ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | 8 ಲಕ್ಷ ಮನೆಗಳಿಗೆ ಅಯೋಧ್ಯೆ ಮಂತ್ರಾಕ್ಷತೆ: ಪುರಾಣಿಕ್‌

ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆ – ಕರಾವಳಿಯಲ್ಲೂ ಸಂಭ್ರಮಾಚರಣೆ: ವಿಎಚ್‌ಪಿ
Published 20 ಡಿಸೆಂಬರ್ 2023, 14:43 IST
Last Updated 20 ಡಿಸೆಂಬರ್ 2023, 14:43 IST
ಅಕ್ಷರ ಗಾತ್ರ

ಮಂಗಳೂರು: ಅಯೋಧ್ಯೆಯಲ್ಲಿ ಪೂಜೆಗೊಂಡ ಮಂತ್ರಾಕ್ಷತೆಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮಂಗಳೂರು ವಿಭಾಗದ 8 ಲಕ್ಷ ಮನೆಗಳಿಗೆ ತಲುಪಿಸಲಾಗುತ್ತದೆ ಎಂದು ವಿಎಚ್‌ಪಿ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ಜ.22 ರಂದು ಬೆಳಿಗ್ಗೆ 11 ಗಂಟೆಯಿಂದ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ. ರಾಮಲಲ್ಲಾನ ನೂತನ ವಿಗ್ರಹ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಆಯ್ದ ಗಣ್ಯರಿಗಷ್ಟೇ ಆಹ್ವಾನವಿದೆ. ರಾಜ್ಯದಿಂದ ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆ, ಶೃಂಗೇರಿಯ ವಿಧುಶೇಖರ ಭಾರತಿ ಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಉಡುಪಿಯ ಶ್ರೀಕೃಷ್ಣ ಮಠದ ಅಷ್ಠಮಠಗಳ ಸ್ವಾಮೀಜಿಗಳು ಸೇರಿದಂತೆ ಆಯ್ದ ಸಾಧುಸಂತರನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್ ಮಾತನಾಡಲಿದ್ದು, ಈ ಕಾರ್ಯಕ್ರಮವನ್ನು ಹಳ್ಳಿ ಹಳ್ಳಿಯಲ್ಲೂ ನೇರಪ್ರಸಾರ ಮಾಡಲಾಗುತ್ತಿದೆ. ರಾಜ್ಯದಲ್ಲಿ  80 ಲಕ್ಷಕ್ಕೂ ಅಧಿಕ ಹಿಂದೂ ಕುಟುಂಬಗಳು ಈ ಸಂಭ್ರಮವನ್ನು ಆಚರಿಸಬೇಕು’ ಎಂದರು.

ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ‘ಮಂದಿರದಲ್ಲಿ ರಾಮ ದೇವರ ವಿಗ್ರಹ ಪ್ರತಿಷ್ಠಾಪನೆಯ ದಿನ ಪ್ರತಿ ಊರು ಅಯೋಧ್ಯೆಯಂತಾಗಬೇಕು. ಪ್ರತಿ ಮನೆಯಲ್ಲೂ ಕನಿಷ್ಠ ಐದು ದೀಪಗಳನ್ನು ಬೆಳಗಿ, ಉತ್ತರ ದಿಕ್ಕಿಗೆ ಆರತಿ ಎತ್ತಿ ದೀಪಾವಳಿಯ ರೀತಿ ‌‌‌‌ಹಬ್ಬವನ್ನು ಆಚರಿಸಬೇಕು. ಅಂದು ಜಿಲ್ಲೆಯ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ವಿಶೇಷ ಪೂಜೆ, ಶ್ರೀ ರಾಮ ತಾರಕಮಂತ್ರ ಜಪ, ಹನುಮಾನ್ ಚಾಲೀಸಾ ಪಠಣ, ಭಜನೆ, ಕೀರ್ತನೆ, ಸುಂದರ ಕಾಂಡ ಪಾರಾಯಣ, ರಾಮರಕ್ಷಾ ಸ್ತೋತ್ರದ ಪಠಣ, ಇಷ್ಟ ದೇವರ ಜಪ ಮತ್ತು ಪ್ರಸಾದ ವಿತರಣೆ ನಡೆಯಲಿದೆ' ಎಂದರು.

‘ಅಯೋಧ್ಯೆಯ ಮಂತ್ರಾಕ್ಷತೆ, ಭವ್ಯ ರಾಮಮಂದಿರದ ಭಾವಚಿತ್ರ ಹಾಗೂ ಆಮಂತ್ರಣ ಪತ್ರವನ್ನು 2024ರ ಜ. 1ರಿಂದ 15ರವರೆಗೆ ಮನೆ ಮನೆಗೆ ತಲುಪಿಸಲಿದ್ದೇವೆ. ಜ. 7 ರಂದು ಮಹಾ ಸಂಪರ್ಕ‌ ಅಭಿಯಾನ ಹಮ್ಮಿಕೊಂಡಿದ್ದು,  ಯುವಜನರು, ಮಹಿಳೆಯರು ಸೇರಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ’  ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ.ಪುರುಷೋತ್ತಮ್‌, ಕಾರ್ಯದರ್ಶಿ ಶಿವಾನಂದ ಮೆಂಡನ್‌, ಪ್ರಾಂತ ಸೇವಾ ಪ್ರಮುಖ್‌ ಗೋಪಾಲ್‌ ಕುತ್ತಾರ್‌, ಬಜರಂಗದಳದ ವಿಭಾಗ ಸಹ ಸಂಯೋಜಕ ಪುನೀತ್‌ ಅತ್ತಾವರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT