ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ತೆರೆಯದೇ ಮಹಾಪಧಮನಿ ಕವಾಟ ಜೋಡಣೆ

ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಹೃದ್ರೋಗಿಗೆ ಯಶಸ್ಚಿ ಚಿಕಿತ್ಸೆ
Last Updated 7 ಡಿಸೆಂಬರ್ 2019, 9:46 IST
ಅಕ್ಷರ ಗಾತ್ರ

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯ ಹೃದ್ರೋಗ ವಿಭಾಗದ ವೈದ್ಯರು 71 ವರ್ಷದ ಹೃದ್ರೋಗಿಯೊಬ್ಬರಿಗೆ ಹೃದಯ ತೆರಯದೇ ‘ತವಿ’ (ಟ್ರಾನ್ಸ್‌ ಕ್ಯಾತಿಟರ್‌ ಅಯೋರ್ಟಿಕ್‌ ವಾಲ್ವ್‌ ಇಂಪ್ಲಾಂಟ್‌) ವಿಧಾನದ ಮೂಲಕ ಮಹಾಪಧಮನಿಯ ಕವಾಟವನ್ನು ಜೋಡಣೆ ಮಾಡಿದ್ದಾರೆ.

ಮಹಾಪಧಮನಿ ಕವಾಟಕ್ಕೆ ತೀವ್ರವಾಗಿ ಹಾನಿಯಾಗಿ, ಹೃದಯ ವೈಫಲ್ಯದತ್ತ ಸಾಗುತ್ತಿದ್ದ ಮಡಿಕೇರಿಯ ಸ್ಯಾಮ್ಯುಯೆಲ್‌ ಡೇನಿಯಲ್ ಎಂಬುವವರಿಗೆ ಇಂಡಿಯಾನ ಆಸ್ಪತ್ರೆ ಮತ್ತು ಹೃದ್ರೋಗ ಸಂಸ್ಥೆಯ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಸ್ಯಾಮ್ಯುಯೆಲ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್‌ ಕುಂಬ್ಳೆ, ‘ಸ್ಯಾಮ್ಯುಯೆಲ್‌ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು. ಬೇರೆ ಆಸ್ಪತ್ರೆಯ ತೀವ್ರನಿಗಾ ಘಟಕದಿಂದ ನಮ್ಮ ಆಸ್ಪತ್ರೆಗೆ ಕರೆತರಲಾಗಿತ್ತು. ಇದೇ ಮೊದಲ ಬಾರಿಗೆ ‘ತವಿ’ ವಿಧಾನದಲ್ಲಿ ನಾವು ಹೃದಯದ ಕವಾಟ ಜೋಡಣೆ ಮಾಡಿದ್ದೇವೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದಲ್ಲಿ ಈ ವಿಧಾನದಲ್ಲಿ ನಡೆದ ಮೊದಲ ಯಶಸ್ವಿ ಚಿಕಿತ್ಸೆ ಇದು’ ಎಂದರು.

ಸಾಮಾನ್ಯವಾಗಿ ಮಹಾಪಧಮನಿಯ ಕವಾಟ ಬದಲಾವಣೆಯನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಮೂಲಕವೇ ನಡೆಸಲಾಗುತ್ತದೆ. ಆದರೆ, ಎರಡು ದಶಕಗಳಿಂದ ಕೆಲವು ರಾಷ್ಟ್ರಗಳಲ್ಲಿ ತವಿ ವಿಧಾನದ ಚಿಕಿತ್ಸೆ ಬಳಕೆಯಲ್ಲಿದೆ. ಎರಡು ವರ್ಷಗಳಿಂದ ಭಾರತದ ಕೆಲವು ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯವಿತ್ತು. ವಯಸ್ಸಾದ ಮತ್ತು ದೈಹಿಕವಾಗಿ ದುರ್ಬಲವಾಗಿರುವ ರೋಗಿಗಳ ಚಿಕಿತ್ಸೆಯಲ್ಲಿ ಇದು ಹೆಚ್ಚು ಅನುಕೂಲಕರ ವಿಧಾನ ಎಂದು ತಿಳಿಸಿದರು.

‘ಈ ವಿಧಾನದಲ್ಲಿ ಆಂಜಿಯೋಗ್ರಾಂ ಪರೀಕ್ಷೆಗೆ ಮಾಡುವ ‘ಕ್ಯಾತಿಟರ್‌ ಕೀ ಹೋಲ್‌’ ಮಾದರಿಯನ್ನೇ ಬಳಸಲಾಗುತ್ತದೆ. ಕ್ಯಾತಿಟರ್‌ ಕೀ ಹೋಲ್‌ ಮೂಲಕ 26 ಮಿಲಿಮೀಟರ್‌ ಗಾತ್ರದ ಕವಾಟವನ್ನು ಹೃದಯಕ್ಕೆ ತೂರಿಸಿ ಕ್ಯಾಮೆರಾ ನೆರವಿನಲ್ಲಿ ಹಾನಿಯಾದ ಭಾಗದಲ್ಲಿ ಜೋಡಣೆ ಮಾಡಲಾಗುತ್ತದೆ. ರೋಗಿಗೆ ಅರಿವಳಿಕೆ ಔಷಧಿ ನೀಡದೆಯೇ, ಅವರು ಎಚ್ಚರದಲ್ಲಿರುವಾಗಲೇ ಕವಾಟದ ಜೋಡಣೆ ಮಾಡಲಾಗಿದೆ’ ಎಂದರು.

ದೇಸಿ ಕವಾಟ ಬಳಕೆ:ಇಂತಹ ಚಿಕಿತ್ಸೆಯಲ್ಲಿ ವಿದೇಶಿ ನಿರ್ಮಿತ ಕವಾಟ ಬಳಸಲಾಗುತ್ತದೆ. ಅದರ ಬೆಲೆ ₹ 25 ಲಕ್ಷ ಇದ್ದು, ಚಿಕಿತ್ಸೆಯ ಒಟ್ಟು ವೆಚ್ಚ ₹ 30 ಲಕ್ಷ ತಲುಪುತ್ತದೆ. ಸ್ಯಾಮ್ಯುಯೆಲ್‌ ಅವರಿಗೆ ಭಾರತದಲ್ಲೇ ತಯಾರಾದ ‘ಮೈವಾಲ್ವ್‌’ ಕವಾಟವನ್ನು ಬಳಸಿ ಚಿಕಿತ್ಸೆ ನೀಡಲಾಗಿದೆ. ಅದರ ಬೆಲೆ ₹ 12 ಲಕ್ಷ ಇದ್ದು, ₹ 15 ಲಕ್ಷದಲ್ಲಿ ಚಿಕಿತ್ಸೆ ಪೂರ್ಣಗೊಂಡಿದೆ. ಕವಾಟದ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಯೂಸುಫ್‌ ಕುಂಬ್ಳೆ ಹೇಳಿದರು.

ಇಂಡಿಯಾನ ಆಸ್ಪತ್ರೆಯ ಅಧ್ಯಕ್ಷ ಡಾ.ಅಲಿ ಕುಂಬ್ಳೆ, ಚಿಕಿತ್ಸಾ ತಂಡದಲ್ಲಿದ್ದ ಡಾ.ಅಬ್ದುಲ್‌ ಮನ್ಸೂರ್‌ ಮತ್ತು ಡಾ.ಮದನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT