ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿಯ ಆರೋಗ್ಯ ಕಾಳಜಿಯೂ ಮುಖ್ಯ: ಡಾ.ರಾಜೇಂದ್ರ ಕೆ.ವಿ.

ಮಂಗಳೂರಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ
Last Updated 7 ಏಪ್ರಿಲ್ 2022, 16:18 IST
ಅಕ್ಷರ ಗಾತ್ರ

ಮಂಗಳೂರು: ‘ನಮ್ಮ ಆರೋಗ್ಯದ ಜತೆಗೆ ಸೃಷ್ಟಿಯ ಆರೋಗ್ಯವನ್ನೂ ಕಾಪಾಡಬೇಕಾಗಿದೆ. ಈ ದಿಶೆಯಲ್ಲಿ ಪರಿಸರ ಸಂರಕ್ಷಣೆ, ಸ್ವಚ್ಛತೆ, ತಾಪಮಾನ ಕಡಿಮೆಗೊಳಿಸಲು ಉಪಕ್ರಮ, ಸಮೂಹ ಸಾರಿಗೆ, ಇಂಧನ ಉಳಿತಾಯ, ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೆನ್ಲಾಕ್ ಆಸ್ಪತ್ರೆ, ಮಹಾನಗರ ಪಾಲಿಕೆ, ಜಿಲ್ಲೆಯ ಮೆಡಿಕಲ್ ಕಾಲೇಜುಗಳು ಹಾಗೂ ಸೇಂಟ್‌ ಅಲೋಶಿಯಸ್ ಕಾಲೇಜಿನ ಆಶ್ರಯದಲ್ಲಿ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕನಿಷ್ಠ ತೊಂದರೆಗಳೊಂದಿಗೆ ಕೋವಿಡ್‌ ಎದುರಿಸಿದ್ದೇವೆ. ಸರ್ಕಾರ ಉಚಿತ ಲಸಿಕೆ ನೀಡಿದರೂ ಇನ್ನೂ ಕೆಲವು ಮಂದಿ ಲಸಿಕೆ ಸ್ವೀಕರಿಸಲು ನಿರಾಕರಿಸುವ ಮನಸ್ಥಿತಿಯ ಜನರಿದ್ದಾರೆ. ಇದು ಬೇಸರದ ಸಂಗತಿ. ಎಲ್ಲರೂ ಲಸಿಕೆ ಸ್ವೀಕರಿಸಿದರೆ ಆಸ್ಪತ್ರೆಗಳ ಮೇಲಣ ಹೊರೆಯನ್ನು ಕಡಿಮೆ ಮಾಡಿ, ತೀರಾ ಅಗತ್ಯ ಇರುವವರು ಆಸ್ಪತ್ರೆಯ ಸೇವೆ ಪಡೆಯಲು ಸಾಧ್ಯವಿದೆ’ ಎಂದು ಹೇಳಿದರು.

ಶಾಸಕ ಡಿ.ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ, ‘ಆರೋಗ್ಯ ಇಲಾಖೆಯು ಎಷ್ಟೇ ಕಾರ್ಯದಕ್ಷತೆಯಿಂದ ಕೆಲಸ ಮಾಡಿದರೂ ರೋಗಗಳ ನಿವಾರಣೆಗೆ ಸಂಬಂಧಿಸಿ ಜನರ ಸಹಭಾಗಿತ್ವವಿಲ್ಲದೆ ಪರಿಪೂರ್ಣ ಸಾಧನೆ ಸಾಧ್ಯವಾಗದು. ಹಾಗಾಗಿ, ಇಲಾಖೆಯ ಕೆಲಸ ಕಾರ್ಯಗಳಲ್ಲಿ ಜನರು ಸಹಕರಿಸಬೇಕು’ ಎಂದು ಹೇಳಿದರು.

ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಮಾರ್ಟಿಸ್ ಮತ್ತು ಕರ್ಣಾಟಕ ಬ್ಯಾಂಕಿನ ಎಜಿಎಂ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ್ ದೇಶಪಾಂಡೆ ಇದ್ದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣ ಅಧಿಕಾರಿ ಡಾ.ನವೀನ್‍ಚಂದ್ರ ಕುಲಾಲ್ ಪ್ರಾಸ್ತಾವಿಕ ಮಾತನಾಡಿದರು. ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಶ್ಯಾನುಬೋಗ್, ಡಾ.ರಾಜೇಶ್, ಡಾ.ಸುಜಯ್ ಭಂಡಾರಿ, ಡಾ.ದೀಪಾ, ಡಾ.ಜಗದೀಶ್, ಡಾ.ಅಣ್ಯಯ್ಯ ಕುಲಾಲ್, ಡಾ.ಸತೀಶ್ಚಂದ್ರ, ಡಾ.ಜಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT