ಮಂಗಳವಾರ, ಸೆಪ್ಟೆಂಬರ್ 21, 2021
21 °C

ಇಂದ್ರಪ್ರಸ್ಥ ವಿದ್ಯಾ ಸಂಸ್ಥೆ ವಿವೇಕಾನಂದವಿದ್ಯಾವರ್ಧಕ ಸಂಘದೊಂದಿಗೆ ವಿಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ವಿದ್ಯಾ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮೆರೆದಿದ್ದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾ ಸಂಸ್ಥೆಯು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದೊಂದಿಗೆ ವಿಲೀನಗೊಂಡು ಸೋಮವಾರ ಇದರ ಸಮರ್ಪಣಾ ಸಮಾರಂಭ ನಡೆಯಿತು.

ಇಂದ್ರಪ್ರಸ್ಥ ಚಾರಿಟಿ ಫೌಂಡೇಶನ್ ಅಧೀನದಲ್ಲಿದ್ದ ಇಂದ್ರಪ್ರಸ್ಥ ವಿದ್ಯಾ ಸಂಸ್ಥೆಯನ್ನು ಅದರ ಸಂಚಾಲಕ ಯು.ಎಸ್.ಎ. ನಾಯಕ್ ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ್ಕ ಪ್ರಭಾಕರ ಭಟ್‌ ಅವರಿಗೆ ದೀಪ ಹಸ್ತಾಂತರ ಮಾಡುವ ಮೂಲಕ ಸಮರ್ಪಣೆಗೊಳಿಸಿದರು.

ಯು.ಎಸ್.ಎ.ನಾಯಕ್ ಮಾತನಾಡಿ, ‘30 ವರ್ಷಗಳ ಹಿಂದೆ ಬಹಳಷ್ಟು ದೊಡ್ಡ ಕನಸು ಕಂಡು ಪ್ರಾರಂಭಿಸಿದ ವಿದ್ಯಾಸಂಸ್ಥೆಯು ಉತ್ತಮ ಸಾಧನೆ ಮಾಡಿದೆ. ಆರೋಗ್ಯ ಸಮಸ್ಯೆಯಿಂದಾಗಿ ವಿದ್ಯಾ ಸಂಸ್ಥೆಯನ್ನು ಮುನ್ನಡೆಸಲು ಅಸಾಧ್ಯವಾದ ಕಾರಣ ಗುಣಮಟ್ಟದೊಂದಿಗೆ ಕಾರ್ಯ ನಿರ್ವಹಿಸುವಂತಾಗಲು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಸಮರ್ಪಣೆಗೊಳಿಸಲು ಮುಂದಾಗಿದ್ದೇವೆ’ ಎಂದರು.

ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ‘ಜಗತ್ತಿಗೆ ಮಾರ್ಗದರ್ಶನ ನೀಡುವ ಜನಾಂಗದ ನಿರ್ಮಾಣ ಕಾರ್ಯ ವಿದ್ಯಾಸಂಸ್ಥೆಗಳ ಹೊಣೆಯಾಗಿದೆ. ದೇಶಕ್ಕಾಗಿ ಬದುಕುವ ಶಿಕ್ಷಣವನ್ನು ನೀಡುವತ್ತ ವಿವೇಕಾನಂದ ವಿದ್ಯಾವರ್ಧಕ ಸಂಘವು ಕಾರ್ಯೋನ್ಮುಖವಾಗಿದೆ. ಈ ದಿಶೆಯಲ್ಲಿ ಯು.ಎಸ್.ಎ. ನಾಯಕ್‌ ಅವರ ಆಶಯವನ್ನು ಈಡೇರಿಸುವಲ್ಲಿ ಶ್ರಮಿಸಲಾಗುವುದು. ಇಂದ್ರಪ್ರಸ್ಥ ವಿದ್ಯಾಲಯದ ಹೆಸರನ್ನು ಯಥಾವತ್ ಉಳಿಸಿಕೊಳ್ಳಲಾಗುತ್ತಿದ್ದು, ಅದಾಗ್ಯೂ ವಿದ್ಯಾ ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದ ಎಲ್ಲಾ ಶಿಕ್ಷಕರನ್ನು ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಯಥಾ ಪ್ರಕಾರ ಉಳಿಸಿಕೊಳ್ಳಲಾಗುವುದು’ ಎಂದು ಹೇಳಿದರು.

ಇಂದ್ರಪ್ರಸ್ಥ ಚಾರಿಟಿ ಫೌಂಡೇಶನ್ ಸದಸ್ಯರಾದ ವಸಂತಿ ನಾಯಕ್, ಅಮೃತಾ ನಾಯಕ್ ಇದ್ದರು.

ಶಾಸಕ ಸಂಜೀವ ಮಠಂದೂರು, ಡಾ.ಕಮಲಾ ಪ್ರಭಾಕರ್ ಭಟ್, ಡಾ.ಸುಧಾ ರಾವ್, ಡಾ.ಕೆ.ಜಿ. ಭಟ್, ಡಾ.ಸುಪ್ರೀತ್ ಲೋಬೊ, ಡಾ.ನಿರಂಜನ್ ರೈ, ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ, ಉಪ್ಪಿನಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಕೆ.ವಿ.ಪ್ರಸಾದ್, ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಯನಾ ಜಯಾನಂದ್ ಭಾಗವಹಿಸಿದ್ದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಸ್ವಾಗತಿಸಿ, ಯು.ಜಿ.ರಾಧಾ ವಂದಿಸಿದರು. ಇಂದ್ರಪ್ರಸ್ಥ ವಿದ್ಯಾಲಯದ ಕಲಾ ಶಿಕ್ಷಕ ಸದಾಶಿವ ಭಟ್ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು