂಟಿಗ್ರೇಟೆಡ್ ಟೌನ್‌ಷಿಪ್ ಅಭಿವೃದ್ಧಿ, ಕೃಷಿ ಮಾರಾಟ ಇಲಾಖೆಯ ಮೂಲಕ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ  ₹35 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆಯ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಪರಿಶಿಷ್ಟ ಪಂಗಡದ ಕೊರಗ, ಮಲೆಕುಡಿಯ ಸೇರಿದಂತೆ 23 ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಸಮಗ್ರ ಅಭಿವೃದ್ಧಿಗೆ ಉಪ ಕ್ರಮ, ಏಕಲವ್ಯ ಮಾದರಿಯಲ್ಲಿ ಪ್ರತಿ ವಸತಿ ಶಾಲೆಗೆ 20 ಸೀಟು ಮೀಸಲು, ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರ ಪ್ರವೇಶ ಅವಕಾಶದ ಆಶ್ವಾಸನೆ ದೊರೆತಿದೆ.

ಕರಾವಳಿಯ ಪತ್ರಕರ್ತರಾಗಿದ್ದ ‘ವಡ್ಡರ್ಸೆ ರಘರಾಮ ಶೆಟ್ಟಿ’ ಹೆಸರಿನಲ್ಲಿ ಪ್ರತಿ ವರ್ಷ ಸಾಮಾಜಿಕ ನ್ಯಾಯ ಕ್ಷೇತ್ರಕ್ಕೆ ಕೊಡುಗೆ ನೀಡುವ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ವಿಚಾರವೂ ಬಜೆಟ್‌ನಲ್ಲಿ ಉಲ್ಲೇಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT