ಶುಕ್ರವಾರ, ಆಗಸ್ಟ್ 6, 2021
22 °C
ನಗರದ ವಿವಿಧ ಸಂಸ್ಥೆಗಳಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ

ವಿಶ್ವ ಯೋಗ ದಿನ: ‘ಮನೆಯಲ್ಲಿ ಇರಿ; ಯೋಗದೊಂದಿಗೆ ಇರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಆಯುಷ್ ಇಲಾಖೆ, ಎಸ್‌ಡಿಎಂ ಉದ್ಯಮಾಡಳಿತ ಕಾಲೇಜು, ದೇಲಂಪಾಡಿ ಯೋಗ ಪ್ರತಿಷ್ಠಾನಗಳ ಆಶ್ರಯದಲ್ಲಿ ಸೋಮವಾರ ಆನ್‍ಲೈನ್ ಯೋಗ ದಿನಾಚರಣೆ ನೆರವೇರಿಸಲಾಯಿತು.

ವಿದ್ಯಾರ್ಥಿಗಳೂ ಸೇರಿದಂತೆ 150 ಯೋಗಾಸಕ್ತರು ದೇಶ–ವಿದೇಶಗಳಿಂದ ತಮ್ಮ ಕುಟುಂಬ ಸಮೇತ, ಗೋಪಾಲಕೃಷ್ಣ ದೇಲಂಪಾಡಿ ಅವರ ನಿರ್ದೇಶನದಲ್ಲಿ ಯೋಗ, ಪ್ರಾಣಾಯಾಮ ಹಾಗೂ ಯೋಗ ಮುದ್ರೆಗಳಲ್ಲಿ ಭಾಗವಹಿಸಿ ‘ಮನೆಯಲ್ಲಿ ಇರಿ ಯೋಗದೊಂದಿಗೆ ಇರಿ’ ಎಂಬ  ಕೋವಿಡ್‌ ಜಾಗೃತಿ ಸಹಿತ ಧ್ಯೇಯವಾಕ್ಯವನ್ನು ಸಾಕಾರಗೊಳಿಸಿದರು. 

ಕಾಲೇಜಿನ ಪ್ರಾಂಶುಪಾಲೆ ಅರುಣಾ ಪಿ. ಕಾಮತ್ ಮಾತನಾಡಿ, ನಿತ್ಯ 3 ಬಾರಿ ನಡೆಯುವ ಯೋಗ ತರಬೇತಿಯಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು. ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ, ಯೋಗದಿಂದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಿಸುವ ಅನುಭವ ಹಂಚಿಕೊಂಡರು. ವೀಣಾ ದೇಲಂಪಾಡಿ ಹಾಗೂ ಇತರ ಯೋಗ ಸಾಧಕರು ಕ್ಲಿಷ್ಟ ಯೋಗ ಭಂಗಿ ಪ್ರದರ್ಶಿಸಿದರು.

‘ಯೋಗ ಉಸಿರಾಟದಷ್ಟೇ ಸಹಜ’: ‘ಯೋಗ ಉಸಿರಾಟದಷ್ಟೇ ಸಹಜ ಮತ್ತು ದೈನಂದಿನ ಪ್ರಕ್ರಿಯೆಯಾಗಬೇಕು. ವಿಶೇಷವಾಗಿ ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ದೈಹಿಕ ಆರೋಗ್ಯ ಮತ್ತು ಅದಕ್ಕೆ ಪೂರಕವಾದ ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯಂತ ಸೂಕ್ತ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್‌. ಯಡಪಡಿತ್ತಾಯ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾಲಯ ಕಾಲೇಜು ಸೋಮವಾರ ಆಯೋಜಿಸಿದ್ದ ಆನ್‌ಲೈನ್‌ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವಿಶ್ವವಿದ್ಯಾಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ. ಕೃಷ್ಣ ಶರ್ಮಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಯೋಗವಿಜ್ಞಾನ ವಿಭಾಗದ ಸುಷ್ಮಿತಾ ಶೆಟ್ಟಿ ಪ್ರಾತ್ಯಕ್ಷಿಕೆ ನೀಡಿದರು. ಹಿರಿಯ ನಾಗರಿಕ ಜೆ.ವಿ. ಶೆಟ್ಟಿ, ಹಾಲಿ ವಿದ್ಯಾರ್ಥಿ ಪೃಥ್ವಿನಾರಾಯಣ ಭಟ್‌ ಯೋಗಾಸನಗಳನ್ನು ಪ್ರದರ್ಶಿಸಿದರು. ಪ್ರಾಂಶುಪಾಲೆ ಡಾ. ಅನಸೂಯ ರೈ, ಪ್ರಾಧ್ಯಾಪಕ ಡಾ.ಅಜಿತೇಶ್‌ ಎನ್‌.ಎಚ್‌. ಇದ್ದರು.

ಶಕ್ತಿ ಶಿಕ್ಷಣ ಸಂಸ್ಥೆ: ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಶಿಕ್ಷಕ-ಶಿಕ್ಷಕೇತರ ವೃಂದದವರಿಗೆ ಸೋಮವಾರ ಆನ್‍ಲೈನ್‍ನಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಪ್ರಸ್ತುತ ಜೀವನಶೈಲಿ ಒತ್ತಡ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಯೋಗಾಭ್ಯಾಸವು ಮಹತ್ವದ್ದಾಗಿದೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಯೋಗ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕೆ.ಕೃಷ್ಣ ಶರ್ಮಾ ತಿಳಿಸಿದರು.

ಶಕ್ತಿ ಶಿಕ್ಷಣ ಟ್ರಸ್ಟ್‌ ಕಾರ್ಯದರ್ಶಿ ಸಂಜಿತ್ ನಾಯ್ಕ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನಾವು ಪ್ರತಿದಿನ ಯೋಗವನ್ನು ಅಭ್ಯಾಸ ಮಾಡಬೇಕು’ ಎಂದರು.

ಶಕ್ತಿ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕಿ ಸುರೇಖಾ ನೇತೃತ್ವದಲ್ಲಿ ಯೋಗಾಸನ ನಡೆಯಿತು. ಆಡಳಿತಾಧಿಕಾರಿ ಡಾ.ಕೆ.ಸಿ.ನಾಯ್ಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ. ರಾಜರಾಮ್ ರಾವ್, ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ, ಸಮಾಜ ವಿಜ್ಞಾನ ಶಿಕ್ಷಕಿ ಭವ್ಯ ಅಮೀನ್‌, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸೇಂಟ್‌ ಅಲೋಶಿಯಸ್ ಕಾಲೇಜು: ಸಂಸ್ಥೆಯಲ್ಲಿ ಏಳನೇ ವರ್ಷದ ಯೋಗ ದಿನವನ್ನು ದೇಲಂಪಾಡಿ ಯೋಗ ಪ್ರತಿಷ್ಠಾನದ ಸಹಯೋಗದೊಂದಿಗೆ ಆನ್‌ಲೈನ್‌ನಲ್ಲಿ ಆಚರಿಸಲಾಯಿತು.

ಕಾಲೇಜಿನ ವಿದ್ಯಾರ್ಥಿ ಚಟುವಟಿಕೆ ಕೋಶ ಹಾಗೂ ಸ್ಟೂಡೆಂಟ್ ಕೌನ್ಸಿಲ್, ಎನ್‌ಸಿಸಿ, ಎನ್ಎಸ್ಎಸ್, ಯೂತ್ ರೆಡ್ ಕ್ರಾಸ್, ಯೋಗ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಸಹಯೋಗದಲ್ಲಿ ನಡೆಯಿತು.

ಯೇನೆಪೋಯ ದಂತವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಸುಧೀಂದ್ರ ಪ್ರಭು ಮಾತನಾಡಿ, ‘ಸ್ಟ್ರೆಸ್, ಮೆಡಿಟೇಶನ್, ಮಿತ್ಸ್ ಹಾಗೂ ವಿಜ್ಞಾನ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಹಳೆ ವಿದ್ಯಾರ್ಥಿ, ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಯೋಗದಿನದ ಸಂದೇಶ  ತಿಳಿಸಿ, ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಡಾ.ಈಶ್ವರ ಭಟ್, ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಆಲ್ವಿನ್ ಡೇಸ, ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಪಲೋಮ ರಾಡ್ರಿಗಸ್, ವಿದ್ಯಾರ್ಥಿನಿಯರಾದ ಭಾಷಾಸರಸ್ವತಿ, ರೋಶಲ್ ಪಾಯ್ಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು