ಮಂಗಳೂರು: ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿ ಇದೇ 30ರಂದು ಪುತ್ತೂರಿನ ದರ್ಬೆ ವೃತ್ತದಿಂದ ಕಿಲ್ಲೆ ಮೈದಾನದವರೆಗೆ ‘ಜನಾರೋಗ್ಯಕ್ಕಾಗಿ ನಾವು’ ಜಾಥಾ ಹಾಗೂ ಸಮಾವೇಶ ಏರ್ಪಡಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಪುತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಗೌರವಾಧ್ಯಕ್ಷ ಅಣ್ಣ ವಿನಯಚಂದ್ರ, ‘ಪುತ್ತೂರು, ಸುಳ್ಯ, ಕಡಬ ತಾಲ್ಲೂಕುಗಳ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಬೇಕಾದ ಸ್ಥಿತಿ ಇದೆ ಇದೆ. ಇದನ್ನು ತಪ್ಪಿಸಲು ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು. ಇದಕ್ಕಾಗಿ ಸೇಡಿಯಾಪುವಿನಲ್ಲಿ 40 ಎಕರೆ ಜಾಗವನ್ನು ಶಕುಂತಳಾ ಶೆಟ್ಟಿ ಅವರು ಶಾಸಕಿಯಾಗಿದ್ದಾಗ ಕಾಯ್ದಿರಿಸಲಾಗಿದೆ. ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 7 ಎಕರೆ ಜಾಗವನ್ನು ಮೀಸಲಿಡಲಾಗಿದೆ: ಎಂದರು.
‘ಶಿಕ್ಷಣ, ಆರೋಗ್ಯ ಹಾಗೂ ನ್ಯಾಯ ಜನರಿಗೆ ಉಚಿತವಾಗಿ ಸಿಗಬೇಕು. ದುರದೃಷ್ಟವಶಾತ್ ಈ ಮೂರು ಕ್ಷೇತ್ರಗಳು ಜನರ ಪಾಲಿಗೆ ದುಬಾರಿ ಆಗಿಬಿಟ್ಟಿವೆ. ನ್ಯಾ.ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಈ ಕುರಿತು ರಾಷ್ಟ್ರಾದ್ಯಂತ ಜನಾಂದೋಲನ ರೂಪಿಸಲು ಸಿದ್ಧತೆ ನಡೆದಿದೆ’ ಎಂದರು.
‘ಜಿಲ್ಲೆಯ ಅನೇಕ ಸಮಸ್ಯೆಗಳಿಗೆ ಜನಾಂದೋಲನದ ಮೂಲಕ ಪರಿಹಾರ ಕಂಡುಕೊಂಡ ಉದಾಹರಣೆಗಳಿವೆ. ಆದರೆ ಇತ್ತೀಚೆಗೆ ರಾಜಕೀಯ ಪಕ್ಷಗಳೂ ಜನಾಂದೋಲನದ ಮೂಲಕ ರೂಪುಗೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷರಾಗಿರುವ ತಜ್ಞ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ‘ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಕನಸು ಕಂಡಿದ್ದ ನಾಯಕ ಡಾ.ವಿ.ಎಸ್.ಆಚಾರ್ಯ ಅವರ ತವರು ಜಿಲ್ಲೆಯಾದ ಉಡುಪಿಯಲ್ಲೇ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ. ಉಭಯ ಜಿಲ್ಲೆಗಳ ಜನರು ಸತತವಾಗಿ ಬಿಜೆಪಿಯನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಆದರೂ ಜಿಲ್ಲೆಯ ಜನರ ಬೇಡಿಕೆ ಈಡೇರಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ’ ಎಂದರು.
‘ಸರ್ಕಾರಿ ಆಸ್ಪತ್ರೆಗಳನ್ನು ಬಳಸಿ ಖಾಸಗಿಯವರು ವೈದ್ಯಕೀಯ ಕಾಲೇಜು ನಡೆಸಲು ಅವಕಾಶ ನೀಡುವುದು ಸರಿಯಲ್ಲ. ಖಾಸಗಿಯವರಿಗೆ ಲಾಭ ಗಳಿಕೆಯೇ ಮುಖ್ಯ. ಈ ಹಿಂದೆ ರಾಜ್ಯದ 42 ಆರೋಗ್ಯ ಕೇಂದ್ರಗಳನ್ನು ನಡೆಸುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಲಾಗಿತ್ತು. ಅವುಗಳಲ್ಲಿ 12 ಅನ್ನು ಬಿಟ್ಟು ಉಳಿದವುಗಳೆಲ್ಲವನ್ನೂ ಈಗ ಸರ್ಕಾರವೇ ನಡೆಸುತ್ತಿದೆ. ಆಯುಷ್ಮಾನ್ ಭಾರತ್ ಯೊಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬಯಸುವ ಎಲ್ಲರಿಗೂ ಚಿಕಿತ್ಸೆ ಸಿಗಬೇಕು. ಆದರೆ, ಖಾಸಗಿ ಆಸ್ಪತ್ರೆಗಳು ಈ ಕೋಟಾಕ್ಕೆ ಬೆರಳೆಣಿಕೆಯಷ್ಟು ಹಾಸಿಗೆ ಕಾಯ್ದರಿಸಿ, ಮಿಕ್ಕ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುತ್ತಿವೆ. ಈ ಯೋಜನೆ ಅಡಿ ಚಿಕಿತ್ಸೆಗೆ ಅರ್ಹವಾದ ಎಲ್ಲ ರೋಗಿಗಳಿಗೆ ಚಿಕಿತ್ಸೆ ಸಿಗದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.
‘ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಏ. 1ರಂದು ಮಲ್ಪೆ ಗಾಂಧಿ ಪ್ರತಿಮೆ ಬಳಿ ‘ನಾವು ಇನ್ನೂ ಮೂರ್ಖರೇ’ ಎಂದು ಪ್ರಶ್ನಿಸಿ ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.