ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದಡಿ ಎಲ್‌ಪಿಜಿ ದಾಸ್ತಾನು ಯೋಜನೆ: ಕಾಮಗಾರಿ ಪರಿಶೀಲನೆ

Published 7 ಸೆಪ್ಟೆಂಬರ್ 2023, 18:49 IST
Last Updated 7 ಸೆಪ್ಟೆಂಬರ್ 2023, 18:49 IST
ಅಕ್ಷರ ಗಾತ್ರ

ಮಂಗಳೂರು: ನೆಲದಡಿಯ ಅನಿಲ ಸಂಗ್ರಹಾಗರದಿಂದ ಅನಿಲ ಸೋರಿಕೆ ಆಗದಂತೆ ಹೇಗೆ ತಡೆಯುವಿರಿ? ಕ್ಷಿಪಣಿ ದಾಳಿ ನಡೆದರೂ ಅನಿಲ ಸೋರಿಕೆ ಆಗದಂತೆ ತಡೆಯುವ ವ್ಯವಸ್ಥೆ ಇದೆಯೇ? ಸುನಾಮಿ ಅಪ್ಪಳಿಸಿದರೂ ಇದು ಸುರಕ್ಷಿತವಾಗಿರುವುದೇ? ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳೇನು?

ನೆಲದಡಿಯಲ್ಲಿ ಗುಹೆ ನಿರ್ಮಿಸಿ, ಅದರಲ್ಲಿ ದ್ರವೀಕೃತ ಪೆಟ್ರೊಲಿಯಂ ಅನಿಲ (ಎಲ್‌ಪಿಜಿ) ದಾಸ್ತಾನು ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (ಎಚ್‌ಪಿಸಿಎಲ್‌) ಅಧಿಕಾರಿಗಳು ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯಿಂದ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಿದರು. ಬಾಳ ಗ್ರಾಮದಲ್ಲಿ ಅನುಷ್ಠಾನವಾಗುತ್ತಿರುವ ಈ ಯೋಜನಾ ಸ್ಥಳಕ್ಕೆ ಬಿ.ಎಂ.ಫಾರೂಕ್‌ ನೇತೃತ್ವದ ಸಮಿತಿಯು ಗುರುವಾರ ಭೇಟಿ ನೀಡಿ ಪರಿಶೀಲಿಸಿತು. 

ಈ ಯೋಜನೆಯಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳನ್ನು ವಿವರಿಸಿದ ಎಚ್‌ಪಿಸಿಎಲ್‌ನ ಪ್ರಧಾನ ವ್ಯವಸ್ಥಾಪಕ ಕೆ.ವಿ.ರಮಣಮೂರ್ತಿ, ‘ನೆಲದಡಿಯ ಶಿಲೆಯನ್ನು ಕೊರೆದು ಗುಹೆ ನಿರ್ಮಿಸಿ ಅನಿಲ ದಾಸ್ತಾನು ಮಾಡುವ ವಿಧಾನವು ನೆಲದ ಮೇಲಿನ ಸಂಗ್ರಹಾಗರಕ್ಕಿಂತಲೂ ಸುರಕ್ಷಿತ’ ಎಂದರು.

‘ಗುಹೆ ಕೊರೆಯುವ ಕಲ್ಲಿನ ಗುಣಮಟ್ಟ ಹಾಗೂ ಜಾಗದಲ್ಲಿ ನೀರಿನ ಲಭ್ಯತೆ ಬಲುಮುಖ್ಯ. ಆಳಕ್ಕೆ ಹೋದಷ್ಟೂ ನೀರಿನ ಒತ್ತಡ ಜಾಸ್ತಿಯಾಗುತ್ತದೆ. ಸೋರಿಕೆಯನ್ನು ತಡೆಯಲು ಅದು ನೆರವಾಗಬಲ್ಲುದು. ನಮ್ಮ ಸಂಗ್ರಹಾಗರ ನೆಲಮಟ್ಟದಿಂದ 150 ಮೀ ಆಳದಲ್ಲಿರುತ್ತದೆ. ಅದರ ಮೇಲೆ 15 ಮೀ.ನಷ್ಟು ಮಣ್ಣಿನ ಪದರ, 15 ಮೀ ಕಠಿಣ ಶಿಲೆ ಇರುವುದರಿಂದ ಅಪಾಯದ ಸಾಧ್ಯತೆ ಕಡಿಮೆ’ ಎಂದು ವಿವರಿಸಿದರು.

‘ಅನಿಲ ಸೋರಿಕೆಯಾದರೆ ನಿಯಂತ್ರಿಸಲು ಸ್ವಯಂಚಾಲಿತವಾಗಿ ವಾಲ್ವ್‌ ವ್ಯವಸ್ಥೆಗಳಿವೆ. ಸೋರಿಕೆಯಾದ ತಕ್ಷಣವೇ ಕೊಳವೆಗಳಿಗೆ ನೀರು ಹಾಯಿಸಿ, ಎರಡನೇ ಹಂತದ ವ್ಯವಸ್ಥೆಗಳಿವೆ. ಕನಿಷ್ಠ 50 ವರ್ಷ ಬಾಳಿಕೆ ಬರುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಲೋಹವನ್ನು ಬಳಸದ ಕಾರಣ ಇದರ ನಿರ್ವಹಣೆಯೂ ಸುಲಭ’ ಎಂದು ಅವರು ವಿವರಿಸಿದರು. 

ಎಚ್‌ಪಿಸಿಎಲ್‌ ಪ್ರಧಾನ ವ್ಯವಸ್ಥಾಪಕ ವೇಣು ಮಾಧವ್‌, ‘ಕ್ಷಿಪಣಿಗಳಿಗಿಂತಲೂ ಭೂಕಂಪದಿಂದ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಭೂಕಂಪನ ಸಾಧ್ಯತೆಗಳನ್ನು ಅವಲೋಕಿಸಿಯೇ ಅತ್ಯಂತ ಪ್ರಶಸ್ತವಾದ ಸ್ಥಳವನ್ನು ಈ ಯೋಜನೆಗೆ ಆರಿಸಿಕೊಂಡಿದ್ದೇವೆ. ಈ ಯೋಜನೆಯಡಿ 1.1 ಕಿ.ಮೀ ಉದ್ದದ ಸುರಂಗ ನಿರ್ಮಿಸಬೇಕಿದ್ದು, 900 ಮೀ.ನಷ್ಟು ಸುರಂಗ ಪೂರ್ಣಗೊಂಡಿದೆ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ಎಲ್‌ಪಿಜಿಗೆ ಬೇಡಿಕೆ ಅನೇಕ ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಎಚ್‌ಪಿಸಿಎಲ್‌ನ ಮಂಗಳೂರು ಎಲ್‌ಪಿಜಿ ಆಮದು ಸೌಕರ್ಯದಡಿ (ಎಂಎಲ್‌ಐಎಫ್‌)  31.8 ಲಕ್ಷ ಟನ್‌ ಎಲ್‌ಪಿಜಿ ನಿರ್ವಹಿಸಲಾಗುತ್ತಿದೆ. ಇದನ್ನು 2040ರ ವೇಳೆಗೆ 54.2 ಲಕ್ಷ ಟನ್‌ಗೆ ಹೆಚ್ಚಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇದು 2024ರ  ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ. ಇಲ್ಲಿಂದ ಬೆಂಗಳೂರು, ಹೈದರಾಬಾದ್‌ಗೂ ಎಲ್‌ಪಿಜಿಯನ್ನು ಕೊಳವೆಗಳ ಮೂಲಕ ರವಾನಿಸಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದರು. 

‘ಯೋಜನೆಯ ಆಸುಪಾಸಿನ ಕೆಲವು ಗ್ರಾಮಗಳ ಬಾವಿಗಳ ನೀರಿನಲ್ಲಿ ತೈಲದ ಅಂಶ, ಆರೋಗ್ಯ ಸಮಸ್ಯೆ ಕಾಣಿಸಿದೆ ಎಂದು ಎಂದು ಗ್ರಾಮಸ್ಥರು ದೂರಿದ್ದರು. ಇಂತಹ ಅಪಾಯಗಳ ಬಗ್ಗೆ ಪರಿಶೀಲಿಸಿದ್ದೀರಾ’ ಎಂದು ಸಮಿತಿಯ ಸದಸ್ಯರು ಪ್ರಶ್ನಿಸಿದರು.

‘ಈ ಸಂಗ್ರಹಾಗರದಲ್ಲಿ ಎಲ್‌ಪಿಜಿಯನ್ನು ಮಾತ್ರ ಸಂಗ್ರಹಿಸುತ್ತೇವೆ. ಯಾವುದೇ  ತೈಲವನ್ನು ಸಂಗ್ರಹಿಸುವುದಿಲ್ಲ. ಹಾಗಾಗಿ ಅಂತಹ ಪ್ರಮೇಯವೇ ಉದ್ಭವಿಸದು’ ಎಂದು ಎಚ್‌ಪಿಸಿಎಲ್‌ ಅಧಿಕಾರಿಗಳು ವಿವರಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT