ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬದುಕಲು ಕಲಿಸುವುದು ಸರ್ಕಾರಿ ಶಿಕ್ಷಣ

ಪ್ರೆಸ್‌ ಕ್ಲಬ್‌ ‘ಗೌರವ ಅತಿಥಿ’ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್
Published : 21 ಸೆಪ್ಟೆಂಬರ್ 2024, 5:42 IST
Last Updated : 21 ಸೆಪ್ಟೆಂಬರ್ 2024, 5:42 IST
ಫಾಲೋ ಮಾಡಿ
Comments

ಮಂಗಳೂರು: ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜದ ಎಲ್ಲ ಸ್ತರದವರು ಕಲಿಕೆಗೆ ಬರುತ್ತಾರೆ. ಹೀಗಾಗಿ, ಸರ್ಕಾರಿ ಶಿಕ್ಷಣವು ಬದುಕಲು ಕಲಿಸುತ್ತದೆ. ನನ್ನನ್ನು ಬೆಳೆಸಿದ್ದು ಕೂಡ ಸರ್ಕಾರಿ ಕಾಲೇಜು ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದರು.

ಶುಕ್ರವಾರ ಇಲ್ಲಿ ಮಂಗಳೂರು ಪ್ರೆಸ್‌ ಕ್ಲಬ್‌ನ ‘ಗೌರವ ಅತಿಥಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಗೀತಗಾರ ಆಗಬೇಕೆಂದು ಕನಸು ಕಂಡಿರಲಿಲ್ಲ.  ಪದವಿ ಶಿಕ್ಷಣಕ್ಕೆ ಮಂಗಳೂರಿನ ಸರ್ಕಾರಿ ಕಾಲೇಜಿಗೆ ಸೇರಿದ್ದೆ. ಒಮ್ಮೆ ಅವಮಾನ ಎದುರಿಸುವ ಸಂದರ್ಭ ಎದುರಾಯಿತು. ಅದೇ ನನ್ನನ್ನು ಹಾಡುಗಾರನಾಗಿ ಬೆಳೆಯಲು ಪ್ರೇರಣೆ ನೀಡಿತು. ಬದುಕಿನಲ್ಲಿ ಖುಷಿ ಮುಖ್ಯ. ನಾನು ಖುಷಿ ಅರಸಿ ಹೋದೆನೇ ವಿನಾ ಕನಸು ಬೆನ್ನತ್ತಿಲ್ಲ. ಆದರೆ, ಸಂಗೀತಕ್ಕೆ ಅಗಾಧ ಶಕ್ತಿ ಇದೆ. ಅದು ನನ್ನನ್ನು ಹೊಸ ಲೋಕಕ್ಕೆ ಎಳೆದೊಯ್ದು ಎಲ್ಲವನ್ನೂ ಕೊಟ್ಟಿತು’ ಎಂದರು.

‘ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ದುಕೊಂಡಿದ್ದ ನಾನು ಡಾಕ್ಟರ್ ಆಗಬೇಕು ಎಂದು ಅಮ್ಮ ಆಸೆ ಹೊತ್ತಿದ್ದರು. ಪದವಿ ಶಿಕ್ಷಣಕ್ಕೆ ಸರ್ಕಾರಿ ಕಾಲೇಜಿಗೆ ಸೇರಿದ್ದು ಬದುಕಿಗೆ ಹೊಸ ದಿಕ್ಕು ತೋರಿತು. ಆಗ ಡಾಕ್ಟರ್ ಆಗಲು ಸಾಧ್ಯವಾಗಲಿಲ್ಲ. ಈಗ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ದೊರೆತಿದ್ದು, ವೈಯಕ್ತಿಕ ಖುಷಿ ತಂದಿದ್ದಕ್ಕಿಂತ ಅಮ್ಮ ಆಸೆ ಕೈಗೂಡಿದ ಸಂತೃಪ್ತಿಯಿದೆ’ ಎಂದರು.

ಸಿನಿಮಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಶೋಷಣೆ ತಡೆಯಲು ಕೇರಳ ಮಾದರಿ ಸಮಿತಿ ರಚಿಸಬೇಕೆಂಬ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿಯೊಂದಕ್ಕೂ ಸಮಿತಿ ಮಾಡುತ್ತ ಹೋದರೆ ಕೆಲಸ ಮಾಡಲು ಆಗದು. ಸಿನಿಮಾ ಕ್ಷೇತ್ರ ಮಾತ್ರವಲ್ಲ, ಎಲ್ಲ ಕಡೆಗಳಲ್ಲೂ ಶೋಷಣೆ ಇದೆ. ನಕಲಿ ಪ್ರಕರಣಗಳೂ ನಡೆದಿವೆ, ಕೆಲಸ ಇದ್ದವರು ಯಾರೂ ಇಂತಹ ಒತ್ತಾಯ ಮಾಡಲ್ಲ’ ಎಂದರು.

ನಟ ದರ್ಶನ್ ಪ್ರಕರಣದ ಕುರಿತ ಪ್ರಶ್ನೆಗೆ, ‘ಅದು ವೈಯಕ್ತಿಕ ವಿಷಯ ಆಗಿದ್ದು, ಸಿನಿಮಾಕ್ಕೂ ಅದಕ್ಕೂ ಸಂಬಂಧವಿಲ್ಲ’ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಛಾಯಾಗ್ರಾಹಕ ಯಜ್ಞ ಮಂಗಳೂರು, ಇಬ್ರಾಹಿಂ ಅಡ್ಕಸ್ಥಳ ಇದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿದರು.
ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್ ಶೆಟ್ಟಿ ಬಿ.ಎನ್. ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT