ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಶಿಥಿಲಗೊಂಡ ಕಟ್ಟಡಗಳು– ಸರ್ಕಾರಿ ಶಾಲೆಗಳ ಅಳಲು

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
Published 24 ಜೂನ್ 2024, 4:38 IST
Last Updated 24 ಜೂನ್ 2024, 4:38 IST
ಅಕ್ಷರ ಗಾತ್ರ

ಮಂಗಳೂರು: ಎಸ್‌ಎಸ್‌ಎಲ್‌ಸಿ ಫಲಿ ತಾಂಶದಲ್ಲಿ ರಾಜ್ಯಕ್ಕೆ 2ನೇ ಸ್ಥಾನದ ಲ್ಲಿರುವ  ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದ ಗುಣಮಟ್ಟಕ್ಕೆ ಹೆಸರುವಾಸಿ. ಆದರೆ, ಜಿಲ್ಲೆಯ ಗ್ರಾಮೀಣ ಪ್ರದೇಶದ ಕೆಲವು ಹಳೆಯ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿದ್ದು, ಇದರಿಂದ ವಿದ್ಯಾರ್ಥಿ ಗಳು ಸಮಸ್ಯೆ ಎದುರಿಸುವಂತಾಗಿದೆ.

ಗ್ರಾಮೀಣ ಪ್ರದೇಶದ ಕೆಲವು ಶಾಲೆಗಳ ಕಟ್ಟಡಗಳು 50 ವರ್ಷಗಳಿಗೂ ಹಳೆಯವು. ಹೆಚ್ಚಿನವು  ಹೆಂಚಿನ ಶಾಲೆಗಳು. ಕೆಲವು ಶಾಲೆಗಳ ಪಕ್ಕಾಸು ಹಾಗೂ ರೀಪುಗಳು ಗೆದ್ದಲು ಹಿಡಿದು ಶಿಥಿಲಗೊಂಡಿವೆ. ಇನ್ನು ಕೆಲವೆಡೆ ಗೋಡೆಗಳು ಬಿರುಕು ಕಾಣಿಸಿಕೊಂಡಿವೆ. ಕೆಲವೆಡೆ ಕಿಟಿಕಿ ಬಾಗಿಲುಗಳಿಲ್ಲ. ಕೆಲವು ಶಾಲೆಗಳಲ್ಲಿ ಮಳೆಗಾಲದಲ್ಲಿ ಚಾವಣಿ ಸೋರುತ್ತದೆ. ಶೌಚಾಲಯಗಳಿದ್ದರೂ ಅವು ಸುಸ್ಥಿತಿಯಲ್ಲಿ ಎಂಬ ಕೊರಗು ಕೆಲವು ಶಾಲೆಗಳದು. 

ಬಡಗನ್ನೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ

ಬಡಗನ್ನೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ

7 ತರಗತಿಗಳಿಗೆ ಮೂರೇ ಕೊಠಡಿ: ಉಪ್ಪಿನಂಗಡಿ ಗ್ರಾಮದ ಮಠದಲ್ಲಿ (ಪುಳಿತ್ತಡಿ) 1956ರಲ್ಲಿ ಪ್ರಾರಂಭವಾದ ದ.ಕ. ಜಿ. ಪಂ. ಹಿ. ಪ್ರಾ. ಶಾಲೆಯಲ್ಲಿ ಕಚೇರಿ, ಸಭಾಂಗಣ, ತರಗತಿ ಕೋಣೆ ಗಳೆಲ್ಲವೂ ಒಂದೇ ಕಟ್ಟಡದಲ್ಲಿವೆ. ಉಳಿ ದಂತೆ 7 ತರಗತಿ ನಿರ್ವಹಿಸಲು ಇರುವುದು 3 ಕೊಠಡಿ ಗಳು ಮಾತ್ರ. ಹಳೆ ಕಟ್ಟಡದಲ್ಲಿ 1 ತರಗತಿ, ಈಚೆಗೆ ನಿರ್ಮಾಣವಾದ  ಒಂದು ಕೊಠಡಿಯಲ್ಲಿ 1, 2, 3ನೇ ತರಗತಿಗಳನ್ನು ನಡೆಸಲಾಗುತ್ತಿದೆ.  ಇನ್ನೊಂದು ಕೊಠಡಿಯಲ್ಲಿ 4 ಮತ್ತು 5ನೇ ತರಗತಿಗಳನ್ನು ಮತ್ತು 6ನೇ ತರಗತಿಯನ್ನು ಸ್ಮಾರ್ಟ್‌ಕ್ಲಾಸ್ ಕೊಠಡಿಯಲ್ಲಿ ನಡೆಸಲಾಗುತ್ತದೆ. 

ಶಿಕ್ಷಕರ ಕೊರತೆ: ಶಾಲೆಯಲ್ಲಿ ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಮೂವರು ಶಿಕ್ಷಕರು ಇದ್ದಾರೆ.  ಆರೋಗ್ಯ ಸಮಸ್ಯೆ ಇರುವ  ಶಿಕ್ಷಕಿಯೊಬ್ಬರು ದೀರ್ಘ ರಜೆಯಲ್ಲಿದ್ದಾರೆ. ಬೋಧನೆಗೆ ಲಭಿಸು ವುದು  ಇಬ್ಬರು ಮಾತ್ರ.  ಇಲ್ಲಿ 61 ವಿದ್ಯಾರ್ಥಿಗಳು  ಕಲಿಯುತ್ತಿದ್ದಾರೆ.   ಶಾಲೆಯ ಶೌಚಾಲಯವೂ ಹಳತಾಗಿದ್ದು, ಇದು ತೀರಾ ಇಕ್ಕಟ್ಟಾಗಿದೆ. ಬಾಗಿಲು ಇಲ್ಲದ ಕಾರಣ ವಿದ್ಯಾರ್ಥಿನಿಯರು ಬಹಳ ಮುಜುಗರದಿಂದಲೇ ಇದನ್ನು ಬಳಸ ಬೇಕಾಗಿದೆ. ಹುಡುಗರ ಶೌಚಾಲಯವೂ ಇಕ್ಕಟ್ಟಾಗಿದೆ.

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಈ ಶಾಲೆ ಮುಂಭಾಗದಲ್ಲಿ ಮಾತ್ರ ಆವರಣ ಗೋಡೆ ಇದ್ದು, ಉಳಿದ ಮೂರು ಕಡೆ ಯಾವುದೇ ಭದ್ರತೆ ಇಲ್ಲ.  ಒಂದು ಕಡೆ ಗೋಡೆಯೂ ಕುಸಿದಿದೆ. ಕ್ರೀಡಾ ಸಾಮಾಗ್ರಿ ಕೊಠಡಿಯ ಗೋಡೆ ಬಿರುಕು ಬಿಟ್ಟಿದ್ದು ಯಾವುದೇ ಸಮಯದಲ್ಲೂ ಕುಸಿಯಬಹುದಾದ  ಅಪಾಯವಿದೆ.  

ಮಾಡೂರು ಶಾಲೆಯ ಮಾಡೇ ಸರಿ ಇಲ್ಲ: ಮಾಡೂರಿನ ದ.ಕ.ಜಿ.ಪಂ. ಹಿ. ‌ಪ್ರಾ. ಶಾಲೆಯಲ್ಲಿ 1 ರಿಂದ 8 ನೇ ತರಗತಿವರೆಗೆ ಒಟ್ಟು 68 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ 4 ಕೊಠಡಿಗಳಲ್ಲಿ ಎರಡೆರಡು ತರಗತಿಗಳು ನಡೆಯುತ್ತಿವೆ. ಶಿಥಿಲಗೊಂಡಿರುವ ಕಟ್ಟಡದ ಮಾಡು ಸೋರುತ್ತಿದೆ. 45 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಶಾಲೆಯಲ್ಲಿ 8 ತರಗತಿಗಳಿಗೆ  ಮೂವರೇ ಶಿಕ್ಷಕಿಯರು,  ಒಬ್ಬರು ಅತಿಥಿ ಶಿಕ್ಷಕಿ  ಇದ್ದಾರೆ. 2 ಮೂತ್ರಾಲಯಗಳಿವೆಯಾದರೂ ಅವುಗಳಿಗೆ ಬಾಗಿಲುಗಳೇ ಇಲ್ಲ.

‘ಜಿಲ್ಲೆಯಲ್ಲಿ ದುರಸ್ತಿ ಅಗತ್ಯ ಇರುವ 170 ಶಾಲೆಗಳ ಪಟ್ಟಿ ತಯಾರಿಸ ಲಾಗಿದೆ. ಕಟ್ಟಡಗಳ  ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ.  ಇದಕ್ಕೆ ಅಂದಾಜು ₹ 5.37 ಕೋಟಿ ಅನುದಾನದ ಅಗತ್ಯವಿದೆ’ ಎನ್ನುತ್ತಾರೆ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ ಪಟಗಾರ್‌.

ಬಾವದಬೈಲು ಶಾಲೆ ಸ್ಥಗಿತ
ಮೂಡುಬಿದಿರೆ ತಾಲ್ಲೂಕಿನ ಪುಚ್ಚೆಮೊಗರು ಗ್ರಾಮದ ಬಾವದಬೈಲು ಗ್ರಾಮೀಣ ಪ್ರದೇಶದಲ್ಲಿರುವ ನಿತ್ಯಾನಂದ ಅನುದಾನಿತ ಹಿ.ಪ್ರಾ.ಶಾಲೆಯ ಏಕೈಕ ಶಿಕ್ಷಕಿ ಅನುಪಮಾ ಜುಲೈನಲ್ಲಿ ನಿವೃತ್ತಿಯಾಗಲಿದ್ದಾರೆ.  ಸರ್ಕಾರ ಹೊಸ ಶಿಕ್ಷಕರನ್ನು ನೇಮಿಸದ ಕಾರಣ  ಈ ಶಾಲೆಯ  21 ವಿದ್ಯಾರ್ಥಿಗಳು ಬೇರೆಡೆ ದಾಖಲಾಗಿದ್ದಾರೆ. ಈ ಶಾಲೆಯ ಕಟ್ಟಡವೂ ಶಿಥಿಲವಾಗಿದ್ದು, ಚಾವಣಿಗೆ ಪ್ಲಾಸ್ಟಿಕ್‌ ಹೊದಿಸಲಾಗಿದೆ. 75 ವರ್ಷಗಳ ಹಿಂದೆ ತ್ಯಾಂಪಣ್ಣ ಶೆಟ್ಟಿ  ನೇತೃತ್ವದಲ್ಲಿ ಈ ಶಾಲೆಯನ್ನು ಆರಂಭಿಸಲಾಗಿತ್ತು. 

ಶತಮಾನದ ಸಂಭ್ರಮ ಕಸಿದ ಹಳೆಯ ಕಟ್ಟಡ

ಪುತ್ತೂರು ತಾಲ್ಲೂಕಿನ  ಶೇಖಮಲೆಯ  ಅರಿಯಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಡಗನ್ನೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಗಳು ಶತಮಾನೋತ್ಸವದ ಹೊಸ್ತಿಲಲ್ಲಿವೆ. ಆದರೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಶತಮಾನೋತ್ಸವದ ಸಂಭ್ರಮವನ್ನು ಕಸಿದುಕೊಂಡಿದೆ.

ಮುಂದಿನ ವರ್ಷ 100 ವರ್ಷ ಪೂರೈಸಲಿರುವ ಅರಿಯಡ್ಕ  ಶಾಲೆಯ ಒಂದು ಕಟ್ಟಡ ಬಳಕೆಗೆ ಯೋಗ್ಯವಾಗಿಲ್ಲ. 5 ಕೊಠಡಿಗಳಿರುವ ಹಳೆಯ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು,  ಈ ಕಟ್ಟಡದಲ್ಲಿ ತರಗತಿ ನಡೆಯುತ್ತಿಲ್ಲ.  ಬೇಸಿಗೆಯಲ್ಲಿ ರಂಗಮಂದಿರದಲ್ಲಿ ಒಂದು ತರಗತಿ ನಡೆಸಲಾಗುತ್ತಿತ್ತು. ಮಳೆಗಾಲದಲ್ಲಿ ಅದೂ ಕಷ್ಟ.

ಕಳೆದ ವರ್ಷ ಹಳೆಯ ಕಟ್ಟಡದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಾಗ ಸುಮಾರು ₹ 2 ಲಕ್ಷ ವೆಚ್ಚದಲ್ಲಿ ತುರ್ತು ದುರಸ್ತಿ ಮಾಡಲಾಗಿದೆ. ಬಳಿಕ ₹ 10.20 ಲಕ್ಷವನ್ನು ದುರಸ್ತಿಗಾಗಿ ಮಂಜೂರು ಮಾಡುವ ಸುತ್ತೋಲೆ ಬಂದಿತ್ತು. ಆದರೆ,  ಎಸ್‌ಡಿಎಂಸಿಯವರು ದುರಸ್ತಿ ಬದಲು ಹೊಸ ಕಟ್ಟಡಕ್ಕೆ ಬೇಡಿಕೆ ಇಟ್ಟಿದ್ದಾರೆ.

‘ನಮ್ಮ ಶಾಲೆಗೆ 2.83 ಎಕರೆ ಜಾಗವಿದೆ.  ಹಳೆಯ ಕಟ್ಟಡ ದುರಸ್ತಿಗೊಳಿಸುವ ಬದಲು ಹೊಸ ಕಟ್ಟಡ ಮಂಜೂರು ಮಾಡುವಂತೆ  ಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ಹನೀಫ್ ಹೇಳಿದರು.

ಶತಮಾನ ಪೂರೈಸಿದ ಬಡಗನ್ನೂರು  ಶಾಲೆಯ ಹಳೆಯ ಕಟ್ಟಡದ ಸೂರಿನ ಪಕ್ಕಾಸು, ಕಿಟಿಕಿ-ಬಾಗಿಲುಗಳು ಶಿಥಿಲಗೊಂಡಿವೆ. ಮಳೆನೀರು ತರಗತಿ ಕೊಠಡಿಯೊಳಗೆ ಬೀಳುತ್ತಿದೆ. ಬೇರೆ ಕೊಠಡಿ ಇಲ್ಲದೆ ತರಗತಿ ನಡೆಸಲು ಪರದಾಡುವಂತಾಗಿದೆ.

ಶಾಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ 87 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.    ಹಳೆಯ ಕಟ್ಟಡ ಹಾಗೂ ನಲಿಕಲಿ ಶಿಕ್ಷಣ ಮತ್ತು ಶಾಲಾ ಕಚೇರಿ ಇರುವ ಹೊಸ ಕಟ್ಟಡದ ಮಧ್ಯ ಭಾಗದಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಿ ವರ್ಷಗಳು ಉರುಳಿದ್ದರೂ ಅಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಇಲ್ಲಿ ನಾಲ್ಕೂವರೆ ಎಕರೆ ಸ್ಥಳವಿದೆ. ಹಾಗಾಗಿ ಈ ಶಾಲೆಯನ್ನು ಕೆಪಿಎಸ್ ಆಗಿ ಪರಿವರ್ತಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.

ನೂರು ಮಕ್ಕಳಿದ್ದರೂ ಸರಿ ಇಲ್ಲ ಸೂರು

ಸುಬ್ರಹ್ಮಣ್ಯ ಸಮೀಪದ  ಕೊಲ್ಲಮೊಗ್ರು ಗ್ರಾಮದ  ಬಂಗ್ಲೆಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲವಾಗಿದೆ. ಶಾಲೆಯು ಶಿಕ್ಷಕರ ಕೊರತೆಯನ್ನೂ ಎದುರಿಸುತ್ತಿದೆ.  70 ವರ್ಷ ಹಳೆಯದಾದ ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 125 ಮಕ್ಕಳು ಕಲಿಯುತ್ತಿದ್ದಾರೆ.  ನಲಿ-ಕಲಿ ವಿಭಾಗದಲ್ಲೇ 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. 4ರಿಂದ 7ನೇ ತರಗತಿವರೆಗಿನ ಪಾಠ ಪ್ರವಚನಗಳು 70 ವರ್ಷ ಹಳೆಯ ಕೊಠಡಿಯಲ್ಲೇ ನಡೆಯುತ್ತಿವೆ. ಈ ಕಟ್ಟಡದ ತಳಪಾಯ, ಗೋಡೆ, ಕಟ್ಟಡ, ಚಾವಣಿ, ಪೀಠೋಪಕರಣಗಳೆಲ್ಲವೂ ಶಿಥಿಲಗೊಂಡಿವೆ ಎಂಬುದು ಪೋಷಕರ ದೂರು. 10 ವರ್ಷಗಳ ಹಿಂದೆ ನಿರ್ಮಿಸಲಾದ ನಲಿ–ಕಲಿ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆ ನೀರು ಸೋರುತ್ತಿದೆ. ಪೋಷಕರು ಹಣ ಸಂಗ್ರಹಿಸಿ ಚಾವಣಿಗೆ ಪ್ಲಾಸ್ಟಿಕ್‌ ಹೊದಿಕೆ ಹಾಸಿದ್ದಾರೆ. ವಿದ್ಯುತ್ ಉಪಕರಣಗಳು ದುರಸ್ತಿ ಆಗಬೇಕಿದೆ. ಇದೇ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ನಡೆಯುತ್ತಿದೆ. ಇಲ್ಲಿ ಮುಖ್ಯ ಶಿಕ್ಷಕ ಹಾಗೂ ಮತ್ತೊಬ್ಬರು ಕಾಯಂ ಶಿಕ್ಷಕರು ಹಾಗೂ ಮೂವರು ಅತಿಥಿ ಶಿಕ್ಷಕರಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಇಲ್ಲಿಗೆ ಇನ್ನೂ 4 ಶಿಕ್ಷಕರು ಬೇಕು ಎನ್ನುತ್ತಾರೆ ಪೋಷಕರು.

ದ.ಕ: ದುರಸ್ತಿಗೊಳ್ಳಬೇಕಾದ ಸರ್ಕಾರಿ ಶಾಲೆಗಳ ವಿವರ

ಶಿಥಿಲಗೊಂಡ ಕಟ್ಟಡಗಳಲ್ಲಿ ತರಗತಿ ನಡೆಸದಂತೆ ಶಿಕ್ಷಕರಿಗೆ ಸೂಚನೆ ನೀಡಿದ್ದೇವೆ. ದುರಸ್ತಿ ಅಗತ್ಯವಿರುವ ಶಾಲಾ ಕಟ್ಟಡಗಳ ಪಟ್ಟಿ ತಯಾರಿಸಿ, ಕ್ರಿಯಾಯೋಜನೆ ತಯಾರಿಸಿದ್ದೇವೆ
ವೆಂಕಟೇಶ ಪಟಗಾರ್‌,ಡಿಡಿಪಿಐ, ದ.ಕ. ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT