ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೀಪಕ್ಕೆ 2 ಸಾವಿರ ಟನ್‌ ಅಕ್ಕಿ ಸಾಗಣೆ

ಲಾಕ್‌ಡೌನ್‌ನಲ್ಲೂ ಲಕ್ಷದ್ವೀಪಕ್ಕೆ ನಿರಂತರ ಸಾಮಗ್ರಿ ಪೂರೈಕೆ
Last Updated 15 ಮೇ 2020, 15:55 IST
ಅಕ್ಷರ ಗಾತ್ರ

ಮಂಗಳೂರು: ಅಗತ್ಯ ವಸ್ತುಗಳೂ ಸೇರಿದಂತೆ ಬಹುತೇಕ ಎಲ್ಲ ಸಾಮಗ್ರಿಗಳಿಗೆ ಮಂಗಳೂರು ಮತ್ತು ಕೇರಳದ ಬಂದರನ್ನು ಅವಲಂಬಿಸಿರುವ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಲಾಕ್‌ಡೌನ್‌ ಸಂದರ್ಭದಲ್ಲೂ ಇಲ್ಲಿನ ಹಳೆಯ ಬಂದರಿನ ಮೂಲಕ ನಿರಂತರ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ.

ಸುರಕ್ಷಿತ ಅಂತರ ಸೇರಿದಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ಕನಿಷ್ಠ ಕಾರ್ಮಿಕರನ್ನು ಬಳಸಿಕೊಂಡು ಹಡಗಿನಲ್ಲಿ ಅಕ್ಕಿ, ತರಕಾರಿ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಸಾಮಾನ್ಯವಾಗಿ ಲಕ್ಷದ್ವೀಪ ನಿವಾಸಿಗಳು ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಹಡಗಿನಲ್ಲಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ವಾಪಸಾಗುತ್ತಿದ್ದರು. ಆದರೆ ಲಾಕ್‌ಡೌನ್‌ ಆರಂಭವಾದ ನಂತರ ಹಡಗು ಸಂಚಾರವನ್ನು ಕೂಡ ಸ್ಥಗಿತಗೊಳಿಸಲು ಜಿಲ್ಲಾಡಳಿತ ಸೂಚಿಸಿತ್ತು. ಆದರೆ ನೌಕೆ, ಬಾರ್ಜ್‌ಗಳಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ.

ಲಾಕ್‌ಡೌನ್‌ ಆರಂಭದಲ್ಲಿ ಸಿಮೆಂಟ್‌, ಜಲ್ಲಿಕಲ್ಲು ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನೂ ಕಳುಹಿಸಿಕೊಡಲಾಗಿದೆ. ಕಳೆದ ಕೆಲದಿನಗಳಿಂದ ಕಾರ್ಮಿಕರ ಕೊರತೆಯಿಂದಾಗಿ ಕಟ್ಟಡ ಸಾಮಗ್ರಿ ಸಾಗಿಸುವ 10 ಹಡಗುಗಳು ಲಕ್ಷದ್ವೀಪಕ್ಕೆ ತೆರಳಿರಲಿಲ್ಲ.

ಬೇರೆ ಕೃಷಿ ಇಲ್ಲ: ಲಕ್ಷದ್ವೀಪದಲ್ಲಿ ಕರವತ್ತಿ ಸೇರಿದಂತೆ 36 ದ್ವೀಪ ಸಮೂಹಗಳಿವೆ. ಕೇಂದ್ರಾಡಳಿತಕ್ಕೆ ಸೇರಿದ ಅತ್ಯಂತ ಸಣ್ಣ ಪ್ರದೇಶವಾದ ಇಲ್ಲಿ 6-7 ದ್ವೀಪಗಳು ಮಾತ್ರ ವಾಸಯೋಗ್ಯವಾಗಿವೆ. ಇಲ್ಲಿರುವ ನಿವಾಸಿಗಳು ಜೀವನಕ್ಕಾಗಿ ನೆರೆಯ ಮಂಗಳೂರು ಹಾಗೂ ಕೊಚ್ಚಿಯನ್ನು ಅವಲಂಬಿಸಿದ್ದಾರೆ. ತೆಂಗು ಬಿಟ್ಟರೆ ಬೇರೆ ಯಾವುದೇ ಪ್ರಮುಖ ಕೃಷಿ ದ್ವೀಪದಲ್ಲಿಲ್ಲ. ಮೀನುಗಾರಿಕೆಯೇ ಪ್ರಮುಖ ಉದ್ಯೋಗವಾಗಿದೆ.

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರತಿ ವರ್ಷ ಸುಮಾರು 7 ಸಾವಿರ ಟನ್‌ ಆಹಾರ ಧಾನ್ಯಗಳನ್ನು ಕಳುಹಿಸಲಾಗುತ್ತದೆ. ಇದರ ಜತೆಗೆ ಸಾಂಬಾರು ಪದಾರ್ಥ, ಮೆಣಸು, ಶೃಂಗಾರ ಸಾಧನ, ಮನೆ ಕಟ್ಟುವ ಸಲಕರಣೆಗಳನ್ನು ಕೂಡ ಸಾಗಣೆ ಮಾಡಲಾಗುತ್ತದೆ.

ಶುಕ್ರವಾರ ಕೊನೆ: ಲಕ್ಷದ್ವೀಪಕ್ಕೆ ಎಲ್ಲ ಸರಕುಗಳನ್ನು ಸಾಗಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಮತ್ತೆ ಲಕ್ಷದ್ವೀಪ- ಮಂಗಳೂರಿನ ವ್ಯವಹಾರ ಸೆಪ್ಟೆಂಬರ್‌ 15ರ ನಂತರವೇ ಆರಂಭವಾಗಲಿದೆ. ಮುಂಗಾರು ಮಳೆ, ಸಮುದ್ರದ ಆರ್ಭಟಗಳ ಆತಂಕ ಇರುವುದರಿಂದ ಮೂರು ತಿಂಗಳು ಸರಕು ಸಾಗಣೆ ಹಡಗುಗಳ ಸಂಚಾರ ಸ್ಥಗಿತವಾಗುತ್ತದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಬಂದರು ಕಚೇರಿ ನಿರಂತರವಾಗಿ ಕಾರ್ಯನಿರ್ವಹಿಸಿದ್ದು, ನಿಗದಿತ ಪ್ರಮಾಣದ ಸಾಮಗ್ರಿ ರವಾನೆ ಸಾಧ್ಯವಾಗದಿದ್ದರೂ, ಗರಿಷ್ಠ ಸೇವೆ ಒದಗಿಸಲಾಗಿದೆ. ಆಹಾರ ನಿಗಮದ ಗೋದಾಮಿನಿಂದ 2 ಸಾವಿರ ಟನ್‌ಗಿಂತಲೂ ಅಧಿಕ ಅಕ್ಕಿ ಹಾಗೂ 250 ಟನ್‌ ಸಕ್ಕರೆಯನ್ನು ಲಕ್ಷದ್ವೀಪಕ್ಕೆ ಕಳುಹಿಸಿಕೊಡಲಾಗಿದೆ. 400 ಟನ್‌ನಷ್ಟು ಇತರ ಆಹಾರ ಸಾಮಗ್ರಿಗಳು ರವಾನೆಯಾಗಿವೆ ಎಂದು ಬಂದರು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT