ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಲಿಂಗತ್ವ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ: ಮಂಜಮ್ಮ ಜೋಗತಿ

Published 19 ಅಕ್ಟೋಬರ್ 2023, 13:24 IST
Last Updated 19 ಅಕ್ಟೋಬರ್ 2023, 13:24 IST
ಅಕ್ಷರ ಗಾತ್ರ

ಮಂಗಳೂರು: ‘ನನಗೆ ದೊರೆತ ಸನ್ಮಾನ, ಗೌರವ ನನ್ನ ಸಮುದಾಯಕ್ಕೆ ದೊರೆತಂತೆ’ ಎಂದು ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಹೇಳಿದರು.

ಅವರು ಇಲ್ಲಿನ ವೆಲೆನ್ಸಿಯಾದ ರೋಶನಿ ನಿಲಯ ಸ್ಕೂಲ್‌ ಆಫ್‌ ಸೋಶಿಯಲ್‌ ವರ್ಕ್‌ ಕಾಲೇಜಿನಲ್ಲಿ ಗುರುವಾರ ರೇಶ್ಮಾ ಉಳ್ಳಾಲ್‌ ಅವರ ‘ಬಿಂಬದೊಳಗೊಂದು ಬಿಂಬ’ ಸಂಶೋಧನಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

‘ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆ, ಗ್ರಹಿಕೆಗಳು ದೂರವಾಗಬೇಕಾದರೆ ಇಂತಹ ಕೃತಿಗಳು, ಸಿನಿಮಾಗಳು ಹೆಚ್ಚು ಹೆಚ್ಚು ಮೂಡಿಬರಬೇಕು. ಸಮಾಜ ತಮ್ಮಗೊಳಗೆ ಒಬ್ಬರು ಎಂದು ಸ್ವೀಕರಿಸಬೇಕು. ಸರ್ಕಾರ, ಸಂಘ ಸಂಸ್ಥೆಗಳು, ಕಂಪನಿಗಳು ಲಿಂಗತ್ವ ಅಲ್ಪಸಂಖ್ಯಾತರಿಗೆ ಅವರ ವಿದ್ಯಾರ್ಹತೆ ಪರಿಗಣಿಸಿ ಸೂಕ್ತ ಉದ್ಯೋಗ, ಅವಕಾಶ ನೀಡಬೇಕು. ಅವಿದ್ಯಾವಂತರಿಗೂ ಸೂಕ್ತ ಉದ್ಯೋಗಾವಕಾಶ ಕಲ್ಪಿಸಬೇಕು, ವಯಸ್ಸಾದವರಿಗೆ ಮಾಶಾಸನ ನೀಡಬೇಕು’ ಎಂದು ಆಗ್ರಹಿಸಿದರು.

‘ನಿಮ್ಮೊಳಗೆ ಯಾರಿಗಾದರೂ ತೃತೀಯ ಲಿಂಗಿ ಮಗು ಜನಿಸಿದರೆ ದಯವಿಟ್ಟು ಅವರನ್ನು ಶಿಕ್ಷಿಸಿ ಅವಮಾನಿಸಬೇಡಿ, ಮನೆಯಿಂದ ಹೊರಹಾಕಬೇಡಿ. ಅವರಿಗೆ ಉತ್ತಮ ಶಿಕ್ಷಣ ನೀಡಿ. ಅವರ ಬದುಕನ್ನು ಅವರೇ ರೂಪಿಸಿಕೊಳ್ಳುತ್ತಾರೆ’ ಎಂದು ಭಾವುಕರಾಗಿ ಮನವಿ ಮಾಡಿದರು.

‘ವಿದ್ಯಾರ್ಥಿಗಳು ಬದ್ಧತೆ, ಪರಿಶ್ರಮದಿಂದ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಪತ್ರಿಕೆ, ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದಿನಿಂದ ಜ್ಞಾನ, ಬುದ್ಧಿಶಕ್ತಿ ವೃದ್ಧಿಸುತ್ತದೆ’ ಎಂದು ಕಿವಿಮಾತು ಹೇಳಿದರು.

ಚಲನಚಿತ್ರ ನಿರ್ದೇಶಕ ಬಿ.ಎಸ್‌. ಲಿಂಗದೇವರು ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಅಸ್ತಿತ್ವಕ್ಕಾಗಿ ನಿರಂತರ ಸಂಘರ್ಷ, ಹೋರಾಟ ಮಾಡುತ್ತಲೇ ಇದ್ದಾರೆ. ಈ ಕುರಿತು ಭಾರತೀಯ ಹಿನ್ನೆಲೆ, ದೃಷ್ಟಿಕೋನವನ್ನು ರೇಶ್ಮಾ ಅವರ ಸಂಶೋಧನಾ ಕೃತಿ ಒದಗಿಸುತ್ತದೆ. ಈ ಸಮುದಾಯದ ಸಂಘರ್ಷ ಹೋರಾಟವನ್ನು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಬೇಕಾದ ಅನಿವಾರ್ಯತೆ ಇದ್ದು, ಕೃತಿಯು ಅದಕ್ಕೆ ಪೂರಕ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾತನಾಡಿ, ಮಂಜಮ್ಮ ಜೋಗತಿ ಅವರಂತಹ ವ್ಯಕ್ತಿತ್ವಗಳು ಪದ್ಮಶ್ರೀ ಪಡೆಯುವ ಮೂಲಕ ಲಿಂಗತ್ವ ಅಲ್ಪಸಂಖ್ಯಾತರಿಗೆ ಭರವಸೆ, ನಂಬಿಕೆ ಹುಟ್ಟುಹಾಕಿದ್ದಾರೆ. ತೃತೀಯ ಲಿಂಗಿಗಳ ಬದುಕಿಗೆ ನೆರವಾಗುವ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಿದ್ಧವಾಗಿದೆ ಎಂದರು.

ಉಪ ಪ್ರಾಂಶುಪಾಲೆ ಜೆನಿಸ್‌ ಮೇರಿ ಬಿ., ಬೆಂಗಳೂರಿನ ಪಯಣ ಸಂಸ್ಥೆ ನಿರ್ದೇಶಕಿ ಸವಿತಾ ಮಾತನಾಡಿದರು.  ರೇಶ್ಮಾ ಉಳ್ಳಾಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಶೋರ್‌ ಕುಮಾರ್‌ ರೈ ಶೇಣಿ ನಿರೂಪಿಸಿದರು. ಸುಯೆಜ್‌ ಸಂಸ್ಥೆಯ ಎಚ್‌ಆರ್‌ ಮೆನೇಜರ್‌ ರಾಕೇಶ್‌ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT