ಉಳ್ಳಾಲ: ರೌಡಿಶೀಟರ್ ಆಗಿದ್ದ ‘ಟಾರ್ಗೆಟ್ ಇಲ್ಯಾಸ್’ ಕೊಲೆ ಪ್ರಕರಣದ ಆರೋಪಿಯನ್ನು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪುವಿನಲ್ಲಿ ಅಟ್ಟಾಡಿಸಿಕೊಂಡು ಹೋಗಿ ತಲವಾರಿನಿಂದ ಕಡಿದು ಭಾನುವಾರ ರಾತ್ರಿ ಹತ್ಯೆ ಮಾಡಲಾಗಿದೆ.
'ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ ಅಲಿಯಾಸ್ ಕಡಪ್ಪುರ ಸಮೀರ್ (33) ಹತ್ಯೆಯಾದ ವ್ಯಕ್ತಿ. ದರೋಡೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಆತ ವಾರದ ಹಿಂದಷ್ಟೇ ಬಿಡುಗಡೆಗೊಂಡಿದ್ದ. ಪೂರ್ವ ದ್ವೇಷದಿಂದ ಈ ಕೊಲೆ ನಡೆಸಲಾಗಿದೆ. ಸಮೀರ್ ಕೂಡ ಒಂಬತ್ತು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಆತನೂ ರೌಡಿ ಶೀಟರ್ ಆಗಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
’ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಸಮೀರ್ ತಾಯಿಯ ಜೊತೆಗೆ ಊಟಕ್ಕೆ ಬಂದಿದ್ದ. ಆತನಿದ್ದ ಕಾರನ್ನು ಎದುರಾಳಿಗಳ ತಂಡವು ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿತ್ತು. ಸಮೀರ್ ಕಾರಿನಿಂದ ಇಳಿಯುತ್ತಿದ್ದಂತೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ. ಅಪಾಯವನ್ನು ಅರಿತ ಸಮೀರ್ ತಕ್ಷಣ ಸ್ಥಳದಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ, ನಾಲ್ಕೈದು ಮಂದಿ ಇದ್ದ ತಂಡವು ಆತನನ್ನು ಕಲ್ಲಾಪು ಜಂಕ್ಷನ್ನಿನಿಂದ 500 ಮೀ ದೂರದಲ್ಲಿರುವ ವಿ.ಕೆ.ಫರ್ನಿಚರ್ ಕಟ್ಟಡದವರೆಗೂ ಅಟ್ಟಾಡಿಸಿಕೊಂಡು ಹೋಗಿತ್ತು. ಅಲ್ಲಿ ತಲವಾರಿನಿಂದ ಕಡಿದು ಆತನ ಹತ್ಯೆ ನಡೆಸಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ರೌಡಿಶೀಟರ್ ‘ಟಾರ್ಗೆಟ್ ಇಲ್ಯಾಸ್’ ಎಂಬಾತನನ್ನು ಜೆಪ್ಪುವಿನ ಫ್ಲಾಟ್‍ವೊಂದರಲ್ಲಿ 2018ರಲ್ಲಿ ಹತ್ಯೆ ಮಾಡಲಾಗಿತ್ತು. ದಾವೂದ್, ಸಮೀರ್, ರಿಯಾಜ್, ನಮೀರ್, ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಜೀರ್, ನೌಷಾದ್, ಅಜ್ಗರ್ ಆಲಿ ಈ ಪ್ರಕರಣದ ಆರೋಪಿಗಳಾಗಿದ್ದರು. ಪ್ರಕರಣದಲ್ಲಿ ಸಮೀರ್ ಎರಡನೇ ಆರೋಪಿಯಾಗಿದ್ದ. ದಾವೂದ್ ಮತ್ತು ಸಮೀರ್ ನೇರವಾಗಿ ಫ್ಲ್ಯಾಟ್ಗೆ ನುಗ್ಗಿ ಇಲ್ಯಾಸ್ ಹತ್ಯೆ ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇಲ್ಯಾಸ್ ಬಂಧುವಿನಿಂದ ಸಂಚು?:
ಟಾರ್ಗೆಟ್ ಇಲ್ಯಾಸ್ ಹತ್ಯೆಗೆ ಪ್ರತೀಕಾರವಾಗಿ ಆತನ ಬಾಮೈದ (ಪತ್ನಿಯ ಸಹೋದರ) ಸಮೀರ್ ಕೊಲೆಗೆ ಹಿಂದೊಮ್ಮೆ ಯತ್ನಿಸಿದ್ದ. ಇದು ಪೊಲೀಸರ ಗಮನಕ್ಕೆ ಬಂದಿತ್ತು. ಇಲ್ಯಾಸ್ ಬಾಮೈದನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು.
‘ಇಲ್ಯಾಸ್ ಹತ್ಯೆಗೆ ಪ್ರತೀಕಾರವಾಗಿ ಬೆಂಗಳೂರಿನಲ್ಲಿರುವ ಆತನ ಹತ್ತಿರದ ಸಂಬಂಧಿಯೇ ಸಮೀರ್ ಕೊಲೆಗೆ ಸಂಚು ನಡೆಸಿರುವ ಸುಳಿವು ಸಿಕ್ಕಿದೆ. ಕೆ.ಸಿ.ರೋಡಿನ ಇಬ್ಬರು ಹಾಗೂ ಬೇರೆ ಜಿಲ್ಲೆಯ ಇನ್ನಿಬ್ಬರ ಜೊತೆ ಸೇರಿ ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ. ಪ್ರಕರಣದಲ್ಲಿ ಇಬ್ಬರನ್ನು ಸಿಸಿಬಿ ಮತ್ತು ಎಸಿಪಿ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೀಲ್ಸ್ ಹುಚ್ಚಿನಿಂದ ಜೀವಕ್ಕೆ ಕುತ್ತು? ಸಮೀರ್ (33) ಥಾರ್ ಜೀಪ್ ಖರೀದಿಸಿದ್ದು ಈ ಕುರಿತ ರೀಲ್ಸ್‌ಗಳನ್ನು ಆತ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ. ಇಲ್ಯಾಸ್ ಹತ್ಯೆಯ ಪ್ರತೀಕಾರಕ್ಕೆ ಸಂಚು ರೂಪಿಸಿದ್ದ ತಂಡವು ಇದನ್ನು ಗಮನಿಸಿತ್ತು. ತಂಡವು ನಾಲ್ಕು ದಿನಗಳಿಂದ ಸಮೀರ್ ಚಲನವಲನ ಗಮನಿಸಿದೆ. ಉಡುಪಿ ಜಿಲ್ಲೆಯ ನೊಂದಣಿ ಹೊಂದಿದ್ದ ಕಾರಿನಲ್ಲಿ ಬಂದು ಕಲ್ಲಾಪು ಬಳಿ ಹತ್ಯೆ ನಡೆಸಿದೆ. 2024ರ ಜೂನ್ 9 ರಂದು ಉಳ್ಳಾಲದಲ್ಲಿ ಉದ್ಯಮಿ ದರೋಡೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ಸಮೀರ್ ಹಾಗೂ ಆತನ ತಂಡದವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಒಂದೂವರೆ ತಿಂಗಳು ಜೈಲಿನಲ್ಲಿದ್ದ ಸಮೀರ್ ವಾರದ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ. ಬಿಡುಗಡೆ ಸಂದರ್ಭ ಆತನಿಗೆ ಜೈಲಿನ ಗೇಟಿನ ಎದುರೇ ಅದ್ದೂರಿ ಸ್ವಾಗತ ಕೋರಲಾಗಿತ್ತು. ಇದರ ರೀಲ್ಸ್‌ಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಅಂದು ಪತ್ನಿ ಎದುರು ಇಂದು ತಾಯಿ ಎದುರು! 2018ರಲ್ಲಿ ಟಾರ್ಗೆಟ್ ಇಲ್ಯಾಸ್ ನನ್ನು ಜೆಪ್ಪು ಕುಡುಪಾಡಿಯ ಫ್ಲ್ಯಾಟ್‌ನಲ್ಲಿ ಆತನ ಪತ್ನಿ ಎದುರೇ ದಾವೂದ್ ಮತ್ತು ಸಮೀರ್ ನೇತೃತ್ವದ ತಂಡ ಹತ್ಯೆ ನಡೆಸಿತ್ತು. ಆ ಕೊಲೆಯ ಆರೋಪಿ ಸಮೀರ್‌ನನ್ನು ಆತನ ತಾಯಿ ಎದುರೇ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳ್ಳಸಾಗಣೆಯಾದ ಚಿನ್ನಕ್ಕೆ ಕನ್ನ? ‘ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುವರು ಊರಿಗೆ ಮರಳಿದ ನಂತರ ಅವರನ್ನು ಅಪಹರಿಸಿ ಚಿನ್ನ ದೋಚುವ ಕೃತ್ಯದಲ್ಲಿ ಸಮೀರ್ ಭಾಗಿಯಾಗಿದ್ದ ಎಂಬ ಆರೋಪವೂ ಇದೆ. ಉಪ್ಪಳದಲ್ಲಿ ನಡೆದ ಅಪಹರಣ ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿತ್ತು. ಈ ಸಂಬಂಧ ಸಮೀರ್ ಬಂಧನವಾಗಿತ್ತು. ಆದರೆ ಆತನಿಂದ ದರೋಡೆಯಾದ ಎಲ್ಲ ಚಿನ್ನವನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇದರ ಮಾರಾಟದಿಂದ ಗಳಿಸಿದ್ದ ಆದಾಯದಿಂದ ಸಮೀರ್ ಶೋಕಿ ಜೀವನ ಆರಂಭಿಸಿದ್ದ. ಫ್ಲ್ಯಾಟ್ ಹಾಗೂ ಥಾರ್ ಜೀಪ್ ಖರೀದಿಸಿದ್ದ’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.