ಮಂಗಳೂರು: ನಗರದ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಶನಿವಾರ ನಡೆದ ಉದ್ಯೋಗ ಮೇಳದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡರು. 55ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.
ಬಿಲ್ಲವ ಎಂಪ್ಲಾಯಿಸ್ ವೆಲ್‌ಫೇರ್ ಸೊಸೈಟಿ ಮತ್ತು ಯುವ ವಾಹಿನಿ ಕೇಂದ್ರ ಸಮಿತಿ ಮತ್ತು ಯುಎನ್‍ಡಿಪಿ- ಎಸ್‍ಎಪಿ ಪ್ರಾಜೆಕ್ಟ್ ಕೋಡ್ ಉನ್ನತಿ ವತಿಯಿಂದ ಆಯೋಜಿಸಿದ್ದ ಮೇಳವನ್ನು ಬಿಲ್ಲವ ಎಂಪ್ಲಾಯಿಸ್ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಅಶೋಕ್ ಕುಮಾರ್ ಉದ್ಘಾಟಿಸಿದರು.
‘ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಉದ್ಯೋಗ ಒದಗಿಸುವಲ್ಲೂ ನೆರವಾಗಬೇಕು. ‘ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ’ ಎನ್ನುವ ನಾರಾಯಣಗುರುಗಳ ಸಂದೇಶದಂತೆ ನಮ್ಮ ಸೊಸೈಟಿ ಮತ್ತು ಯುವವಾಹಿನಿ ಕಾರ್ಯನಿರ್ವಹಿಸುತ್ತಿವೆ’ ಎಂದರು.
ಗೋಕರ್ಣನಾಥೇಶ್ವರ ಕಾಲೇಜಿನ ಸಂಚಾಲಕ ವಸಂತ ಕಾರಂದೂರು ಮಾತನಾಡಿ, ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉದ್ಯೋಗ ಮೇಳಗಳು ಉತ್ತಮ ವೇದಿಕೆಯಾಗಿವೆ ಎಂದರು.
ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ. ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಶಿಕ್ಷಣದ ಕೇಂದ್ರವಾಗಿದೆ. ಕೆಲವರು ಇಲ್ಲೇ ಉದ್ಯೋಗ ಬಯಸಿದರೆ, ಕೆಲವರು ಹೊರ ದೇಶಗಳಿಗೆ ಅವಕಾಶವನ್ನು ಹುಡುಕಿಕೊಂಡು ಹೋಗುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು, ಸರ್ಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು ಎಂದರು.
ಪ್ರಾಂಶುಪಾಲೆ ಆಶಾಲತಾ ಸುವರ್ಣ, ಯುಎನ್‍ವಿ ಜಿಲ್ಲಾ ಸಂಚಾಲಕ ಶಿವಕುಮಾರ್ ಸ್ವಾಮಿ ಕೆ.ಎಂ. ಇದ್ದರು.
ಯುವ ವಾಹಿನಿ ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ನವಾನಂದ ಸ್ವಾಗತಿಸಿದರು. ಪ್ಲೇಸ್‌ಮೆಂಟ್ ಅಧಿಕಾರಿ ಮಿಥುನ್‍ಚಂದ್ರ ವಂದಿಸಿದರು. ಶೇಷಪ್ಪ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.