ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವರ ರಾಜೀನಾಮೆ, ಅಧಿಕಾರಿಗಳ ಅಮಾನತಿಗೆ ಕುಮಾರಸ್ವಾಮಿ ಆಗ್ರಹ

Last Updated 22 ಡಿಸೆಂಬರ್ 2019, 10:01 IST
ಅಕ್ಷರ ಗಾತ್ರ

ಮಂಗಳೂರು: ‘ಮುಖ್ಯಮಂತ್ರಿಗಳಿಗೆ ದೇವರ ಮೇಲೆ ನಂಬಿಕೆ ಹಾಗೂ ಮಾನವೀಯತೆ ಇದ್ದರೆ, ಮುಂದಿನ 24 ಗಂಟೆಗಳ ಒಳಗಾಗಿ ಗೋಲಿಬಾರ್‌ಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಜೈಲಿಗೆ ಕಳುಹಿಸಬೇಕು. ಗೃಹ ಸಚಿವರ ರಾಜೀನಾಮೆ ಪಡೆಯಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಮಂಗಳೂರಿನಲ್ಲಿ ಗುರುವಾರ ಪೊಲೀಸ್ ಗುಂಡಿಗೆ ಮೃತರಾದ ಕಂದಕ್‌ನ ಜಲೀಲ್ ಹಾಗೂ ಕುದ್ರೋಳಿಯ ನೌಸೀನ್ ಕುಟುಂಬಗಳನ್ನು ಭೇಟಿ ಮಾಡಿ, ತಲಾ ₹5 ಲಕ್ಷ ಪರಿಹಾರ ನೀಡಿದರು. ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಇದು ಕೋಮುಗಲಭೆ ಅಲ್ಲ. ಪೊಲೀಸ್ ಮತ್ತು ಸಾರ್ವಜನಿಕರ ಸಂಘರ್ಷ. ಘಟನೆ ನಡೆದ ಬೀದಿಯಲ್ಲೂ ಹಿಂದೂ– ಮುಸ್ಲಿಮರು ಚೆನ್ನಾಗಿಯೇ ಬದುಕುತ್ತಿದ್ದಾರೆ. ಅಲ್ಲಿಗೆ ಪೊಲೀಸರನ್ನು ಬಿಟ್ಟು ಏಕೆ ಬೆಂಕಿ ಹಚ್ಚುತ್ತೀರಿ? ನೀವು ಕ್ರಮ ಕೈಗೊಳ್ಳದಿದ್ದರೆ, ನಾವು ಹೋರಾಟ ಮಾಡುತ್ತೇವೆ. ಸದನದಲ್ಲಿ ಪ್ರಶ್ನಿಸುತ್ತೇವೆ’ ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೆಯೇ? ಇಲ್ಲಿ ಬೆಂಕಿ ಹಚ್ಚಿ ದೆಹಲಿಯಲ್ಲಿ ಕೂತಿದ್ದಾರೆ.ಅವರನ್ನು ತೆಗೆದು ಹಾಕಿ. ಕರಾವಳಿಯಲ್ಲಿ ಗೃಹ ಇಲಾಖೆ ಆದೇಶದಲ್ಲಿ ಸರ್ಕಾರ ನಡೆಯುತ್ತಿದೆಯೇ? ಅಥವಾ ಸಮಾನಾಂತರವಾಗಿ ಯಾವನೋ ಒಬ್ಬ ಇದ್ದಾನಲ್ಲಾ... ಪ್ರಭಾಕರ ಭಟ್ಟ, ಅವರ ಮಾತು ಕೇಳಿಕೊಂಡು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ? ಘಟನೆ ಹಿಂದಿನ ದಿನ ಅವರ ಮನೆಯಲ್ಲಿ ಯಾವ ಯಾವ ಅಧಿಕಾರಿಗಳು ಇದ್ದರು? ಎಂಬ ಬಗ್ಗೆ ತನಿಖೆ ನಡೆಸಿ’ ಎಂದು ಒತ್ತಾಯಿಸಿದರು.

‘ಇಲ್ಲಿನ ಒಬ್ಬ ಶಾಸಕ–ಸಂಸದರಾದರೂ ಹಾನಿಗೊಳಗಾದವರನ್ನು ಸಂತೈಸುವ ಮಾನವೀಯತೆ ತೋರಿದ್ದಾರಾ?‘ಹಿಂದೂ ಸಾಮ್ರಾಜ್ಯ ಕಟ್ಟುತ್ತೇವೆ’ ಎಂದು ಹಿಂದೂಗಳ ಭಾವನೆ ಉದ್ರೇಕಿಸುವ ಇವರಿಗೆ, ‘ಹಿಂದೂ ಸಂಸ್ಕೃತಿ, ಮಾನವೀಯತೆ’ ಎಂದರೆ ಗೊತ್ತಿದೆಯೇ? ಒಬ್ಬರಿಗಾದರೂ ಹೃದಯ ಇದೆಯಾ?’ ಎಂದು ಬೇಸರ ವ್ಯಕ್ತಪಡಿಸಿದರು.

ಸಿ.ಎಂ. ಬಂದ ಪುಟ್ಟಾ ಹೋದ ಪುಟ್ಟಾ ಎಂದು ಬಂದು ಹೋದರು. ಇಲ್ಲಿರುವ ಎಲ್ಲ ಸಾಕ್ಷ್ಯವನ್ನು ಮುಗಿಸಿಬಿಡುವ ಉದ್ದೇಶದಿಂದ, ‘ಸಿದ್ದರಾಮಯ್ಯ ವಾರ ಬಿಟ್ಟು ಬರಲಿ’ ಎಂದು ಪೊಲೀಸರು ಹೇಳಿದ್ದಾರೆ’ ಎಂದು ಶಂಕೆ ವ್ಯಕ್ತಪಡಿಸಿದರು.

ಘಟನೆ: ‘ಪ್ರತಿಭಟನೆ ನಡೆಸಲು ಸರ್ಕಾರವೇ ಡಿ.18ರಂದು ಅನುಮತಿ ನೀಡಿದೆ. ಆದರೆ, 18 ರಂದು ಸಂಜೆ 144 ಸೆಕ್ಷನ್ ಹೇರುವಂತೆವಿಡಿಯೊ ಕಾನ್ಫರೆನ್ಸ್‌ನಲ್ಲಿ ಗೃಹ ಇಲಾಖೆ ಸೂಚಿಸಿದೆ. ಹೀಗಾಗಿ, ಸೆಕ್ಷನ್‌ ಜಾರಿ ಬಗ್ಗೆ ಮಾಹಿತಿ ಇಲ್ಲದ ಅಮಾಯಕರು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದಾರೆ. ಅವರಿಗೆ 10 ನಿಮಿಷ ಅವಕಾಶ ಕೊಟ್ಟಿದ್ದರೆ, ಪ್ರತಿಭಟಿಸಿ ಹೋಗಿ ಬಿಡುತ್ತಿದ್ದರು’ ಎಂದರು.

‘ಆದರೂ, ರಾಜ್ಯದ ಎಲ್ಲೂ ಸಮಸ್ಯೆ ಆಗಿಲ್ಲ. ಇಲ್ಲಿ ಮಾತ್ರ ಮಸೀದಿ ಬಳಿ 100ರಿಂದ 150 ಜನ ಸೇರಿದ್ದಾರೆ ಎಂದು ಪೊಲೀಸರೇ ನುಗ್ಗಿ ಲಾಠಿ ಚಾರ್ಚ್‌ ಮಾಡಿದ್ದಾರೆ. ಮಾಜಿ ಮೇಯರ್ ಅಶ್ರಫ್ ಅವರನ್ನು ಪೊಲೀಸ್ ಕಮಿಷನರ್‌ ಸ್ವತಃ ಕರೆಯಿಸಿಕೊಂಡಿದ್ದಾರೆ. ಅವರೀಗ ಆಸ್ಪತ್ರೆಯ ಐಸಿಯುನಲ್ಲಿ ಇದ್ದಾರೆ. ಇದಕ್ಕೆಲ್ಲ ಯಾರು ಹೊಣೆ ? ಪೊಲೀಸ್ ಕಮಿಷನರ್ ತಪ್ಪು ತಪ್ಪು ಹೇಳಿಕೆ ನೀಡುತ್ತಿರುವುದೂ ವರದಿಯಾಗಿವೆ’ ಎಂದರು.

‘ಮಕ್ಕಳನ್ನು ಬಿಟ್ಟುಬಂದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾರೆ. ಸರ್ಕಾರ, ಸಿಎಂಗೆ ಮಾನವೀಯತೆ ಇದೆಯಾ? ಇನ್ನು ಶೋಭಾ ಕರಂದ್ಲಾಜೆ, ‘ಕಾಂಗ್ರೆಸ್ ಕಾರಣ’ ಎನ್ನುತ್ತಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ‘ಸ್ಯಾಡಿಸ್ಟ್’ ಎನ್ನುತ್ತಾರೆ. ಪೊಲೀಸರ ಮೂಲಕ ಅಮಾಯಕರನ್ನು ಕೊಲೆ ಮಾಡಿದ ‘ನೀವೇ ಸ್ಯಾಡಿಸ್ಟ್‌ಗಳು’ ಎಂಬುದು ಜನರಿಗೆ ತಿಳಿದಿದೆ’ ಎಂದು ಖಂಡಿಸಿದರು.

‘ಎರಡು ಆಸ್ಪತ್ರೆಯಲ್ಲಿ ಎಂಟು ಕುಟುಂಬಗಳಿವೆ. ಅವರಲ್ಲಿ ಯಾರೂ ಕೇರಳದವರು? ಎಂದು ಸರ್ಕಾರವೇ ತಿಳಿಸಲಿ’ ಎಂದು ಸವಾಲು ಹಾಕಿದರು.

‘ಆಸ್ಪತ್ರೆಗೆ ನುಗ್ಗಿದವರು ಆರ್.ಎಸ್.ಎಸ್. ಕಾರ್ಯಕರ್ತರೇ ಎಂಬ ಸಂಶಯವಿದೆ. ‘ಇಷ್ಟೊಂದು ಗುಂಡು ಹಾಕಿದರೂ ಹೆಣಗಳೇ ಬಿದ್ದಿಲ್ಲ, ನಾವು ಹೆಣ ಬೀಳಿಸಬೇಕು’ ಎಂಬ ಪೊಲೀಸರ ಹೇಳಿಕೆಗಳ ವಿಡಿಯೊ ಬೀದಿ ಬೀದಿಯಲ್ಲಿವೆ?’ ಎಂದರು.

‘ಸತ್ತವರ ಮೇಲೂ ಕೇಸು ಹಾಕಿದ್ದಾರೆ. ಕೊಂದವರ ಮೇಲೆ ಕೇಸು ಇಲ್ಲ. ಪ್ರತಿಭಟನೆಯನ್ನು ಸಾವಿರ ಮಂದಿ ಇದ್ದರು ಎಂದು ಒಂದು ಎಫ್ಐಆರ್, ಏಳು ಸಾವಿರ ಮಂದಿ ಇದ್ದರು ಎಂದು ಇನ್ನೊಂದು ಎಫ್‌ಐಆರ್‌ನಲ್ಲಿ ನಮೂದಿಸಿದ್ದಾರೆ’ ಎಂದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಒಂದೇ ಒಂದು ಘಟನೆ ನಡೆದಿರಲಿಲ್ಲ. ಈಗ ಯಾಕೆ ಶುರುವಾಯಿತು? ಜನ ಬೀದಿಯಲ್ಲಿದ್ದರೆ, ಇವರು ಬ್ಯಾಂಕ್ವೆಟ್‌ನಲ್ಲಿ ₹25 ಲಕ್ಷ ಖರ್ಚು ಮಾಡಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಗಾಯಗೊಂಡವರಿಗೆ ಸೂಕ್ತ ನೆರವು ನೀಡುವ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.

ಜೆಡಿಎಸ್ ಕಾರ್ಯಾಧ್ಯಕ್ಷ ಫಾರೂಕ್, ಮುಖಂಡರಾದ ಎಂ.ಬಿ.ಸದಾಶಿವ ಮತ್ತಿತರರು ಇದ್ದರು.

ಆತ್ಮಹತ್ಯೆಯ ರಾಜೀನಾಮೆ, ಕೊಲೆಗೆ ಏಕಿಲ್ಲ?

‘ಅಂದು ಡಿವೈಎಸ್ಪಿ ಗಣಪತಿ, ಐಎಎಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರೂ, ಗೃಹ ಸಚಿವರ ರಾಜೀನಾಮೆಯನ್ನು ಬಿಜೆಪಿಯವರು ಕೇಳಿದ್ದರು. ಇಂದು ಪೊಲೀಸರೇ ಅಮಾಯಕರರ ಹೆಣ ಉರುಳಿಸಿದ್ದಾರೆ. ಗೃಹ ಸಚಿವರ, ಸಿಎಂ ರಾಜೀನಾಮೆ ಏಕೆ ಕೇಳುತ್ತಿಲ್ಲ?’ ಎಂದು ಬಿಜೆಪಿ ಮುಖಂಡರಿಗೆ ಕುಮಾರಸ್ವಾಮಿ ಕುಟುಕಿದರು.

‘ಪ್ರಭಾಕರ ಭಟ್ಟರನ್ನು ಹಿಡಿದು ಬಿಟ್ಟರೆ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಇದೇ ಬಿಜೆಪಿಯವರು ಹೇಳಿದರು. ಆಗ ಎಫ್‌ಐಆರ್ ಹಾಕಿದ್ರಾ? ಇನ್ನೊಂದು ಗೋದ್ರಾ ಮಾಡಲು ಇದು ಗುಜರಾತ್ ಅಲ್ಲ. ಇದು ಕರ್ನಾಟಕ. ನೀವು ಎಷ್ಟು ದಿನ ರಾಜ್ಯ ಆಳ್ತೀರಾ ನಾವೂ ನೋಡ್ತೇವೆ’ ಎಂದು ಸವಾಲು ಹಾಕಿದರು.

‘ಅಳಿಯನನ್ನು ನೇತ್ರಾವತಿಯಲ್ಲಿ ಜೀವ ತೆಗೆದರು!’

‘ಕಾಂಗ್ರೆಸ್‌ನಿಂದ ಎಲ್ಲ ಅನುಭವಿಸಿದ ಮಾಜಿ ಮುಖ್ಯಮಂತ್ರಿಯೊಬ್ಬರ ಜೀವನ ಚರಿತ್ರೆಯ ಐದು ಕೃತಿಗಳು ಬರುತ್ತವಂತೆ. ಅವರು, ಅಂದು ಸಮ್ಮಿಶ್ರ ಸರ್ಕಾರವನ್ನು ಅಸಹ್ಯ ಸರ್ಕಾರ ಎಂದಿದ್ದರು. ಅವರ ಅಳಿಯನನ್ನೂ ತೆಗೆದುಕೊಂಡು ಬಂದು ನೇತ್ರಾವತಿ ನದಿಯಲ್ಲಿ ಜೀವ ತೆಗೆದಿದ್ದದೂ ಆಯಿತು. ಈಗಲಾದರೂ,ಈ ಸರ್ಕಾರ ಯಾವ ಸರ್ಕಾರ ಎಂದು ಅವರು ಹೇಳಲಿ’ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಟಾಂಗ್ ನೀಡಿದರು.

‘ವಾಸ್ತವಾಂಶ ಜನರ ಮುಂದಿಡಿ’

‘33 ಪೊಲೀಸರಿಗೆ ಏಟು ಬಿದ್ದಿದ್ದರೆ, ಕರೆದುಕೊಂಡು ಬಂದು ತೋರಿಸಿ. ಇಬ್ಬರು ಗಾಯಗೊಂಡಿದ್ದಾರೆ. ಆದರೆ, ಗುಂಡೇಟು ತಿಂದು ಆಸ್ಪತ್ರೆಯಲ್ಲಿರುವ ಅಮಾಯಕರ ಬಗ್ಗೆ ಯಾರಿಗೂ ಏಕೆ ಕನಿಕರವಿಲ್ಲ? ನಾನು ಕೋಮುವಾದ ಅಥವಾ ಜಾತ್ಯತೀತ ವಾದದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಈ ರಾಜ್ಯದಲ್ಲಿ ಸಾಮಾನ್ಯ ಜನರಿಗೆ ಬದುಕಲು ಬಿಡಿ. ಮಾಧ್ಯಮಗಳೇ ದಯವಿಟ್ಟು ವಾಸ್ತವಾಂಶವನ್ನು ಜನರ ಮುಂದೆ ತಿಳಿಸಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT