ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಮೇಲೆ ದಾಳಿ; ದೇಶದಲ್ಲೀಗ ಸಾಮಾಜಿಕ ಭಯೋತ್ಪಾದನೆ ಯುಗ: ನಾಗಮೋಹನ್ ದಾಸ್

Last Updated 1 ಡಿಸೆಂಬರ್ 2018, 6:54 IST
ಅಕ್ಷರ ಗಾತ್ರ

ಮಂಗಳೂರು: ದೇಶದಲ್ಲಿ ಈಗ ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆ ಯುಗ ಆರಂಭವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಕಳವಳ ವ್ಯಕ್ತಪಡಿಸಿದರು.

ಅಭಿಮತ ಸಂಘಟನೆಯು ಮಂಗಳೂರಿನ ಶಾಂತಿ ಕಿರಣದಲ್ಲಿ ಆಯೋಜಿಸಿರುವ ಎರಡು ದಿನಗಳ ಜನನುಡಿ- 2018 ಅನ್ನು ಎಚ್.ಎನ್.ನಾಗಮೋಹನ ದಾಸ್ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಸಂಪತ್ತಿನ ಶೇಖರಣೆಗೆ ಸರ್ಕಾರವೇ ಬೆಂಬಲ ನೀಡುತ್ತಿದೆ. ಜನರ ಸಂಪತ್ತಿನ ರಕ್ಷಣೆ ಮಾಡಬೇಕಾದ ಬ್ಯಾಂಕ್‌ಗಳು ಲೂಟಿಕೋರರ ಬೆಂಬಲಕ್ಕೆ ನಿಂತಿವೆ ಎಂದರು.

ಸಂವಿಧಾನೇತರ ಶಕ್ತಿಗಳು ಜನರ ಬದುಕನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಏಕ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿರುವ ಈ ಶಕ್ತಿಗಳು ಬಹುತ್ವವನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ. ಆಹಾರ, ಉಡುಗೆ, ಸಂಚಾರ ಎಲ್ಲವನ್ನೂ ನಿಯಂತ್ರಿಸುವ ಪ್ರಯತ್ನಕ್ಕೆ ಅಧಿಕಾರದಲ್ಲಿ ಕುಳಿತವರು ಬೆಂಬಲಿಸುತ್ತಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

'ಹಿಂದೆ ಸಂವಿಧಾನೇತರ ಶಕ್ತಿಗಳು ಕ್ರೈಸ್ತರ, ಮುಸ್ಲಿಮರ, ದಲಿತರ ಮೇಲೆ ದಾಳಿ ಮಾಡಿದವು. ಆಗ ಜನರು ಸುಮ್ಮನಿದ್ದರು. ಆದರೆ ಈಗ ಸಂವಿಧಾನದ ಮೇಲೆ ಆ ಶಕ್ತಿಗಳು ದಾಳಿ ಮಾಡುತ್ತಿವೆ. ಇದರಿಂದ ಇಡೀ ದೇಶ ಬಿಕ್ಕಟ್ಟಿನಲ್ಲಿದೆ' ಎಂದರು.

‘ನ್ಯಾಯಾಂಗದ ಮೇಲೂ ಬಾಹ್ಯ ಒತ್ತಡ ಹೇರಲಾಗುತ್ತಿದೆ. ಇದೇ ರೀತಿಯ ತೀರ್ಪು ನೀಡಬೇಕು, ವಿರುದ್ಧವಾದ ತೀರ್ಪು ನೀಡಿದರೆ ಒಪ್ಪುವುದಿಲ್ಲ ಎಂಬ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಅಯೋಧ್ಯೆಯ ಪ್ರಕರಣದಲ್ಲೂ ಹೀಗೆಯೇ ಮಾಡಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾಪ್ರಭುತ್ವ ಆಧಾರ ಸ್ತಂಭಗಳಂತೆ ಇರುವ ಸಂಸ್ಥೆಗಳನ್ನು ನಾಶ ಮಾಡುವ ಪ್ರಯತ್ನ ಆರಂಭವಾಗಿದೆ. ಭಿನ್ನ ಧ್ವನಿಗಳನ್ನು ಅಡಗಿಸಲು ಅಧಿಕಾರವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದರು.

ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆಗೆ ಕಡಿವಾಣ ಹಾಕದಿದ್ದರೆ ದೇಶ ಅರಾಜಕತೆಯತ್ತ ಸಾಗುವ ಸಂಭವವಿದೆ. ಆಗ ಇಡೀ ರಾಷ್ಟ್ರ ಮೂಲಭೂತವಾದಿಗಳು ಮತ್ತು ಕೋಮುವಾದಿಗಳ ಕೈಗೆ ಸಿಲುಕುತ್ತದೆ. ಇಂತಹ ಅಪಾಯ ಎದುರಾಗದಂತೆ ಜನರು ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.

ಬಹುಭಾಷಾ ನಟ ಪ್ರಕಾಶ್ ರೈ, ಲೇಖಕಿ ಡಾ.ಹಸೀನಾ ಖಾದ್ರಿ, ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ದೇವದಾಸ್ ವೇದಿಕೆಯಲ್ಲಿದ್ದಾರೆ. ಬರಹಗಾರ್ತಿ ವಿನಯಾ ಒಕ್ಕುಂದ ಅಧ್ಯಕ್ಷತೆ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT