ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಲಿ ಟೂರಿಸಂ: ಕರಾವಳಿ ಪ್ರವಾಸೋದ್ಯಮಕ್ಕೆ ಪೂರಕ

ಸಂವಾದದಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ
Last Updated 19 ಮಾರ್ಚ್ 2021, 13:52 IST
ಅಕ್ಷರ ಗಾತ್ರ

ಮಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಸುವ ಬಂಡವಾಳ ಹೂಡಿಕೆದಾರರ ಸಮಾವೇಶದ ಮಾದರಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಹೂಡಿಕೆದಾರರ ಸಮಾವೇಶ ನಡೆಸಲು ಯೋಚಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ ಹೇಳಿದರು.

ಕನೆಕ್ಟ್‌ 2021 ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಶುಕ್ರವಾರ ಇಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಸೋದ್ಯಮ ಮತ್ತು ಆತಿಥ್ಯ ಭಾಗ್ಯಸ್ಥಗಾರರೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.

ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ಪ್ರಶಸ್ತ ಸ್ಥಳವಾಗಿದೆ. ಇಲ್ಲಿನ ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳು, ಜಲಪಾತಗಳು, ಐತಿಹಾಸಿಕ ಸ್ಥಳಗಳು, ಕರಾವಳಿಯ ಕಡಲತೀರಗಳು ಪ್ರವಾಸಿಗರನ್ನು ಆಕರ್ಷಿಸುವಂತಿವೆ. ಸಮುದಾಯದ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಬೆಳೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಮಾವೇಶ ನಡೆಸಿ, ಸರ್ಕಾರ ಮತ್ತು ಸಾರ್ವಜನಿಕರ (ಪಿಪಿಪಿ) ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲು ಸಿದ್ಧತೆ ನಡೆಸಲಾಗಿದೆ ಎಂದರು.

ಹೆಲಿ ಟೂರಿಸಂ ಇನ್ನಷ್ಟು ಹೆಚ್ಚು ಪ್ರಚಲಿತಕ್ಕೆ ತರುವ ಮೂಲಕ ವಿದೇಶಿ ಪ್ರವಾಸಿಗರನ್ನು ಸೆಳೆಯಬಹುದು. ಕೇಂದ್ರ ಸರ್ಕಾರದ ‘ಉಡಾನ್ ಸ್ಕೀಮ್’ ಸ್ಥಳೀಯ ಸಂಪರ್ಕ ಸಾಧನ ಹೆಚ್ಚಿಸಲು ಅನುಕೂಲಕಾರಿಯಾಗಿದೆ. ಸಾಹಸ ಪ್ರವಾಸೋದ್ಯಮ, ಎರೊಡ್ರೋಮ್, ಏರ್‌ಕ್ರಾಫ್ಟ್, ಸೀಪ್ಲೇನ್, ಹೆಲಿಕಾಪ್ಟರ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಮೂಲಕ ರಾಜ್ಯದ ಪ್ರವಾಸೋದ್ಯಮವನ್ನು ಉಚ್ಛ್ರಾಯಕ್ಕೆ ಕೊಂಡೊಯ್ಯಬಹುದು. ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಸಾಧ್ಯತೆಗಳು ಇವೆ ಎಂದು ಹೇಳಿದರು.

ಉಡಾನ್‌ ಯೋಜನೆಯಡಿ ಹೆಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಏರೊಡ್ರೋಮ್‌ಗಳನ್ನು ಸ್ಥಾಪಿಸಬಹುದು. ಸೀಪ್ಲೇನ್ ಸೇವೆಗಳನ್ನು ಉತ್ತೇಜಿಸಲು ಹೆಲಿ ಬಂದರುಗಳ ಅಗತ್ಯವಿದೆ. ನವ ಮಂಗಳೂರು ಬಂದರಿಗೆ ವಿದೇಶಿ ಐಷಾರಾಮಿ ಪ್ರವಾಸಿ ಹಡಗುಗಳು ಬರುವುದರಿಂದ ಈ ಬಗೆಯ ಪ್ರವಾಸೋದ್ಯಮಕ್ಕೆ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ.ಮಂಗಳೂರು ಮತ್ತು ಉಡುಪಿಯಲ್ಲಿ ಕ್ರೂಸ್ ಲೈನರ್‌ಗಳನ್ನು ಆಕರ್ಷಿಸುವ ಅಗತ್ಯವಿದೆ ಎಂದು ಹೇಳಿದರು.

ಉಡುಪಿಯಲ್ಲಿ ‘ವಿಷನ್ ಪ್ಲಾನ್’:

‘ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳು ಇವೆ. ಈ ನಿಟ್ಟಿನಲ್ಲಿ ಮುಂದಿನ 10 ವರ್ಷಗಳ ‘ವಿಷನ್ ಪ್ಲಾನ್’ ರೂಪಿಸಲಾಗಿದೆ. ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಗುರುತಿಸಿ, ಅವುಗಳ ಮಾಹಿತಿ ಸಂಗ್ರಹಿಸಲಾಗಿದೆ. ಮಲ್ಪೆ ಕಡಲತೀರದ ಮಾದರಿಯಲ್ಲಿ ಅನುದಾನ ನಿರೀಕ್ಷಿಸದೆ, ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಮೂಲಕ ಆಯಾ ಸ್ಥಳ ನಿರ್ವಹಣೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಈ ಭಾಗದಲ್ಲಿ ಬೋಟ್‌ ಹೌಸ್‌ಗೆ ಒತ್ತು ನೀಡಬೇಕಾಗಿದೆ. ಇದರಿಂದ ಬೋಟ್ ಹೌಸ್ ಖುಷಿ ಅನುಭವಿಸಲು ಪ್ರವಾಸಿಗರು ಗೋವಾ ಅಥವಾ ಕೇರಳಕ್ಕೆ ಹೋಗುವುದು ತಪ್ಪುತ್ತದೆ. ಇದರ ಅಭಿವೃದ್ಧಿಗೆ ಆರಂಭಿಕ ಹಂತದಲ್ಲಿ ಶೇ 50ರ ಸಹಾಯಧನ ನೀಡಬೇಕು’ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ‘ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲು ಯೋಚಿಸಲಾಗಿದೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಅಂಬಾರಿ ಬಸ್ ವ್ಯವಸ್ಥೆಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ’ ಎಂದರು.

‘ಜಿಲ್ಲೆಯ ಕಡಲ ತೀರಗಳನ್ನು ಒತ್ತುವರಿಯಿಂದ ರಕ್ಷಿಸಲು ಸರ್ವೆ ನಡೆಸಲಾಗುವುದು. ಸೋಮೇಶ್ವರ ಕಡಲ ತೀರದಲ್ಲಿ ಈ ಕಾರ್ಯ ನಡೆಯುತ್ತಿದೆ. ಇದರಿಂದ ಹೂಡಿಕೆದಾರರ ಮೂಲಕ ಕಡಲ ತೀರ ಅಭಿವೃದ್ಧಿಗೊಳಿಸಬಹುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಪ್ರಾರಂಭವಾಗಿದ್ದ ಸರ್ಫಿಂಗ್ ಬಗ್ಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯವಹಿಸಿದೆ’ ಎಂದು ಸಾರ್ವಜನಿಕರೊಬ್ಬರು ಹೇಳಿದರು. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕಾರ್ಯದರ್ಶಿ ಮನು, ಡಿಸಿಎಫ್ ಕರಿಕಲನ್, ಉಭಯ ಜಿಲ್ಲೆಗಳ ಬಂಡವಾಳ ಹೂಡಿಕೆದಾರರು, ಸಾರ್ವಜನಿಕರು ಸಂವಾದದಲ್ಲಿ ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT